ಬರನಿರ್ವಹಣೆಯಲ್ಲಿ ಸರ್ಕಾರ ವಿಫಲ : ಅಂಚೆ ಮಂಜುನಾಥ ಆರೋಪ

ಹೂವಿನಹಡಗಲಿ

        ಬರ ಸಮರ್ಪಕ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲಗೊಂಡಿವೆ ಎಂದು ರೈತ ಸಂಘದ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಅಂಚೆ ಮಂಜುನಾಥ ಆರೋಪಿಸಿದರು.

        ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರಪೀಡಿತ ತಾಲೂಕೆಂದು ಹೂವಿನಹಡಗಲಿ ಘೋಷಣೆಗೊಂಡು 6 ತಿಂಗಳು ಕಳೆದರು ವಿಶೇಷವಾಗಿ ಬರಗಾಲಕ್ಕೆ ಸಂಬಂಧಪಟ್ಟಂತೆ ಯಾವುದೇ ಯೋಜನೆಗಳು ಜಾರಿಗೊಂಡಿಲ್ಲ ಎಂದ ಅವರು, ದುಡಿಯುವ ಕೂಲಿ ಕಾರ್ಮಿಕರಿಗೆ ಸಮರ್ಪಕವಾದ ಕೆಲಸವನ್ನು ನೀಡುವಲ್ಲಿ ವಿಫಲಗೊಂಡಿದ್ದಾರೆ ಎಂದರು.

        ಅಲ್ಲದೇ, ದನಕರುಗಳಿಗೆ ನೀರು ಮತ್ತು ಮೇವಿನ ಕೊರತೆ ಕೂಡಾ ಕಂಡುಬಂದಿದ್ದು, ವಿಪರ್ಯಾಸವೆಂದರೆ ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆಯವರು ಈ ತಾಲೂಕಿನಲ್ಲಿ ಮೇವಿನ ಮತ್ತು ಕುಡಿಯುವ ನೀರಿನ ಕೊರತೆ ಇಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

         ಈ ವರದಿ ಲೋಪದಿಂದ ಕೂಡಿದ್ದು, ನಾವು ರೈತರನ್ನು ಮುಖಾಮುಖಿಯಾಗಿ ಭೇಟಿಯಾಗಿ ಚರ್ಚಿಸಿದಾಗ ದನಕರುಗಳಿಗೆ ನೀರು ಮತ್ತು ಮೇವಿನ ಕೊರತೆ ಇರುವುದರಿಂದಲೇ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಿ, ದನಕರುಗಳಿಗೆ ನೀರು ಮತ್ತು ಮೇವಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಮತ್ತು ಗ್ರಾಮ ಪಂಚಾಯಿತಿಗೆ ವ್ಯಾಪ್ತಿಗೆ ಒಂದರಂತೆ ಗೋಶಾಲೆಗಳನ್ನು ತೆರೆದು ಈಗಾಗಲೇ ನಿರ್ಮಾಣಗೊಂಡಿರುವ ಕೃಷಿ ಹೊಂಡಗಳಿಗೆ ರೈತರ ಖಾಸ ಪಂಪಸೆಟ್‍ಗಳಿಂದ ನೀರನ್ನು ಪಡೆದು ತುಂಬಿಸಿದರೆ ದನಕರುಗಳಿಗೆ ನೀರು ಕುಡಿಯಲು ಅನುಕೂಲವಾಗುತ್ತದೆ ಎಂದರು.

          ರೈತರ ಬೆಳೆನಷ್ಟದ ಪರಿಹಾರ ಇದುವರೆಗೂ ಕೂಡಾ ಬಂದಿಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದತ್ತ ಬೆರಳುಮಾಡಿ ತೋರಿಸುತ್ತಿರುವುದು ದುರಾದೃಷ್ಟಕರ ಸಂಗತಿಯಾಗಿದೆ. ಶೀಘ್ರದಲ್ಲಿಯೇ ಬೆಳೆನಷ್ಟ ಪರಿಹಾರವನ್ನು ನೀಡದೇ ಹೋದರೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

        ಇನ್ನುಳಿದಂತೆ ರೈತರ ಪಂಪಸೆಟ್‍ಗಳಿಗೆ ವಿದ್ಯುತ್ ಸಮರ್ಪಕವಾಗಿ ನೀಡದೇ ಇರುವುದರಿಂದ ಅಲ್ಲಿಯೂ ಕೂಡಾ ರೈತ ನಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ಬಂದಿದ್ದು, ಸರ್ಕಾರ ಹಗಲಿನಲ್ಲಿಯೇ ರೈತರ ಪಂಪಸೆಟ್‍ಗಳಿಗೆ 7 ತಾಸು ವಿದ್ಯುತ್ ಸರಬರಾಜು ಮಾಡಬೇಕೆಂದು ಆಗ್ರಹಿಸಿದರು.

          ಸಂದರ್ಭದಲ್ಲಿ ಮುಖಂಡರಾದ ವಿ.ಬಿ.ಸೋಮಶೇಖರಪ್ಪ, ಗಂಗಾಧರ, ಉತ್ತಂಗಿ ಬಸವರಾಜಪ್ಪ, ಶಿವನಗೌಡ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link