ತುಮಕೂರು
ಮಧುಗಿರಿ ಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅವರು ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಮೈದಾನದಲ್ಲಿ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಹಾಗೂ ತುಮುಲ್ ಸಹಕಾರ ದೊಂದಿಗೆ ನಡೆದ ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಜಿಲ್ಲೆಯ ಸಚಿವರಾದ ಡಾ. ಜಿ. ಪರಮೇಶ್ವರ ಹಾಗೂ ಕೆ. ಎನ್. ರಾಜಣ್ಣ ಅವರ ಪ್ರತ್ಯೇಕ ಜಿಲ್ಲೆ ಮನವಿಗೆ ಸ್ಪಂದಿಸಿ ಮಾತನಾಡಿದರು .
ಮಧುಗಿರಿ ಉಪ ವಿಭಾಗವನ್ನು ಪ್ರತ್ಯೇಕ ಜಿಲ್ಲೆ ಮಾಡಲು ಕೊರಟಗೆರೆ, ಮಧುಗಿರಿ ಸಚಿವರು ಪಾವಗಡ, ಶಿರಾಶಾಸಕರ ಸಹಮತವಿದೆ. ಅದೇ ರೀತಿ ತಿಪಟೂರು ಉಪ ವಿಭಾಗವನ್ನು ಪ್ರತ್ಯೇಕ ಜಿಲ್ಲಾ ಕೇಂದ್ರ ಮಾಡಬೇಕೆಂದು ಷಡಾಕ್ಷರಿ ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ನಾವು ಸುಮ್ಮನೆ ಏನೂ ಹೇಳಲು ಸಾಧ್ಯವಿಲ್ಲ. ನಮ್ಮ ದು ನುಡಿದಂತೆ ನಡೆವ ಸರ್ಕಾರ. ಮಧುಗಿರಿ ಉಪ ವಿಭಾಗ ಪ್ರತ್ಯೇಕ ಜಿಲ್ಲಾ ಘೋಷಣೆ ವಿಷಯವನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಪುನರುಚ್ಚರಿಸಿದರು.
54 ಲಕ್ಷ ಮಕ್ಕಳಿಗೆ ಕ್ಷೀರ ಭಾಗ್ಯದಿಂದ ನೆರವಾಗಿದೆ
ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗಾಗಿ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು 54 ಲಕ್ಷಕ್ಕೂ ಅಧಿಕ ಮಕ್ಕಳು ಪೌಷ್ಠಿಕ ಆಹಾರವನ್ನು ಪ್ರತಿ ದಿನ ಸೇವಿಸುವಂತಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ. ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆವು. ಹತ್ತು ವರ್ಷಗಳಿಂದ ಪ್ರತೀ ದಿನ ಲಕ್ಷಾಂತರ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡಿದ್ದೇವೆ. ಹೀಗಾಗಿ ನಮ್ಮ ಹೆಮ್ಮೆಯ ಈ ಯೋಜನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ ಎಂದು ವಿವರಿಸಿದರು.
ಬಡವರು, ಮಧ್ಯಮವರ್ಗದವರ ಬದುಕಿಗೆ ಅನುಕೂಲ ಆಗುವ ಕಾರ್ಯಕ್ರಮವನ್ನು ನಾವು ರೂಪಿಸಿದರೆ ಬಿಜೆಪಿ ಯವರು ಅಡ್ಡಗಾಲು ಹಾಕಿ ಕಾರ್ಯಕ್ರಮ ವಿಫಲಗೊಳಿಸಲು ಯತ್ನಿಸಿದರು. ಸ್ವತಃ ಪ್ರಧಾನಿ ಮೋದಿಯವರು ಬಡವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅಪ್ಪಟ ಸುಳ್ಳು ಹೇಳಿದರು. ಆದರೆ ಕೊಟ್ಟ ಐದು ಗ್ಯಾರಂಟಿ ಗಳಲ್ಲಿ ನಾಲ್ಕು ಗ್ಯಾರಂಟಿ ಗಳನ್ನು ಯಶಸ್ವಿ ಯಾಗಿ ಅನುಷ್ಠಾನ ಗೊಳಿಸಿದ್ದೇವೆ.
ಬಿಜೆಪಿ ಎಂದಿಗೂ ಬಡವರ ವಿರೋಧಿ. ಅನ್ನಭಾಗ್ಯಕ್ಕೆ ಅಕ್ಕಿ ಕೊಡಲು ಮೊದಲು ಒಪ್ಪಿದ್ದ ಎಫ್ ಸಿಐ ನಂತರ ಕೇಂದ್ರ ದ ಚಿತಾವಣೆಯಿಂದ ಅಕ್ಕಿ ಪೂರೈಕೆ ಸಾಧ್ಯವಿಲ್ಲ ಎಂದಿತು. ಆದರೂ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಅಕ್ಕಿ ಸಿಗುವವರೆಗೂ ಐದು ಕೆಜಿ ಹೆಚ್ಚು ವರಿ ಅಕ್ಕಿ ಬದಲಾಗಿ ಪಡಿತರದಾರರ ಖಾತೆ ಗೆ ತಲಾ 170ರೂ.ಜಮೆಮಾಡಿದೆ ಎಂದರು.
ಪಶು ಪಾಲಕರಿಗೆ, ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣದಿಂದ ಪ್ರತಿ ಲೀಟರ್ ಹಾಲಿನ ದರವನ್ನು 3 ರೂ ಹೆಚ್ಚಳ ಮಾಡಿದ್ದು ಐದು ರೂ ಪ್ರೋತ್ಸಾಹ ಧನ ನೀಡಲಾಗುತ್ತಿದೆ.ಶಾಲಾ ಮಕ್ಕಳಿಗೆ ಶೂ ಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದ್ದು ಮಧುಗಿರಿಯ ಮಿಡಿಗೇಶಿಯಲ್ಲೆ.ಹೈಸ್ಕೂಲಿಗೆ ಹೋಗುವವರೆಗೂ ನನ್ನ ಕಾಲಲ್ಲಿ ಚಪ್ಪಲಿ ಇರಲಿಲ್ಲ. ನನ್ನ ಪರಿಸ್ಥಿತಿ ಉಳಿದ ಮಕ್ಕಳಿಗೆ ಬರಬಾರದು ಎನ್ನುವ ಕಾರಣದಿಂದ ಶೂ ಭಾಗ್ಯ ಜಾರಿಗೊಳಿಸಿದೆ ಎಂದು ಸ್ಮರಿಸಿಕೊಂಡರು.
ಎತ್ತಿನಹೊಳೆ ಯೋಜನೆಗೆ ಸಮರ್ಪಕವಾಗಿ ಹಣ ಕೊಡದೆ ಬಿಜೆಪಿ ಸರ್ಕಾರ ಬಯಲುಸೀಮೆ ಜಿಲ್ಲೆಯ ಜನತೆಗೆ ವಂಚಿಸಿತು ಎಂದ ಸಿಎಂ ಸಿದ್ದರಾಮಯ್ಯ ಅವರು ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಚಾಲನೆ ಗೊಳಿಸಿದ ಯೋಜನೆಗೆ ಏನೇ ಆದರೂ ಸರಿ ನಾವೇ ಪೂರ್ಣ ಗೊಳಿಸಿ ನಾವೇ ಉದ್ಘಾಟನೆ ಮಾಡುತ್ತೇವೆ ಎಂದರು.
ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ , ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ , ದೆಹಲಿ ವಿಶೇಷ ಪ್ರತಿನಿಧಿ ಟಿ. ಬಿ. ಜಯಚಂದ್ರ,ಶಾಸಕರುಗಳಾದ ರಂಗನಾಥ್, ಷಡಾಕ್ಷರಿ, ಎಸ್. ಆರ್. ಶ್ರೀ ನಿವಾಸ್, ವೆಂಕಟೇಶ್, ಎಚ್. ವೈ ನಂಜೇಗೌಡ, ಎಂಎಲ್ಸಿ ರಾಜೇಂದ್ರ, ಮಾಜಿ ಶಾಸಕರಾದ ಕೆ. ಸಿ. ವೇಣುಗೋಪಾಲ್, ಎಚ್. ನಿಂಗಪ್ಪ, ಕೆ. ಎಸ್. ಕಿರಣ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ ಗೌಡ, ತುಮುಲ್ ಅಧ್ಯಕ್ಷ ಸಿ. ವಿ. ಮಹಾಲಿಂಗಯ್ಯ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕ್ಯಾಪ್ಟನ್ ರಾಜೇಂದ್ರ, ಡಿಸಿ ಕೆ. ಶ್ರೀ ನಿವಾಸ್, ಜಿ. ಪಂ ಸಿಇಓ ಪ್ರಭು, ಕೆಎಂಎಫ್ ಎಂಡಿ ಜಗದೀಶ್,ಪ್ರಜಾಪ್ರಗತಿ ಸಂಪಾದಕರಾದ ಎಸ್ ನಾಗಣ್ಣ, ಮೇಯರ್ ಪ್ರಭಾವತಿ ಸುಧೀಶ್ವರ್, ಮಹಾಮಂಡಳದ ನಿರ್ದೇಶಕರುಗಳು, ವಿವಿಧ ಹಾಲು ಒಕ್ಕೂಟ ಗಳ ಅಧ್ಯಕ್ಷ ರು, ಸೇರಿದಂತೆ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಇದೇ ವೇಳೆ ಕ್ಷೀರಭಾಗ್ಯ ಯೋಜನೆ ಜಾರಿಗೆ ಕಾರಣರಾದ ರಾಜ್ಯ ಸರ್ಕಾರ ದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್, ಕೆಎಂಎಫ್ ನಿವೃತ್ತ ಎಂಡಿ ಪ್ರೇಮನಾಥ್ ಅವರನ್ನು ಸನ್ಮಾನಿಸಲಾಯಿತು.