ನ್ಯೂ ಇಯರ್ ಆಚರಣೆ : ಅಸಭ್ಯವಾಗಿ ವರ್ತಿಸಿದರೆ ನಿರ್ದಾಕ್ಷಣ್ಯ ಕ್ರಮ :ಪೋಲೀಸ್ ಆಯುಕ್ತ

ಬೆಂಗಳೂರು

     ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಕುಡಿದು ವಾಹನ ಚಲಾಯಿಸುವುದು, ಗುಂಪುಗೂಡಿ ಸಾಮೂಹಿಕ ಸಂಭ್ರಮಾಚರಣೆ ಮಾಡಿ ಬೇರೆಯವರಿಗೆ ಕಿರುಕುಳ ಉಂಟು ಮಾಡುವುದು,ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಪೊಲೀಸರಿಗೆ ಸೂಚಿಸಿದ್ದಾರೆ.

   ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಇತರ ಜಾಗಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು.ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ವಿಷಯದಲ್ಲಿ ಯಾವುದೇ ರಾಜಿಯಾಗದೆ ಕಠಿಣ ಕ್ರಮಕೈಗೊಳ್ಳುವಂತೆ ಹೊಸ ವರ್ಷದ ಸಂಭ್ರಮದಲ್ಲಿ ನಶೆ ಏರಿಸಿಕೊಂಡು ಅಡ್ಡಾದಿಡ್ಡಿ ವರ್ತಿಸುವವರನ್ನು ಬಂಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

   ವಿಕಾಸಸೌಧದಲ್ಲಿ ಸೋಮವಾರ ನಗರದ ಇನ್ಸ್‌ಪೆಕ್ಟರ್‌ಗಳು, ಎಸಿಪಿಗಳು, ಡಿಸಿಪಿಗಳು, ಜಂಟಿ ಪೊಲೀಸ್ ಆಯುಕ್ತರು, ಹೆಚ್ಚುವರಿ ಪೊಲೀಸ್ ಆಯುಕ್ತರ ಜೊತೆ ಸಭೆ ನಡೆಸಿದ ನಗರ ಪೊಲೀಸ್ ಆಯುಕ್ತರು, 2019ನೇ ವರ್ಷದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ಪೊಲೀಸ್ ಸಿಬ್ಬಂದಿಯನ್ನು ಅಭಿನಂದಿಸಿ 2020ರ ಹೊಸ ವರ್ಷದ ವೇಳೆ ಯಾವುದೇ ರೀತಿಯ ಅಹಿತಕ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದರು..

    ಹಲವಾರು ಸವಾಲುಗಳ ನಡುವೆ ಬೆಂಗಳೂರು ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕಾನೂನು ವ್ಯವಸ್ಥೆ ಸುಸ್ಥಿತಿಯಲ್ಲಿದೆ. ಬೆಂಗಳೂರು ಪೊಲೀಸರ ಮೇಲೆ ಸಾರ್ವಜನಿಕರ ಮೇಲೆ ಒಳ್ಳೆಯ ನಂಬಿಕೆ ಬಂದಿದೆ. ಇದೇ ರೀತಿ ಮುಂದಿನ ದಿನಗಳಲ್ಲೂ ಸುರಕ್ಷತೆಯ ಕರ್ತವ್ಯವನ್ನು ಮುಂದುವರೆಸುವಂತೆ ಆಯುಕ್ತರು ಸೂಚನೆ ನೀಡಿದರು.

    ಈ ಹಿಂದಿನ ಹೊಸ ವರ್ಷಾಚರಣೆಗಳ ವೇಳೆ ಸಾಕಷ್ಟು ಅವಘಡಗಳು ನಡೆದಿವೆ. ಸಣ್ಣ ಪ್ರಮಾಣದ ಘಟನೆಯೂ ದೊಡ್ಡದಾಗಿ ಬೆಂಗಳೂರಿನ ಸುರಕ್ಷತೆ ಬಗ್ಗೆಯೇ ಪ್ರಶ್ನೆಗಳು ಹುಟ್ಟುವಂತಹ ವಾತಾವರಣ ನಿರ್ಮಾಣವಾಗುತ್ತದೆ. ಅದಕ್ಕೆ ಅವಕಾಶ ನೀಡಬೇಡಿ. ಈಗಾಗಲೇ ಸೂಚಿಸಲಾದ ಮಾರ್ಗಸೂಚಿಯಂತೆ ಕರ್ತವ್ಯ ನಿರ್ವಹಿಸಿ ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.

   ಫ್ಲೈಓವರ್‍ಗಳ ಮೇಲೆ ಸಂಚಾರ ನಿರ್ಬಂಧಿಸಿ. ಜನನಿಬಿಡ ಸ್ಥಳಗಳಲ್ಲಿ ಮತ್ತು ನಿರ್ಜನ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಕ್ರಮಬದ್ಧವಾಗಿರಲಿ. ಮದ್ಯದಂಗಡಿಗಳು, ಡ್ಯಾನ್ಸ್‌ಬಾರ್‍ಗಳು, ಹೊಟೇಲ್ ರೆಸ್ಟೋರೆಂಟ್‌ಗಳು, ಪಾರ್ಟಿಹಾಲ್‌ಗಳ ಬಳಿ ಹೊಯ್ಸಳ ಸಿಬ್ಬಂದಿ ನಿಗಾ ವಹಿಸಬೇಕು ಎಂದು ಆಯುಕ್ತರು ಸೂಚನೆ ನೀಡಿದ್ದಾರೆ.ಇನ್ನು ಹೊಸ ವರ್ಷದ ದಿನ ಯಾರೂ ರಜೆ ತೆಗೆದುಕೊಳ್ಳಬಾರದು. ಇಡೀ ರಾತ್ರಿ ಕಟ್ಟೆಚ್ಚರದಿಂದ ಕೆಲಸ ಮಾಡಬೇಕು ಎಂದು ಆಯುಕ್ತರು ಕಟ್ಟಪ್ಪಣೆ ಮಾಡಿದ್ದಾರೆ.

 

Recent Articles

spot_img

Related Stories

Share via
Copy link