ಬೆಂಗಳೂರು:
ಪತ್ರಕರ್ತೆ ಗೌರಿ ಅವರನ್ನು ಗುಂಡಿಕ್ಕಿ ಹತ್ಯೆಮಾಡಿ ಬುಧವಾರ(ಸೆ.5)ಕ್ಕೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವಾಗಲೇ ಹಂತಕ ಯಾರು ಎನ್ನುವುದನ್ನು ಸಾಕ್ಷಿ ಸಮೇತ ಸಾಬೀತು ಪಡಿಸುವಲ್ಲಿ ರಾಜ್ಯದ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಳೆದ ಒಂದು ವರ್ಷದಿಂದ ಹಗಲಿರುಳೆನ್ನದೇ ತನಿಖೆ ನಡೆಸಿರುವ ಎಸ್‍ಐಟಿ ಅಧಿಕಾರಿಗಳು ತಂತ್ರಜ್ಞಾನ ಸೇರಿದಂತೆ ಎಲ್ಲ ರೀತಿಯ ಅವಕಾಶಗಳನ್ನು ಬಳಸಿಕೊಂಡು ಗೌರಿಗೆ ಗುಂಡು ಹಾರಿಸಿದ್ದು ಯಾರು ಎನ್ನುವುದನ್ನು ದೇಶದಲ್ಲಿಯೇ ಮೊದಲು ಎನ್ನುವ ಪೊಡಿಯಾಟ್ರಿಕ್ ಗೇಯ್ಟ್ ಅನಾಲಿಸಿಸ್(ವಿಶ್ಲೇಷಣೆ) ಪರೀಕ್ಷೆಯ ಮೂಲಕ ಸಾಬೀತು ಪಡಿಸಿ ಗೆಲುವಿನ ನಗೆ ಬೀರಿದ್ದಾರೆ.
ಗುಜರಾತ್‍ನ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್)ದಲ್ಲಿ ನಡೆಸಿದ ಪೊಡಿಯಾಟ್ರಿಕ್ ಗೇಯ್ಟ್ ಅನಾಲಿಸಿಸ್ ಪರೀಕ್ಷಾ ವರದಿಯಿಂದ ಬಂಧಿತ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆಯೇ ಗೌರಿ ಅವರಿಗೆ ಗುಂಡು ಹಾರಿಸಿರುವುದು ಪತ್ತೆಯಾಗಿದ್ದು ಬಹುತೇಕ ತನಿಖೆಯು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.
6 ಸೆಕೆಂಡ್‍ನ ದೃಶ್ಯ: ಕೇವಲ 6 ಸೆಕೆಂಡ್‍ನ ಫೂಟೇಜ್ ಹಿಡಿದು ಆರೋಪಿ ಯಾರು ಎನ್ನುವುದನ್ನು ಸಾಬೀತು ಮಾಡಿರುವುದು ವಿಶೇಷ.ಫೋರೆನ್ಸಿಕ್ ಗೇಟ್ ಅನಾಲೀಸಿಸ್’ ಪರೀಕ್ಷೆಯ ಮೂಲಕ ತಾಂತ್ರಿಕವಾಗಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ.ಕೃತ್ಯ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಹಾಗೂ ಅಪರಾಧ ಕೃತ್ಯದ ಮರುಚಿತ್ರೀಕರಣದ ದೃಶ್ಯ ಹೋಲಿಕೆಯಾಗಿದೆ ಅದರಲ್ಲಿ ವಾಘ್ಮೋರೆ ಇರುವುದು ಕಂಡುಬಂದಿದೆ.
ಹೆಲ್ಮೆಟ್ ಧರಿಸಿದ್ದರೂ ಬೈಕ್‍ನಲ್ಲಿ ಇದ್ದಿದ್ದು ಪರಶುರಾಮ್ ವಾಗ್ಮೋರೆ ಎಂಬುದು ಸ್ಪಷ್ಟವಾಗಿರುವ ವರದಿಯನ್ನು ಗುಜರಾತ್‍ನ ವಿಧಿವಿಜ್ಞಾನ ಪ್ರಯೋಗಾಲಯ ನೀಡಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಫೋರೆನ್ಸಿಕ್ ಗೇಟ್ ಅನಾಲೀಸಿಸ್ ಟೆಕ್ನಿಕ್ ಬಳಕೆ ಮಾಡಲಾಗಿದೆ.
ಈ ಟೆಕ್ನಿಕ್ ಮೂಲಕ ಆರೋಪಿ ಪರಶುರಾಮ್ ವಾಗ್ಮೋರೆ ಶೂಟ್ ಮಾಡಿರುವುದು ಸ್ಪಷ್ಟವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತಾಂತ್ರಿಕವಾಗಿ ಸಾಬೀತಾದ ಮೊದಲ ಪ್ರಕರಣ ಗೌರಿ ಹತ್ಯೆಯದ್ದಾಗಿದೆ.ಲಂಡನ್‍ನಲ್ಲಿ 18 ವರ್ಷಗಳ ಹಿಂದೆ ಮೊದಲ ಬಾರಿಗೆ ಈ ಟೆಕ್ನಿಕ್ ಬಳಸಲಾಗಿತ್ತು.
ತಾಂತ್ರಿಕ ವಿಶ್ಲೇಷಣೆ: ಪರಶುರಾಮ್ ವಾಗ್ಮೋರೆ ಬಂಧನಕ್ಕೂ ಮೊದಲು ಸಿಸಿಟಿವಿ ಆಧರಿಸಿ ಆರೋಪಿಯಷ್ಟು ಎತ್ತರದ ನಕಲಿ ವ್ಯಕ್ತಿಯೊಬ್ಬನನ್ನು ಕರೆದುಕೊಂಡು ಹೋಗಿ ಗೌರಿ ಹತ್ಯೆಯ ಅನಾಲಿಸಿಸ್ ಮಾಡಲಾಗಿತ್ತು. ಈ ವೇಳೆ ಆರೋಪಿಯ ಎತ್ತರ 5.2 ಅಡಿ ಎಂಬ ಸುಳಿವು ದೊರಕಿತ್ತು. ನಂತರ ಆತನ ಶೂ ಮತ್ತು ಹೆಲ್ಮೆಟನ್ನು ಹಾಕಿಕೊಂಡರೆ 5.3ರಿಂದ 5.4ರಷ್ಟು ಆರೋಪಿಯ ಎತ್ತರ ಬರಲಿದೆ ಎಂದು ವಿಶ್ಲೇಷಣೆ ಮಾಡಲಾಗಿತ್ತು.
ಬಳಿಕ ಬೇರೆ ಬೇರೆ ಸುಳಿವುಗಳ ಮೂಲಕ ಅಮೊಲ್ ಕಾಳೆ, ಸಜಿತ್ ಹಾಗೂ ಅಮಿತ್ ಮೊದಲಾದವರ ಹೇಳಿಕೆಗಳನ್ನು ಆಧರಿಸಿ ಪರಶುರಾಮ್ ವಾಗ್ಮೋರೆಯನ್ನು ಬಂಧಿಸಿ ಘಟನಾ ಸ್ಥಳಕ್ಕೆ ಕರೆದೊಯ್ದು ಆತನಿಗೆ ಶೂ ಹಾಗೂ ಹೆಲ್ಮೆಟ್ ಹಾಕಿ, ಬೈಕ್ ಓಡಿಸುವ ಮೂಲಕ ಪ್ರಕರಣವನ್ನು ಮರುಸೃಷ್ಟಿ ಮಾಡಲಾಗಿತ್ತು.
ಇದನ್ನು ಗೌರಿ ಮನೆಯಲ್ಲಿರುವ ಕೇವಲ ಎರಡು ಸಿಸಿಟಿವಿಯಲ್ಲಿ ಮಾತ್ರ ಸೆರೆಹಿಡಿಯಲಾಗಿತ್ತು.ಅದರಲ್ಲಿ ಆತ ಶೂ, ಹೆಲ್ಮೆಟ್ ತೆಗೆಯುವ ರೀತಿಯನ್ನೂ ಸೆರೆಹಿಡಿಯಲಾಗಿತ್ತು.ಹೆಲ್ಮೆಟ್ ಇಲ್ಲದೆ, ಶೂ ಇಲ್ಲದೇ ಮರು ಸೃಷ್ಟಿ ಮಾಡಿದಾಗಲೂ ವಿಡಿಯೋ ಹೊಂದಾಣಿಕೆ ಕಂಡಿತ್ತು.
ಪಾದಗಳು ತಾಳೆ: ಈ ಮೂಲಕ ಪ್ರಕರಣದ ಘಟನೆಯನ್ನು ಮರುಸೃಷ್ಟಿ ಮಾಡಿ ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕೊಡಲಾಗಿತು ಅವುಗಳನ್ನು ಪರೀಶೀಲಿಸಿ ವರದಿ ನೀಡಿದ ಎಫ್‍ಎಸ್‍ಎಲ್ ವಾಘ್ಮೋರೆಯೇ ಗುಂಡು ಹಾರಿಸಿರುವುದನ್ನು ಧೃಡಪಡಿಸಿದೆ.
ವ್ಯಕ್ತಿಗಳ ಪಾದಗಳ ಪರೀಕ್ಷೆ ಸಂಬಂಧಿಸಿದ ಪರೀಕ್ಷೆ ಇದಾಗಿದೆ.ವಾಘ್ಮೋರೆ ಗೌರಿ ಲಂಕೇಶ್ ಮನೆಯ ಬಳಿ ನಡೆದಾಡಿದ ಸಿಸಿ ಟಿವಿ ದೃಶ್ಯಾವಳಿಗಳು ಹಾಗೂ ಎಸ್‍ಐಟಿ ಅಧಿಕಾರಿಗಳು ಮರು ಸೃಷ್ಠಿಸಿದ ವಿಡಿಯೋದಲ್ಲಿರುವ ವಾಘ್ಮೋರೆಯ ಪಾದಗಳು ತಾಳೆಯಾಗಿದ್ದು ಅದರಿಂದ ಗುಂಡು ಹಾರಿಸಿದ್ದು ವಾಘ್ಮೋರೆಯೇ ಎನ್ನುವುದು ಸಾಬೀತಾಗಿದೆ.
ಗೌರಿ ಹಂತಕರನ್ನು ಬಂಧಿಸುವ ಮೊದಲು ಎಸ್‍ಐಟಿ ತಂಡ ಆರೋಪಿಗಳ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿತ್ತು. ಆ ರೇಖಾ ಚಿತ್ರದಲ್ಲಿದ್ದ ಆರೋಪಿ ಪರಶುರಾಮ ವಾಘ್ಮೋರೆಯನ್ನು ಹೋಲುತ್ತಿದ್ದನು ಆತನೇ ಗೌರಿ ಹತ್ಯೆ ನಡೆಸಿರುವುದು ಧೃಡಪಟ್ಟಿದೆ.








