ಹೊಸಪೇಟೆ :
ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ಇತ್ತೀಚೆಗೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳ ರಾಜ್ಯ ಮಟ್ಟದ ಸಮಾವೇಶ ನಡೆಯಿತು.
ಹಂಪಿಯ ಗಾಯಿತ್ರಿ ಪೀಠದ ಆವರಣದಲ್ಲಿ ಆಯೋಜಿಸಿದ್ದ ಸಮಾವೇಶದಲಿ ಗ್ರಾಮೀಣಾಭಿವೃದ್ದಿ ಹಾಗು ಪಂ.ರಾಜ್ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಚ್.ಬೋರಯ್ಯ ಮಾತನಾಡಿ, ಪಂ.ಅಭಿವೃದ್ದಿ ಅಧಿಕಾರಿಗಳಿಗೆ(ಪಿಡಿಒ) ಬೇರೆ ಬೇರೆ ಕೆಲಸದ ಹೆಚ್ಚುವರಿ ಜವಾಬ್ದಾರಿ ಬೀಳುತ್ತಿರುವುದರಿಂದ ಸಮರ್ಪಕವಾಗಿ ನಿರ್ವಹಿಸಲು ಸ್ವಲ್ಪ ಕಷ್ಟವಾಗುತ್ತಿದೆ. ರೇಷನ್ ಕಾರ್ಡ್ ಎಂಟ್ರಿ, ಆಧಾರ ಕಾರ್ಡ್ ಹೆಸರು ಬದಲಾವಣೆ, ಹಾಗು ತಿದ್ದುಪಡಿಯಂಥಹ ಹೆಚ್ಚುವರಿ ಕೆಲಸಗಳಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ ಎಂದರು.
ಬೆಂಗಳೂರಿನ ಪ್ರಭಾರಿ ರಮೇಶ್ ಮಾತನಾಡಿ, ರಾಜ್ಯ ಗ್ರಾಮೀಣಾಭಿವೃದ್ದಿ ಹಾಗು ಪಂ.ರಾಜ್ ಇಲಾಖೆ ಪ್ರತಿ ವರ್ಷ ರಾಜ್ಯ ಮಟ್ಟದ ಗ್ರಾಮೀಣಾವೃದ್ದಿಯಲ್ಲಿ ಉತ್ತಮ ಆಡಳಿತ ಪ್ರಶಸ್ತಿ ಪಡೆಯುತ್ತಿದ್ದರೂ ಕೆಲವು ಪಂ.ಅಭಿವೃದ್ದಿ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್, ಇಲಾಖೆ ವಿಚಾರಣೆ, ಲೋಕಾಯುಕ್ತಾ ವಿಚಾರಣೆ ನಡೆಯುತ್ತಿರುವುದು ದುರಂತದ ಸಂಗತಿ. ವಾರ್ಡ್ ಹಾಗು ಗ್ರಾಮ ಸಭೆಗಳು ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆದರೂ, ಏನೇ ಲೋಪ ದೋಷಗಳು ಕಂಡು ಬಂದರೆ ಅದಕ್ಕೂ ಪಂ.ಅಭಿವೃದ್ದಿ ಅಧಿಕಾರಿಗಳನ್ನು ಹೊಣೆ ಮಾಡಲಾಗುತ್ತಿದೆ. ಇದು ಬದಲಾಗಬೇಕು. ಆದ ಲೋಪಕ್ಕೆ ಎಲ್ಲಾರೂ ಭಾಗಿಯಾಗಬೇಕಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಉಮೇಶ್ ಮಾತನಾಡಿ, ಬೆಳೆ ಕಟಾವು ಸಮೀಕ್ಷೆ, ಭಾಪೂಜಿ ಸೇವಾ ಕೇಂದ್ರಗಳ ನಿರ್ವಹಣೆ, ಆಧಾರ್, ಪಡಿತರ ಎಂಟ್ರಿಯ ಹೆಚ್ಚುವರಿ ಜವಾಬ್ದಾರಿಯಿಂದ ಒತ್ತಡ ಕಡಿಮೆ ಮಾಡಬೇಕಾದರೆ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು. ಇದರಿಂದ ಗ್ರಾಮೀಣಾವೃದ್ದಿ ಕೆಲಸಕ್ಕೂ ಹಿನ್ನೆಡೆಯಾಗುವುದಿಲ್ಲ ಎಂದರು.
ದಾವಣಗೆರೆ ಸಂಗಮೇಶ್ ಮಾತನಾಡಿದರು. ಸಮಾವೇಶದಲ್ಲಿ ಪಿಡಿಒಗಳ ವಿರುದ್ದ ಪ್ರಕರಣಗಳು ದಾಖಲಾಗುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಅಧ್ಯಯನ ತಂಡ ರಚನೆಗೆ ಮನವಿ ಸಲ್ಲಿಕೆ, ಸಂಘದ ಬಲವರ್ಧನೆಗೆ ಮತ್ತು ಅಧಿಕಾರಿಗಳ ಬದಲಾವಣೆಗೆ ಆದ್ಯತೆ, ಸಂಘದ ಚಟುವಟಿಕೆ ನಡೆಸಲು ಚಿಂತನೆ ನಡೆಸುವ ಅಗತ್ಯತೆ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.
ಹಂಪಿ ಗ್ರಾ.ಪಂ.ಪಿಡಿಒ ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸುಮಾರು 1550 ಪಂ.ಅಭಿವೃದ್ದಿ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ