ಬೆಂಗಳೂರು:
ರಾಜ್ಯ ಬಿಜೆಪಿ ನಾಯಕರನ್ನು ದೆಹಲಿ ನಾಯಕರು ಕಡೆಗಣಿಸುತ್ತಿದ್ದಾರೆ ಎಂಬ ಆರೋಪಗಳು ಈಗ ಹೊಸದಾಗಿ ಕೇಳಿಬರುತ್ತಿದ್ದು, ಇವುಗಳ ಮಧ್ಯೆ ನಡೆದ ಮತ್ತೊಂದು ಬೆಳವಣಿಗೆಯಲ್ಲಿ ಮೂವರು ನಾಯಕರನ್ನು ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.
ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಎಂಎಲ್‌ಸಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ಪಿಸಿ ಮೋಹನ್‌ಗೆ ಬಿಜೆಪಿ ಹೈಕಮಾಂಡ್‌ನಿಂದ ಬುಲಾವ್ ಬಂದಿದೆ. ಇದರಂತೆ ಈ ಮೂವರು ನಾಯಕರು ಇಂದು ದೆಹಲಿಗೆ ತೆರಳಲಿದ್ದಾರೆ. ಇಂದು ಅಪರಾಹ್ನ 3.30ಕ್ಕೆ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ಮೂವರೂ ನಾಯಕರಿಗೆ ಸೂಚನೆ ನೀಡಲಾಗಿದೆ. ಕಳೆದ ವಾರ ಮಾಜಿ ಸಿಎಂ ಡಿವಿ ಸದಾನಂದ ಗೌಡರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿ ಹೈಕಮಾಂಡ್, ಕೊನೆಯ ಕ್ಷಣದಲ್ಲಿ ಭೇಟಿ ಮಾಡದೆ ವಾಪಸ್ ಕಳುಹಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗುವುದಕ್ಕಾಗಿ ಸದಾನಂದ ಗೌಡರು ದೆಹಲಿಗೆ ತೆರಳಿದ್ದರು.
ಈ ಮಧ್ಯೆ, ಹೈಕಮಾಂಡ್‌ನಿಂದ ಕರೆ ಬಂದಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ನಾಳೆ ದೆಹಲಿಗೆ ಹೋಗುತ್ತಿದ್ದೇನೆ. ನನ್ನ ಜೊತೆಗೆ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಪಿ.ಸಿ. ಮೋಹನ್ ಅವರಿಗೂ ಬರಲು ಹೇಳಿದ್ದಾರೆ. ಯಾಕೆ ಕರೆದಿದ್ದಾರೆ ಗೊತ್ತಿಲ್ಲ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನೇಮಕಾತಿ ಬಗ್ಗೆ ಸದಾನಂದ ಗೌಡ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಗೌಡರು ಹೇಳಿದ್ದು ಅಲ್ಲಿಗೆ ಮುಗಿದಿದೆ. ಸಮಸ್ಯೆ ಅಲ್ಲಿಗೆ ಪರಿಹಾರ ಆಗಿದೆ. ಅವರು ಅದನ್ನು ಮುಂದುವರಿಸಿಲ್ಲ. ಮುಂದುವರಿಸಿರುತ್ತಿದ್ದರೆ ಏನು ಮಾಡಬೇಕು ಅಂತಾ ಹೇಳುತ್ತಿದ್ದೆ ಎಂದರು.
ಈ ಮಧ್ಯೆ ಇಂದು ಬೆಳಗ್ಗೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಸುದ್ದಿಗೋಷ್ಠಿ ಕರೆದಿದ್ದು, ಅದರಲ್ಲಿ ಯಾವ್ಯಾವ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
ಬರ ಅಧ್ಯಯನ ಪ್ರವಾಸಕ್ಕೆ ಮುಂದಾದ ಪ್ರತಿಪಕ್ಷ ಬಿಜೆಪಿ, ನವೆಂಬರ್ 3 ರಿಂದ 10ರವರೆಗೆ ರಾಜ್ಯಾದ್ಯಂತ ಬರ ಪ್ರವಾಸ ಕೈಗೊಳ್ಳಲಿದೆ. 17 ನಾಯಕರ ನೇತೃತ್ವದ ತಂಡಗಳಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ನಡೆಸಲು ಯೋಜನೆ ರೂಪಿಸಲಾಗಿದೆ. ಎರಡೆರಡು ತಂಡಗಳು ಎರಡು ಎರಡು ಜಿಲ್ಲೆಗಳಲ್ಲಿ ಬರ ಅಧ್ಯಯನ ಪ್ರವಾಸ ನಡೆಸಲಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಈಶ್ವರಪ್ಪ, ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಸೇರಿ 17 ನಾಯಕನ್ನರೊಳಗೊಂಡ ತಂಡ ಪ್ರವಾಸ ನಡೆಸಲಿದೆ. ನವೆಂಬರ್ 10ರೊಳಗೆ ಬರ ಅಧ್ಯಯನ ವರದಿ ಸಿದ್ದಪಡಿಸಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದಾರೆ. ಅದನ್ನು ಬರುವ ಅಧಿವೇಶನದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವರಣೆ ನೀಡಲು ಯಡಿಯೂರಪ್ಪನವರು ಸುದ್ದಿಗೋಷ್ಠಿ ಕರೆದಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ