ರುದ್ರಪ್ರಯಾಗ:
ಉತ್ತರಾಖಂಡದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ನಿರಂತರ ಮಳೆಯಿಂದ ಕೇದಾರನಾಥ ಚಾರಣ ಮಾರ್ಗದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಯಾತ್ರಾರ್ಥಿಗಳನ್ನು ಸ್ಥಳಾಂತರಿಸಲು ಐಎಎಫ್‌ನ ಚಿನೂಕ್ ಮತ್ತು ಎಂಐ 17 ಹೆಲಿಕಾಪ್ಟರ್‌ಗಳು ಶುಕ್ರವಾರ ಉತ್ತರಾಖಂಡದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಸೇರಿಕೊಂಡಿವೆ.
ಗುರುವಾರ ಬೆಳಗ್ಗೆ ರಕ್ಷಣಾ ಕಾರ್ಯಾಚರಣೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 5,000 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದವರನ್ನು ಎಸ್ ಡಿಆರ್ ಎಫ್ ಮತ್ತು ಎನ್‌ಡಿಆರ್‌ಎಫ್) ಸಿಬ್ಬಂದಿಗಳು ಏರ್‌ಲಿಫ್ಟ್ ಮಾಡಿದ್ದಾರೆ ಅಥವಾ ಕೈಯಿಂದ ರಕ್ಷಿಸಿದ್ದಾರೆ. ಭಾರೀ ಮಳೆಯಿಂದ ಅಪಾರ ಹಾನಿಯಾಗಿದೆ. ಆದರೆ ಇಡೀ ಸರ್ಕಾರಿ ಯಂತ್ರ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಜಿಲ್ಲಾಡಳಿತ ಮತ್ತು ರಾಜ್ಯದ ವಿಪತ್ತು ನಿರ್ವಹಣಾ ಇಲಾಖೆ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರಧಾನಿಯನ್ನು ಕೇಳಿದ ನಂತರ ಐಎಎಫ್‌ನ ಚಿನೂಕ್ ಮತ್ತು ಎಂಐ 17 ಹೆಲಿಕಾಪ್ಟರ್‌ಗಳು ಸಹ ರಕ್ಷಣಾ ಕಾರ್ಯಾಚರಣೆಗೆ ಸೇರಿಕೊಂಡಿವೆ ಎಂದು ಧಾಮಿ ಪಿಟಿಐ ವಿಡಿಯೋಗೆ ತಿಳಿಸಿದ್ದಾರೆ.
“ಹವಾಮಾನ ಉತ್ತಮವಾಗಿದ್ದರೆ ಇಂದು ಸಂಜೆಯ ವೇಳೆಗೆ ಸಂಕಷ್ಟಕ್ಕೆ ಸಿಲುಕಿರುವ ಎಲ್ಲಾ ಯಾತ್ರಾರ್ಥಿಗಳನ್ನು ಸ್ಥಳಾಂತರಿ, ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗುವುದು ಎಂದು ಹೇಳಿದ ಧಾಮಿ, ಕೇಂದ್ರ ಗೃಹ ಸಚಿವ ಅಮತ್ ಶಾ ಅವರೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಕುರಿತು ಮಾತನಾಡಿದ್ದು, ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಬುಧವಾರ ರಾತ್ರಿ ಲಿಂಚೋಲಿ ಬಳಿಯ ಜಂಗಲ್‌ಚಟ್ಟಿಯಲ್ಲಿ ಮೇಘಸ್ಫೋಟದ ಪರಿಣಾಮವಾಗಿ ಕೇದಾರನಾಥ ಚಾರಣ ಮಾರ್ಗ ವ್ಯಾಪಕ ಹಾನಿಯಾಗಿದೆ. ಮಾರ್ಗದಲ್ಲಿ ಸಿಲುಕಿರುವ ಯಾತ್ರಾರ್ಥಿಗಳ ನೆರವಿಗಾಗಿ ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆಗಳು 7579257572 ಮತ್ತು 01364-233387 – ಮತ್ತು ಒಂದು ತುರ್ತು ಸಂಖ್ಯೆ 112 ನ್ನು ತೆರೆದಿದ್ದು, ತೊಂದರೆಗೆ ಸಿಲುಕಿರುವ ಯಾತ್ರಾರ್ಥಿಗಳ ಬಗ್ಗೆ ಅವರ ಸಂಬಂಧಿಕರಿಗೆ ನೆರವು ನೀಡಲಾಗುತ್ತಿದೆ ಎಂದು ಧಾಮಿ ತಿಳಿಸಿದರು.