ಬೆಂಗಳೂರು
ವರ್ಗಾವಣೆ ಸೇರಿದಂತೆ ಶಾಲಾ ಶಿಕ್ಷಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದ್ದು, ಶಿಕ್ಷಕರು ಮಕ್ಕಳ ಕಲಿಕೆ ಗುಣಮಟ್ಟ ಹೆಚ್ಚಿಸಲು ಮುಂದಾಬೇಕು ಎಂದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಆಯೋಜಿಸಿದ್ದ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನ ಪ್ರಯುಕ್ತ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಲಿಕೆಯ ಮಟ್ಟ ಹೆಚ್ಚಿಸಲು ಹಿಂದೇಟು ಹಾಕಬಾದರು ಎಂದು ಕಿವಿಮಾತು ಹೇಳಿದರು.
ನಾಡಿನ ಶಾಲಾ ಶಿಕ್ಷಕರ ಒಂದು ದಿನದ ವೇತನ ಸೇರಿ ಒಟ್ಟು ಮೂವತ್ತು ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿ, ಪ್ರವಾಹ, ಮಳೆ ಪರಿಣಾಮ ಹಾಳಾಗಿರುವ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡುವಂತೆ ಕೋರಿದ್ದಾರೆ. ಅದರಂತೆ, ಕಟ್ಟಡ ದುರಸ್ತಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಸಮಯಕ್ಕೆ ಸರಿಯಾಗಿ ಶಾಲೆಗಳಿಗೆ ಹಾಜರಾಗಬೇಕು.ಅದೇರೀತಿ, ಆ ಭಾಗದ ಹಿರಿಯರಿಗೆ ಮಾರ್ಗದರ್ಶನ ನೀಡಬೇಕು.ಇದರಿಂದ ಹಳ್ಳಿಗಳಲ್ಲಿ ಅಭಿವೃದ್ಧಿ ಸಾಧ್ಯ ಎಂದು ಅವರು ನುಡಿದರು.ಈ ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ರಾದ ಸ್ವತಃ ಶಿಕ್ಷಕರೂ ಆಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರು, ಶಿಕ್ಷಕ ಪದವಿ ಎಲ್ಲ ಪದವಿಗಳಿಗಿಂತ ಮಿಗಿಲಾಗಿದೆ ಎಂದಿದ್ದರು.ಅಷ್ಟೇ ಅಲ್ಲದೆ, ಯಾವುದೇ ದೇಶದ ವ್ಯಕ್ತಿ ಗುರು ಇಲ್ಲದಿದ್ದರೆ, ಗುರಿ ಇಲ್ಲದಂತೆ ಆಗುತ್ತಾನೆ. ಶಿಕ್ಷಕರು ಬೆಳೆಸುವ ಮಕ್ಕಳಿಂದ ದೇಶ ನಿರ್ಮಾಣ ಆಗುತ್ತದೆ ಎಂದು ಅಂದೇ ಭವಿಷ್ಯ ನುಡಿದಿದ್ದರು ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಅವರು ಮಾತನಾಡಿ ಅವರೊಬ್ಬರು ಆದರ್ಶ ವ್ಯಕ್ತಿ ಮಾತ್ರವಲ್ಲ, ದೇಶ ಕಂಡ ಉತ್ತಮ ಶಿಕ್ಷಕ.ಅವರನ್ನು ಮೆಚ್ಚುವ ಶಿಷ್ಯ ವರ್ಗ ಇಂದು ಸಹ ಜೀವಂತ ಇದೆ ಎಂದು ಬಣ್ಣಿಸಿದರು.ನಾನೊಬ್ಬ ಶಾಲಾ ಶಿಕ್ಷಕಿಯ ಪುತ್ರ. ಈ ಇಲಾಖೆ ಮೇಲೆ ನನ್ನ ಋಣ ಇದೆ. ಇದನೆಲ್ಲಾ ಗುರುತಿಸಿ, ಯಡಿಯೂರಪ್ಪ ಅವರು ನನಗೆ ಶಿಕ್ಷಣ ಜವಾಬ್ದಾರಿ ನೀಡಿರುವುದು ಸಂತಸ ಎಂದ ಅವರು, ನಾವು ವೃತ್ತಿ ಯಿಂದ ಶಿಕ್ಷಕರಾಗುವುದು ಬೇಡ.ಬದಲಾಗಿ, ಪ್ರವೃತ್ತಿಯಿಂದ ಶಿಕ್ಷಕರಾಗಬೇಕು ಎಂದು ನುಡಿದರು.
ದಾರಿದ್ರ್ಯ ವ್ಯವಸ್ಥೆ…!
ಭಕ್ತ ಕುಂಬಾರ ಅವರಂತೆ ಎಲ್ಲರೂ ಶಿಕ್ಷಕರನ್ನು ತುಳಿಯುತ್ತಿದ್ದಾರೆ. ಹೀಗಾದರೆ, ಸಮಾಜ ಅಭಿವೃದ್ಧಿ ಕಾಣುವುದಿಲ್ಲ.ಅಲ್ಲದೆ, ಕಡ್ಡಾಯ ವರ್ಗಾವಣೆ ಕೈಬಿಡಬೇಕು.ಅಲ್ಲದೆ, ಕಳೆದ ಒಂದೂವರೆ ವರ್ಷದಿಂದ ದಾರಿದ್ರ್ಯ ವ್ಯವಸ್ಥೆ ನಿರ್ಮಾಣ ಆಗಿತ್ತು. ಅಧಿಕಾರಗಳೇ ಜನಪ್ರತಿನಿಧಿಗಳ ಮೊಬೈಲ್ ಕರೆ ಸ್ವೀರಿಸುತ್ತಿರಲಿಲ್ಲ. ಭ್ರಷ್ಟಾಚಾರವೇ ಈ ಇಲಾಖೆಯಲ್ಲಿ ತುಂಬಿದ್ದು, ಇದನ್ನು ನಿವಾರಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಪುಟ್ಟಣ್ಣ, ಆರ್.ದೇವೇಗೌಡ ಸೇರಿದಂತೆ ಇಲಾಖೆ ಅಧಿಕಾರಿಗಳು, ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.
50 ಕೋಟಿ ದೇಣಿಗೆ
ಪ್ರವಾಹ ಮತ್ತು ಮಳೆ ಪರಿಣಾಮ ನೆರೆ ಸಂತ್ರಸ್ತರಿಗೆ ಶಿಕ್ಷಣ ಇಲಾಖೆ ಒಟ್ಟು 50 ಕೋಟಿ ರೂ.ದೇಣಿಗೆಯ ಚೆಕ್ ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು.ಅದೇ ರೀತಿ, ಚಿತ್ರ ಕಲಾವಿದಎಂ.ಸಿ.ದಿವಾಕರ್ ಅವರ ಐದು ಅಡಿಯ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಚಿತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








