ಬೆಂಗಳೂರು
ಪರಿಸರ ಉಳಿಸಲು ಪ್ರತಿಯೊಬ್ಬರು ಮರ ಗಿಡಗಳನ್ನು ಬೆಳೆಸಿ ನಮ್ಮ ಸುತ್ತಮುತ್ತಲ ಪರಿಸರವನ್ನು ಸುಂದರವಾಗಿಟ್ಟು ಕೊಳ್ಳಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಕರೆ ನೀಡಿದರು.ರವೀಂದ್ರ ಕಲಾಕ್ಷೇತ್ರದಲ್ಲಿ ಕಬ್ಬನ್ ಪಾರ್ಕ್ ನಡಿಗೆಗಾರರ ಸಂಘ ಹಾಗೂ ಕಬ್ಬನ್ ಪಾರ್ಕ್ ಪೋರಂ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನನಗೆ ಮಕ್ಕಳಿಲ್ಲದ ಕಾರಣ ಮರಗಿಡಗಳನ್ನು ಬೆಳೆಸುವಂತೆ ನನ್ನ ಪತಿ ಸೂಚನೆ ಮೇರೆಗೆ ಆಲದ ಸಸಿಗಳನ್ನು ನೆಟ್ಟು ಬಹಳ ಪ್ರೀತಿ ಮತ್ತು ಅಕ್ಕರೆಯಿಂದ ಬೆಳೆಸಿದ್ದೇನೆ. ಇದರಿಂದ ಪರಿಸರ ಉಳಿಯುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದ್ದರಿಂದ ನನಗೆ ತುಂಬಾ ಸಂತೋಷವಾಗಿದೆ. ಪ್ರತಿಯೊಬ್ಬರು ಮರಗಿಡಗಳನ್ನು ಬೆಳೆಸಬೇಕು ಎಂದು ಹೇಳಿದರು.
ನನಗೆ ನನ್ನ ಸೇವೆಯನ್ನು ಗುರುತಿಸಿ ಸರ್ಕಾರ ಹಾಗೂ ಜನತೆ ಹಲವಾರು ಪ್ರಶಸ್ತಿಗಳನ್ನು ನೀಡಿವೆ. ಆ ಪ್ರಶಸ್ತಿಯಿಂದ ನನಗೆ ಹೆಚ್ಚು ಸಂತೋಷ ಆಗುತ್ತಿದೆ. ಇನ್ನೂ ಸಹ ಹೆಚ್ಚಿನ ರೀತಿಯಲ್ಲಿ ಮರ ಗಿಡಗಳನ್ನು ಬೆಳೆಸಬೇಕೆಂಬ ಹಂಬಲ ಹೆಚ್ಚಾಗುತ್ತಿದೆ. ಇದಕ್ಕೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸದ ಪ್ರೋತ್ಸಾಹವೇ ಕಾರಣ ಎಂದರು.
ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳದ ಡೆಪ್ಯೂಟಿ ಡೈರೆಕ್ಟರ್ ಡಾ.ಜಗದೀಶ್, ಲಾಲ್ ಬಾಗ್ ಉಪನಿರ್ದೇಶಕ ಚಂದ್ರಶೇಖರ್, ಹೇಮಲತಾ ಸೇರಿದಂತೆ ಹಲವು ಗಣ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಕ್ಕಳು ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಕಬ್ಬನ್ ಪಾರ್ಕ್ ನಡಿಗೆಗಾರರ ಸಂಘ ಅಧ್ಯಕ್ಷ ಉಮೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಸಮಾರಂಭಕ್ಕೆ ಉಪಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಗೈರು ಹಾಜರಾಗಿರುವುದು ಎದ್ದು ಕಾಣುತ್ತಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








