ರಾಜ್ಯಾದ್ಯಂತ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ : ಎಸ್. ಸುರೇಶ್ ಕುಮಾರ್

ಬೆಂಗಳೂರು

    ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ಅನುಗುಣವಾಗಿ ರಾಜ್ಯಾದ್ಯಂತ ಡಿಜಿಟಲ್ ಗ್ರಂಥಾಲಯಗಳನ್ನು ರಾಜ್ಯದಲ್ಲೆಡೆ ಆರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

     ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ನಗರದ ಇಂದಿರಾ ಪ್ರಿಯದರ್ಶಿನಿ ರಾಜ್ಯ ಮಕ್ಕಳ ಗ್ರಂಥಾಲಯದಲ್ಲಿ ಶನಿವಾರ ಆಯೋಜಿಸಿದ್ದ ಸಪ್ತಾಹ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ ತಂತ್ರಜ್ಞಾನದ ಆವಿಷ್ಕಾರಕ್ಕ ನುಗುಣವಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಡಿಜಿಟಲ್ ಗ್ರಂಥಾಲಯಗಳನ್ನು ರಾಜ್ಯದಲ್ಲೆಡೆ ಆರಂಭಿಸಲು ಕ್ರಮ ಕೈಗೊಂಡಿದೆ ಎಂದು ಹೇಳಿದರು

     ಗ್ರಂಥಾಲಯ ಜ್ಞಾನ ಭಂಡಾರದ ದೇಗುಲ, ಅನೇಕ ಕವಿಗಳು, ಸಾಹಿತಿಗಳು, ವಿದ್ವಾಂಸರುಗಳು ರಚಿಸಿರುವ ಸಹಸ್ರಾರು ಸಂಖ್ಯೆಯ ಕೃತಿಗಳು, ಗ್ರಂಥಾಲಯದಲ್ಲಿವೆ. ಅವುಗಳ ಉಪಯೋಗ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ 7 ಸಾವಿರಕ್ಕೂ ಹೆಚ್ಚು ಗ್ರಂಥಾಲಯಗಳಿವೆ. ತಂತ್ರಜ್ಞಾನದ ಪ್ರಭಾವಿತರಾಗಿರುವ ಇಂದಿನ ಸಮಾಜದಲ್ಲಿ ಓದುವ ಹವ್ಯಾಸ ಕ್ಷೀಣಿಸುತ್ತಿದೆ ಎಂದು ಹೇಳಿದರು.

     ಇತ್ತೀಚಿನ ದಿನಗಳಲ್ಲಿ ಯುವಕರು, ಮೊಬೈಲ್, ವಾಟ್ಸಪ್, ಇಂಟರ್‍ನೆಟ್, ಫೇಸ್ ಬುಕ್, ವೀಕ್ಷಣೆಯಲ್ಲಿಯೇ ತಲ್ಲೀನರಾಗುತ್ತಿದ್ದು, ಓದುವ ಪ್ರವೃತ್ತಿಯಿಂದ ದೂರವಾಗುತ್ತಿದ್ದಾರೆ. ಇಂಟರ್‍ನೆಟ್ ಹಾಗೂ ಮೊಬೈಲ್‍ಗಳಲ್ಲಿ ಎಲ್ಲಾ ಮಾಹಿತಿಗಳು ಕ್ಷಣಾರ್ಧದಲ್ಲಿ ಲಭ್ಯವಾಗುತ್ತಿದೆಯಾದರೂ, ಅದು ನಮ್ಮ ಜ್ಞಾನದ ವೃದ್ಧಿಗೆ ಪೂರಕವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

     ಅಪೂರ್ಣವಾದ ಮಾಹಿತಿಗಳಿಂದ ಯಾವುದೇ ವಿಧವಾದ ಸಂಶೋಧನೆ ಸೇರಿದಂತೆ, ಇನ್ನಿತರ ಚಟುವಟಿಕೆಗಳಿಗೆ ಪ್ರಯೋಜನ ವಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಗ್ರಂಥಾಲಯಗಳಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವಂತೆ, ಮನವಿ ಮಾಡಿದರು.ಸಾಹಿತಿ ಲಲಿತ ಶೇಷಾದ್ರಿ ಅವರ ಸಪ್ತಪದಿ, ಪ್ರೇಕ್ಷಣೀಯ ಸ್ಥಳಗಳು ಹಾಗೂ 81 ಶಿವನ ಕ್ಷೇತ್ರ ದರ್ಶನದ ಪುಸ್ತಕಗಳು ನಮ್ಮ ನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕತೆಯ ಪ್ರತಿಬಿಂಬವಾಗಿವೆ.

     ಕನ್ನಡಿಗರು ಇಂತಹ ಕೃತಿಗಳನ್ನು ಓದುವುದರ ಮೂಲಕ ನಮ್ಮ ನಾಡಿನ ಭವ್ಯ ಪರಂಪರೆ, ಇತಿಹಾಸವನ್ನು ತಿಳಿಯಬಹುದಾಗಿದೆ ಎಂದ ಅವರು, ದಿವಾನ್ ಶೇಷಾದ್ರಿ ಅವರ ಸಾಹಿತ್ಯಾಸಕ್ತಿ, ಲಲಿತ ಶೇಷಾದ್ರಿ ಅವರಿಗೆ ರಕ್ತದಲ್ಲಿಯೇ ಬಂದಿರುವುದರಿಂದ ಅವರ ಕೃತಿಗಳೂ ಸಹ, ಆಕರ್ಷಣೀಯವಾಗಿವೆ. ಈ ಕೃತಿಗಳನ್ನು ಪ್ರತಿಯೊಬ್ಬರೂ ಓದುವ ಮೂಲಕ, ತಮ್ಮ ಜ್ಞಾನಾರ್ಜನೆಯನ್ನು ವೃದ್ಧಿಸಿಕೊಳ್ಳಬೇಕೆಂದು ತಿಳಿಸಿದರು.

      ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಹೆಣ್ಣು ಮಕ್ಕಳು ಸಾಹಿತ್ಯಾಸಕ್ತಿಯನ್ನು ಹೆಚ್ಚಾಗಿ ಬೆಳೆಸಿಕೊಳ್ಳಬೇಕು. ಓದುವ ಪ್ರವೃತ್ತಿಯಿಂದ ಮನಸ್ಸಿನಲ್ಲಿರುವ ವ್ಯಾಕುಲತೆ, ದುಃಖ – ದುಮ್ಮಾನಗಳು ನಿಯಂತ್ರಣಕ್ಕೆ ಬರುತ್ತವೆ. ಟಿವಿಗಳಲ್ಲಿ ಬರುವ ಧಾರವಾಹಿಗಳನ್ನು ಮಹಿಳೆಯರೇ ಹೆಚ್ಚು ವೀಕ್ಷಣೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇಂತಹ ಪ್ರವೃತ್ತಿಯಿಂದ ದೂರ ಸರಿದು, ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಸಮಾರಂಭದಲ್ಲಿ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ, ನಿವೃತ್ತ ಲೋಕಾಯುಕ್ತ ಡಾ. ಸಂತೋಷ್ ಹೆಗಡೆ, ಸಾಹಿತಿ ಲಲಿತ ಶೇಷಾದ್ರಿ, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಸೇರಿದಂತೆ, ಹಲವು ಗಣ್ಯರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಗ್ರಂಥಾಲಯ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link