ತುಮಕೂರು

ವಿವಿಧ ಇಲಾಖೆಗಳ ಸಮನ್ವಯ ಕೊರತೆಯಿಂದಾಗಿ ಬುಗುಡನಹಳ್ಳಿ ಕೆರೆಯ ನೀರು ಸಂಗ್ರಹಣಾ ಸಾಮಥ್ರ್ಯದ ಬಗ್ಗೆ ಗೊಂದಲಗಳಿದ್ದು, ಸಂಬಂಧಿಸಿದ ಇಲಾಖೆಗಳು ಸೇರಿ ಜಂಟಿ ಸರ್ವೇ ಮಾಡುವವರೆಗೆ ಹೂಳೆತ್ತುವ ಕಾರ್ಯ ಮಾಡದಂತೆ ಸಂಸದ ಜಿ.ಎಸ್.ಬಸವರಾಜು ಸೂಚಿಸಿದರು.
ಬುಗುಡನಹಳ್ಳಿ ಕೆರೆಯಲ್ಲಿನ ಹೂಳೆತ್ತುವ ಕಾಮಗಾರಿ ಕುರಿತು ಕೆರೆಯ ಭಾಗದಲ್ಲಿ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಿದ ನಂತರ ಸಂಸದರು ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ದಿಶಾ ಸಮಿತಿ ಸದಸ್ಯರೊಂದಿಗೆ ಕೆರೆ ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಸಂಸದರು, ಬುಗುಡನಹಳ್ಳಿ ಕೆರೆಯಲ್ಲಿ ನೀರು ಶೇಖರಣೆಯಾಗುವುದರ ಬಗ್ಗೆ ಹಲವು ಗೊಂದಲಗಳಿವೆ. ಬುಗುಡನಹಳ್ಳಿ ಕೆರೆಯ ನೀರು ಸಂಗ್ರಹ ಸಾಮಥ್ರ್ಯವು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಳೆಯ ದಾಖಲೆಗಳ ಪ್ರಕಾರ 240 ಎಂಸಿಎಫ್‍ಟಿ ಹಾಗೂ ಈಗಿನ ಸರ್ವೇ ಪ್ರಕಾರ 300 ಎಂಸಿಎಫ್‍ಟಿ, ಪಾಲಿಕೆ ದಾಖಲೆ ಪ್ರಕಾರ 308 ಎಂಸಿಎಫ್‍ಟಿ, ಹೇಮಾವತಿ ನಾಲಾ ಇಲಾಖೆ ಪ್ರಕಾರ 363 ಎಂಸಿಎಫ್‍ಟಿ ಇರುತ್ತದೆ.
ಕೆರೆ ಸಾಮಥ್ರ್ಯದ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ಮೂರು ಇಲಾಖೆಗಳು ಒದಗಿಸಿರುವ ಮಾಹಿತಿಯಲ್ಲಿ ವ್ಯತ್ಯಾಸವಿದೆ. ಇದರಿಂದ ಬುಗುಡನಹಳ್ಳಿ ಕೆರೆಗೆ ಎಷ್ಟು ನೀರು ಬಂದಿದೆ? ಎಷ್ಟು ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ದೊರಕುತ್ತಿಲ್ಲ ಎಂದು ಕಿರಿಕಾರಿದರು.
ಮುಂಬರುವ ಬೇಸಿಗೆಯಲ್ಲಿ ನೀರು ಕೆರೆ ಖಾಲಿಯಾದ ನಂತರ ಮೂರು ಇಲಾಖೆಗಳು ಜೊತೆÀಗೂಡಿ ಹೊಸದಾಗಿ ಸರ್ವೆ ಮಾಡಿ ಕೆರೆ ಸಾಮಥ್ರ್ಯದ ಬಗ್ಗೆ ಪೂರ್ಣ ದಾಖಲೆ ಒದಗಿಸುವವರೆಗೂ ಹೂಳೆತ್ತುವ ಕಾಮಗಾರಿಯನ್ನು ಸ್ಥಗಿತಗೊಳಿಸಿ. ನಗರದಲ್ಲಿರುವ ಗಂಗಸಂದ್ರ ಕೆರೆ, ಮರಳೂರು ಅಮಾನಿಕೆರೆಗೆ ಹೇಮಾವತಿ ನೀರನ್ನು ತುಂಬಿಸಲು ಕಾರ್ಯಯೋಜನೆ ರೂಪಿಸಿ ಮುಂದಿನ ದಿನಗಳಲ್ಲಿ ಗಂಗಸಂದ್ರ ಕೆರೆ, ಮರಳೂರು ಕೆರೆ, ಕುಪ್ಪೂರು ಕೆರೆಗಳಿಂದ ಆಯಾ ವ್ಯಾಪ್ತಿಯ ವಾರ್ಡುಗಳಿಗೆ ನೀರನ್ನು ಒದಗಿಸಬಹುದು. ಈಗ ಬುಗುಡನಹಳ್ಳಿ ಕೆರೆಯಲ್ಲಿ ಹೂಳೆತ್ತುವುದು ಸಾಮಾನ್ಯದ ಕೆಲಸವಲ್ಲ. ಸುಮಾರು 500ಕ್ಕೂ ಹೆಚ್ಚು ಎಕರೆ ಇರುವ ಜಾಗದಲ್ಲಿ 5 ರಿಂದ 6 ಅಡಿ ಹೂಳು ತೆಗೆದರೆ ಆ ಮಣ್ಣನ್ನು ಎಲ್ಲಿ ಹಾಕುತ್ತಾರೆ. ಅದು ಅಸಾಧ್ಯದ ಕೆಲಸ ಎಂದರು.
ಕೆರೆಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಕೇಳಲಾದ ಪ್ರಶ್ನೆಗಳಿಗೆ ಸೂಕ್ತವಾದ ದಾಖಲೆಗಳು ಇರಲಿಲ್ಲ. ಜೊತೆಗೆ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿತ್ತಾದರೂ ಇಲ್ಲಿಯವರೆಗೆ ಈ ಕೆಲಸ ಮಾಡಿಲ್ಲ. ಇದರಿಂದ ಆಕ್ರೋಶಗೊಂಡ ಸಂಸದರು ಇಲಾಖಾಧಿಕಾರಿಗಳು ಯಾವುದೇ ಕಾಮಗಾರಿಗೆ ಸಂಬಂಧಿಸಿದ ಮಾಹಿತಿ ಕೇಳಿದಾಗ ನೀಡುವ ಬೇಜವಾಬ್ದಾರಿ ಉತ್ತರವನ್ನು ನಾನು ಸಹಿಸುವುದಿಲ್ಲ.
ಈ ಕಾರಣಕ್ಕಾಗಿಯೇ ಕುಡಿಯುವ ನೀರು ಸೇರಿದಂತೆ ಜಿಲ್ಲೆಯ ಪ್ರತಿಯೊಂದು ಮಾಹಿತಿಯನ್ನು ಜಿಐಎಸ್ ಲೇಯರ್‍ವಾರು ಬೇಸ್‍ಮ್ಯಾಪ್ -1ಗೆ ಅಪ್‍ಲೋಡ್ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದು ಎಂದು ತಿಳಿಸಿದರು. ಅದಕ್ಕೆ ಉತ್ತರವಾಗಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಹಾಗೂ ಪಾಲಿಕೆಯವರು 15 ದಿನಗಳೊಳಗೆ ಸೂಕ್ತ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಸೇರಿಸುವುದರ ಜೊತೆಗೆ ಸಂಪೂರ್ಣ ಮಾಹಿತಿಯನ್ನು ನೀಡುವುದಾಗಿ ತಿಳಿಸಿದರು.
ನಗರ ವ್ಯಾಪ್ತಿಯ ಮರಳೂರು ಅಮಾನಿಕೆರೆ, ಗಂಗಸಂದ್ರ, ಕುಪ್ಪೂರು, ದೇವರಾಯಪಟ್ಟಣ, ಹೊನ್ನೇನಳ್ಳಿ ಕೆರೆಗಳಿಂದ ನಗರಕ್ಕೆ 24 ಗಂಟೆಗಳ ಕಾಲ ನೀರು ಸರಬರಾಜು ಮಾಡುವ ಯೋಜನೆಯನ್ನು ರೂಪಿಸಲು ಚಿಂತನೆ ನಡೆಸಲಾಗಿದೆ. ಅದೇ ರೀತಿ ಬುಗುಡನಹಳ್ಳಿ ಕೆರೆ ಸೇರಿದಂತೆ ನಗರದ ಉಳಿದ ಕೆರೆಗಳ ಸರ್ವೇ ಕೈಗೊಂಡು ಮಾಹಿತಿಯನ್ನು ಬರುವ 15 ದಿನಗಳೊಳಗಾಗಿ ದಾಖಲೆ ಸಹಿತ ತಮಗೆ ಒದಗಿಸಬೇಕು. ಕೆರೆ ಹೂಳೆತ್ತುವ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರಿಗೆ ಈಗಾಗಲೇ ಪಾವತಿ ಮಾಡಿರುವ ಮೊತ್ತ ಸೇರಿ ಶೇ.50ರಷ್ಟು ಮಾತ್ರ ಹಣ ಪಾವತಿ ಮಾಡಬೇಕು. ಸರ್ವೇ ಕಾರ್ಯ ಪೂರ್ಣಗೊಂಡ ನಂತರ ಬಾಕಿ ಹಣವನ್ನು ಪಾವತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಹೇಮಾವತಿ ನೀರು ನಗರಕ್ಕೆ 600 ಎಂಸಿಎಫ್‍ಟಿ ಯಷ್ಟು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಹೇಮಾವತಿ ಇಲಾಖೆಯವರು 1.200 ಎಂಸಿಎಫ್‍ಟಿ ನೀರನ್ನು ಬಿಡಲಾಗಿದೆ ಎಂದು ವರದಿಗಳನ್ನು ತೋರಿಸಿ ಹಣ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಸರ್ವೇ ನಡೆಸಿದ ನಂತರ ಪ್ರತಿಯೊಂದು ಮಾಹಿತಿಯನ್ನು ವೆಬ್‍ಸೈಟ್ ಮೂಲಕ ಮಾಹಿತಿ ತಿಳಿಯುವಂತಾದರೆ ಹಣ ಲೂಟಿ ಹೊಡೆಯುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಮಾತನಾಡಿ, ಬುಗುಡನಹಳ್ಳಿ ಕೆರೆ ನೀರು ಸಂಗ್ರಹ ಸಾಮಥ್ರ್ಯಕ್ಕೆ ಸಂಬಂಧಿಸಿದಂತೆ ಹೇಮಾವತಿ ನಾಲೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ವಿಭಿನ್ನ ರೀತಿಯ ಅಂಕಿ-ಅಂಶಗಳಿದ್ದು, ಇದರ ಬಗ್ಗೆ ಪರಿಶೀಲಿಸಲಾಗುತ್ತಿದೆ. ಹೂಳೆತ್ತುವ ಕಾಮಗಾರಿ ಅವಶ್ಯಕತೆ ಇದೆಯೋ ಇಲ್ಲವೋ ಎಂದು ಪರಿಶೀಲಿಸಲು ಮಾನ್ಯ ಸಂಸದರು ಬುಗುಡನಹಳ್ಳಿಗೆ ಭೇಟಿ ನೀಡಿದ್ದಾರೆ ಎಂದರು.
ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಲ್ಲಿ ಮೂರು ಇಲಾಖೆಗಳು ಜಂಟಿಯಾಗಿ ಕೈಗೊಳ್ಳಬೇಕಾದ ಸರ್ವೇ ಮತ್ತಿತರ ಕಾರ್ಯಗಳ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ಇಂಡಿಯನ್ ಇನ್ಸ್‍ಟ್ಯೂಟ್ ಆಫ್ ಸೈನ್ಸ್ ಸಹಯೋಗದಲ್ಲಿ ಮೂರು ಇಲಾಖೆಗಳು ಕೆರೆಯ ನೀರು ಸಂಗ್ರಹ ಸಾಮಥ್ರ್ಯದ ಬಗ್ಗೆ ಒಂದೇ ರೀತಿ ಅಂಕಿ-ಅಂಶ ನೀಡಿದಲ್ಲಿ ಹೇಮಾವತಿಯಿಂದ ಎಷ್ಟು ನೀರು ಹರಿದು ಬರುತ್ತಿದೆ? ಎಷ್ಟು ಸಂಗ್ರಹವಾಗಿದೆ? ನಗರಕ್ಕೆ ಅಗತ್ಯವಿರುವ ನೀರಿನ ಪ್ರಮಾಣವನ್ನು ಅರಿಯಬಹುದು. ಕುಪ್ಪೂರು, ದೇವರಾಯಪಟ್ಟಣ, ಗಂಗಸಂದ್ರ ಸೇರಿದಂತೆ ನಗರದ ಇನ್ನಿತರ ಕೆರೆಗಳ ಹೂಳೆತ್ತುವ ಕಾರ್ಯದ ಅವಶ್ಯಕತೆಯಿದ್ದು, ದಿಶಾ ಸಮಿತಿಯ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಪ್ರಭಾರ ಆಯುಕ್ತ ಸಿ.ಎಲ್.ಶಿವಕುಮಾರ್, ಸ್ಮಾರ್ಟ್ ಸಿಟಿಯ ಮುಖ್ಯ ಎಂಜಿನಿಯರ್ ಬಸವರಾಜಗೌಡ, ಹೇಮಾವತಿ ಇಲಾಖೆಯ ಎಂಜಿನಿಯರ್‍ಗಳು, ಪಾಲಿಕೆಯ ಎಂಜಿನಿಯರ್ ವಸಂತ್, ದಿಶಾ ಸಮಿತಿಯ ಸದಸ್ಯರಾದ ಕುಂದರನಹಳ್ಳಿ ರಮೇಶ್, ರಘೋತ್ತಮರಾವ್, ಪ್ರೇಮಾ ಹೆಗಡೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







