ಹೊಸಪೇಟೆ :
ವಿಜಯನಗರ ವಿಧಾನಸಭಾ ಉಪಚುನಾವಣೆ(ಡಿ.5) ಇಂದು ನಡೆಯಲಿದ್ದು, ಮತದಾನ ಪ್ರಕ್ರಿಯೆ ನಡೆಯುವ ನಿಟ್ಟಿನಲ್ಲಿ ಅದಕ್ಕೆ ಬೇಕಾದ ಎಲ್ಲಾ ಸಕಲ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ .
ಡಿ.5ರಂದು ಬೆಳಿಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 2,36,026 ಮತದಾರರು ಅಭ್ಯರ್ಥಿಗಳ ಹಣೆಬರಹವನ್ನು ಮತಯಂತ್ರದಲ್ಲಿ ದಾಖಲಿಸಲಿದ್ದಾರೆ. ಇದಕ್ಕಾಗಿ ವಿಜಯನಗರ ಕ್ಷೇತ್ರಾದಾದ್ಯಾಂತ 247 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 21 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 10 ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಪೊಲೀಸ್ ಸಿಬ್ಬಂದಿ ಹೊರತುಪಡಿಸಿ 3500 ಜನರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. 2 ಕೆಎಸ್‍ಆರ್‍ಪಿ ಮತ್ತು 1 ತೆಲಂಗಾಣ ಪೊಲೀಸ್ ಪಡೆಯನ್ನು ಈ ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.
ಹೊಸಪೇಟೆಯ ಮಸ್ಟರಿಂಗ್ ನಡೆಯುತ್ತಿದ್ದ ಸಂಡೂರು ರಸ್ತೆಯಲ್ಲಿರುವ ಲಿಟ್ಲ್ ಫ್ಲವರ್ ಸ್ಕೂಲ್ ಆವರಣದ ಸ್ಥಳಕ್ಕೆ ಭೇಟಿ ನೀಡಿ ನಡೆಯುತ್ತಿರುವ ಕಾರ್ಯಗಳನ್ನು ಪರಿಶೀಲಿಸಿದರು.
60 ವಾಹನಗಳ ಬಳಕೆ
ಚುನಾವಣಾ ಕಾರ್ಯಕ್ಕೆ 40 ಬಸ್‍ಗಳು, 20 ಮಿನಿ ಟೆಂಪೋಗಳನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ ಅವರು, ಉಪಚುನಾವಣೆಯಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಶೇ20ರಷ್ಟು ಮತಯಂತ್ರಗಳು ಲಭ್ಯವಿವೆ. ಇದೇ ಮೊದಲ ಬಾರಿಗೆ ಎಂ-3ಮಿಷನ್‍ಗಳನ್ನು ಉಪಯೋಗಿಸಲಾಗುತ್ತಿದೆ ಎಂದರು.
ನೀತಿ ಸಂಹಿತೆ ಉಲ್ಲಂಘನೆಯಾದ ಕಡೆ ಪ್ರಕರಣ ದಾಖಲಿಸಲಾಗಿದೆ. ಉಲ್ಲಂಘನೆ ದೂರುಗಳು ಬಂದ ತಕ್ಷಣ ನಮ್ಮ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಲಿದ್ದಾರೆ ಎಂದು ಖಚಿತಪಡಿಸಿದ ಅವರು, ತಹಶೀಲ್ದಾರರನ್ನು ಚುನಾವಣಾ ಕಾರ್ಯಕ್ಕಾಗಿ ನೇಮಿಸಕೊಳ್ಳಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ, ಪ್ರೊಬೇಷನರಿ ಐಎಎಸ್ ಅಧಿಕಾರಿ ಕಾಂಡೋ, ಎಂಸಿಎಂಸಿ ನೋಡೆಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







