ತುಮಕೂರು : ಕುಡಿಯುವ ನೀರಿಗೆ ಶೀಘ್ರವೇ ದರ ನಿಗದಿ

ತುಮಕೂರು

    ತುಮಕೂರು ನಗರದಲ್ಲಿ ಹೇಮಾವತಿ ನೀರನ್ನು 24/7 ಯೋಜನೆಯಡಿ ಪೂರೈಸುವ ಬೃಹತ್ ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತುತ ನಗರದ ಸೀಮಿತ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಾಯೋಗಿಕ ನೀರು ಪೂರೈಕೆ ಕಾರ್ಯಕ್ರಮ ಬಹುತೇಕ ಯಶಸ್ವಿಯಾಗುತ್ತಿರುವ ಹಿನ್ನೆಲೆಯಲ್ಲಿ ಸದಸ್ಯದಲ್ಲೇ ಈ ನೀರು ಪೂರೈಕೆಗೆ ಮೀಟರ್ ದರವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ.

    ಪ್ರಸ್ತುತ ಜನವರಿ 26 ರಿಂದ ನಗರದ ನಿಗದಿತ ಪ್ರದೇಶಗಳಲ್ಲಿ 24/7 ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆ ಮಾಡಲಾಗಿದೆ. ನಗರದ ವಿವಿಧ ವಾರ್ಡ್ ವ್ಯಾಪ್ತಿಯ ದಿಬ್ಬೂರು, ಅರಳಿಮರದ ಪಾಳ್ಯ, ಅಶೋಕನಗರ, ಸಪ್ತಗಿರಿ ಬಡಾವಣೆ, ಸಿದ್ಧರಾಮೇಶ್ವರ ಬಡಾವಣೆ, ಗಾಂಧಿನಗರ, ಬನಶಂಕರಿ ನಗರ, ಜಯನಗರ ಹಾಗೂ ಸುತ್ತಮುತ್ತ ಪ್ರಸ್ತುತ ಪ್ರತಿನಿತ್ಯ ಒಂದು ಗಂಟೆ ಅವಧಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. 24/7 ಯೋಜನೆಗಾಗಿ ಹೊಸದಾಗಿ ಅಳವಡಿಸಿರುವ ಪೈಪ್‍ಲೈನ್ ವ್ಯವಸ್ಥೆಯಲ್ಲಿ ನೀರು ಸೋರಿಕೆಯಾಗುತ್ತಿದೆಯೇ? ನಿಗದಿತ ಒತ್ತಡದಲ್ಲೇ ನೀರು ಸರಬರಾಜಾಗುತ್ತಿದೆಯೇ? ಎಂಬಿತ್ಯಾದಿ ವಿವರಗಳನ್ನು ತಪಾಸಣೆ ಮಾಡಲಾಗುತ್ತಿದೆ. ಪೈಪ್‍ಲೈನ್‍ನಲ್ಲಿರಬಹುದಾದ ಮಣ್ಣಿನ ಅಂಶಗಳು, ಸೋರಿಕೆ ಆಗುವೆಡೆ ರಿಪೇರಿ ಮಾಡಿದಾಗ ಪೈಪ್‍ಲೈನ್ ಒಳಗೆ ಹೋಗುವ ಮಣ್ಣು ಸೇರಿ ಪ್ರಸ್ತುತ ಅಲ್ಪ ಪ್ರಮಾಣದ ಮಣ್ಣಿನ ಬಣ್ಣ ನೀರಿನಲ್ಲಿರುವುದು ಕಂಡುಬಂದಿದೆ. ಅಷ್ಟನ್ನು ಬಿಟ್ಟರೆ ನಿಗದಿತ ಪ್ರದೇಶದಲ್ಲಿ ನೀರಿನ ಪೂರೈಕೆ ಯಶಸ್ವಿಯಾಗಿಯೇ ನಡೆದಿದೆಯೆಂದು ಮೂಲಗಳು ಹೇಳುತ್ತಿವೆ.

    ಪ್ರಾಯೋಗಿಕವಾಗಿ ಕೈಗೊಂಡ ಯೋಜನೆಯಲ್ಲಿ ಸಫಲತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ನೀರಿಗೆ ದರ ನಿಗದಿ ಮಾಡುವ ಬಗ್ಗೆ ಆಲೋಚಿಸಲಾಗುತ್ತಿದೆ. ಈಗಾಗಲೇ ಈ ಹೊಸ ಪೈಪ್‍ಲೈನ್ ಜೊತೆಗೆ ಮನೆಮನೆಗೆ ಮೀಟರ್ ಅಳವಡಿಸಲಾಗಿದ್ದು, ದರವನ್ನು ನಿಗದಿಪಡಿಸಿದರೆ ಇನ್ನು ಮುಂದೆ ಸದರಿ ಮೀಟರ್‍ನಲ್ಲಿ ನಮೂದಾಗುವ ನೀರಿನ ಬಳಕೆಗೆ (ಲೀಟರ್ ಲೆಕ್ಕದಲ್ಲಿ) ಅನುಗುಣವಾಗಿ ನೀರಿನ ಶುಲ್ಕವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ. ಲೀಟರ್ ನೀರಿಗೆ ಎಷ್ಟು ದರ ನಿಗದಿಪಡಿಸಬೇಕೆಂಬುದು ಈ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

    ಬುಗುಡನಹಳ್ಳಿಯ ಹೇಮಾವತಿ ಜಲಸಂಗ್ರಹಾಗಾರದಲ್ಲಿ ಈಗಿರುವ ನೀರು ಈ ವರ್ಷದ ಆಗಸ್ಟ್‍ವರೆಗೂ ಬಳಕೆಗೆ ಬರುತ್ತದೆ. ಇದೇ ಮಾರ್ಚ್ ತಿಂಗಳಿನಲ್ಲಿ ಹೇಮಾವತಿ ನಾಲೆಯಿಂದ ಬುಗುಡನಹಳ್ಳಿ ಜಲಸಂಗ್ರಹಾಗಾರಕ್ಕೆ ಮತ್ತೊಮ್ಮೆ ನೀರನ್ನು ಬಿಡಲಿರುವುದರಿಂದ ಅದೂ ಸೇರಿದರೆ ಈ ವರ್ಷದ ಕೊನೆಯವರೆಗೂ ತುಮಕೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದು ಎಂದು ಹೇಳಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link