ಬೆಂಗಳೂರು
ರಾಜ್ಯದ ಖಾಸಗಿ ಶಾಲೆಗಳ ಎರಡೂವರೆ ಲಕ್ಷ ಶಿಕ್ಷಕರು ವೇತನ ಲಭ್ಯವಾಗದೆ ತೀವ್ರ ಸಂಕಷ್ಟದಲ್ಲಿದ್ದು ಸರ್ಕಾರ ತಕ್ಷಣವೇ ಅವರಿಗೆ ಸಾಲ ಸೌಲಭ್ಯ ಸೇರಿದಂತೆ ವಿವಿಧ ಬಗೆಯ ಆರ್ಥಿಕ ನೆರವು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲಿ ಆಗ್ರಹಿಸಿದ್ದಾರೆ.
ರಾಜ್ಯದ ಇಪ್ಪತ್ತು ಸಾವಿರ ಖಾಸಗಿ ಶಾಲೆಗಳ ಶಿಕ್ಷಕರು ಹಾಗೂ ಸರ್ಕಾರದ ಅತಿಥಿ ಉಪನ್ಯಾಸಕರು ಸಕಾಲಕ್ಕೆ ವೇತನ ದೊರೆಯದೆ ಮತ್ತು ವೇತನ ಕಡಿತದಿಂದ ದು:ಸ್ಥಿತಿಯಲ್ಲಿದ್ದಾರೆ ಎಂದು ಟ್ವಿಟರ್ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ.ಖಾಸಗಿ ಶಾಲೆಗಳ ಶಿಕ್ಷಕರು ವಿವಿಧ ಬಗೆಯ ಸಂಕಷ್ಟದಲ್ಲಿದ್ದಾರೆ.ವಿದ್ಯಾರ್ಥಿಗಳಿಂದ ಶುಲ್ಕ ಲಭ್ಯವಾಗಿಲ್ಲಎಂಬ ಕಾರಣಕ್ಕಾಗಿ ಹಲವರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.ಅದೇ ರೀತಿ ಬಹಳ ಮಂದಿಗೆ ವೇತನ ಕಡಿತ ಮಾಡಲಾಗಿದೆ.ಈ ವೇತನವೂ ಸಕಾಲಕ್ಕೆ ಸಿಗುತ್ತಿಲ್ಲ.
ಇವರಿಗೆ ಬೇರೆ ಕೆಲಸ ಮಾಡುವುದೂ ಸಾಧ್ಯವಿಲ್ಲ.ಹೀಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಇವರು ಮನೆ ಬಾಡಿಗೆ ಕಟ್ಟಲೂ ಪರದಾಡುವ ಸ್ಥಿತಿ ಎದುರಾಗಿದೆ.ಕಳೆದ ಏಪ್ರಿಲ್‍ನಿಂದ ಇಂತಹ ಸಂಕಷ್ಟಕ್ಕೆ ಸಿಲುಕಿರುವ ಇವರ ಪೈಕಿ ಬಹುತೇಕರು ದೈನದಂದಿನ ಬದುಕು ಸಾಗಿಸಲೂ ಕಷ್ಟಪಡುತ್ತಿದ್ದಾರೆ.
ಸರ್ಕಾರ ತಕ್ಷಣವೇ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಮಾತುಕಡೆ ನಡೆಸಿ ಈ ಶಿಕ್ಷಕರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಮುಂದಾಗಬೇಕು.ವಿದ್ಯಾರ್ಥಿಗಳಿಂದ ಶುಲ್ಕ ಪಾವತಿಯಾಗುತ್ತಿಲ್ಲ ಎಂಬ ಕಾರಣ ಹೇಳಿ ಅವರನ್ನು ಕೆಲಸದಿಂದ ಕಿತ್ತು ಹಾಕುವ ಖಾಸಗಿ ಶಿಕ್ಷಣ ಸಂಸ್ಥೆಗಳ ಕ್ರಮವನ್ನು ತಪ್ಪಿಸಬೇಕು.
ಇದೇ ರೀತಿ ಅತಿಥಿ ಉಪನ್ಯಾಸಕರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಆಗಿಲ್ಲ.ಅವರು ಕೂಡಾ ಅನುದಿನದ ಬದುಕಿಗಾಗಿ ಪರದಾಡುತ್ತಿದ್ದು ಅವರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








