ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ತರಕಾರಿ ವಿತರಣೆ

ಹುಳಿಯಾರು

     ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹುಟ್ಟುಹಬ್ಬದ ಅಂಗವಾಗಿ ಹುಳಿಯಾರಿನ ಸೀಲ್‍ಡೌನ್ ಪ್ರದೇಶದಲ್ಲಿ ಹಾಲು, ಬಾಳೆಹಣ್ಣು, ತರಕಾರಿ ವಿತರಿಸುವ ಮೂಲಕ ಅವರ ಅಭಿಮಾನಿಗಳು ಅರ್ಥ ಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿದರು.

      ತಿಮ್ಲಾಪುರ ಗ್ರಾಪಂ ಮಾಜಿ ಅಧ್ಯಕ್ಷ ನಂದಿಹಳ್ಳಿ ದೇವರಾಜು ಈ ಸಂದರ್ಭದಲ್ಲಿ ಮಾತನಾಡಿ, ಕೊರೊನಾ ಪತ್ತೆಯಾಗಿರುವ ಬೀದಿಯನ್ನು ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಸೀಲ್‍ಡೌನ್ ಮಾಡಿ ಹೋದವರು ಮತ್ತೆ ಇತ್ತ ತಿರುಗಿಯೂ ಸಹ ನೋಡಿಲ್ಲ. ಕುಡಿಯುವ ನೀರು ಸಹ ಸಿಗದೆ ಇಲ್ಲಿನ ನಿವಾಸಿಗಳು ಕಷ್ಟ ಅನುಭವಿಸುತ್ತಿದ್ದಾರೆ. ದುಡಿಯುವ ಕೈಗಳನ್ನು ಸೀಲ್‍ಡೌನ್ ನೆಪದಲ್ಲಿ ಕಟ್ಟಿಹಾಕಿದ್ದು, ಇವರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಇನ್ನಾದರೂ ಸೀಲ್‍ಡೌನ್ ಪ್ರದೇಶಕ್ಕೆ ನೀರು, ಆಹಾರ ಸಾಮಗ್ರಿಗಳನ್ನು ವಿತರಿಸಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.

     ಸಿದ್ಧರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಕಳಂಕ ರಹಿತ ಆಡಳಿತ ನಡೆಸಿದ್ದಾರೆ. ಅನ್ನಭಾಗ್ಯ, ಸಾಲಮನ್ನಾ, ಶಾದಿಭಾಗ್ಯ, ಕ್ಷೀರಭಾಗ್ಯ ಹೀಗೆ ಅನೇಕ ಭಾಗ್ಯಗಳನ್ನು ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಇಂತಹ ಜನಾನುರಾಗಿ ರಾಜಕಾರಣಿಯು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು, ಮತ್ತೊಷ್ಟು ಬಡವರ, ಕೃಷಿಕರ, ರೈತರ ಪರ ಭಾಗ್ಯಗಳ ಸರಮಾಲೆಯನ್ನೇ ನೀಡಬೇಕು ಎಂದು ಆಶಿಸಿದರು.

    ತಾಪಂ ಸದಸ್ಯ ಏಜೆಂಟ್ ಕುಮಾರ್ ಮಾತನಾಡಿ, ಸಿದ್ಧರಾಮಯ್ಯ ಅವರು ಜಾತ್ಯತೀತವಾಗಿ, ಪಕ್ಷಾತೀತವಾಗಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುವುದರೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಜನನಾಯಕರಾಗಿರುವ ಸಿದ್ದರಾಮಯ್ಯ ಅವರ ಜನ್ಮ ದಿನವನ್ನು ಸೀಲ್ ಡೌನ್ ಪ್ರದೇಶದಲ್ಲಿ ತರಕಾರಿ ವಿತರಿಸಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.

      ಪಪಂ ಮಾಜಿ ಸದಸ್ಯ ಧನುಷ್ ರಂಗನಾಥ್ ಮಾತನಾಡಿ, ಸಿದ್ಧರಾಮಯ್ಯ ಅವರು ಕರ್ನಾಟಕವನ್ನು ಅನ್ನಭಾಗ್ಯದ ಮೂಲಕ ಹಸಿವು ಮುಕ್ತ ರಾಜ್ಯ ಮಾಡಿದ್ದರು. ಇಂದಿರಾ ಕ್ಯಾಂಟೀನ್ ತೆರೆದು ಮೂರೊತ್ತು ಬಡವರಿಗೆ ಊಟ ಹಾಕಿದರು. ಇವರ ಹುಟ್ಟುಹಬ್ಬಕ್ಕೆ ಸೀಲ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ನೀಡಿದಾಗ ಮಾತ್ರ ಹೆಚ್ಚು ಅರ್ಥಪೂರ್ಣವೆಂದು ತರಕಾರಿ ನೀಡಿರುವುದಾಗಿ ತಿಳಿಸಿದ ಅವರು, ಸಿದ್ದರಾಮಯ್ಯ ಅವರ ಇಂದಿರಾ ಕ್ಯಾಂಟೀನ್‍ಗಳನ್ನು ಈಗಿನ ಸರ್ಕಾರ ಮುಚ್ಚದೆ ಮುಂದುವರಿಸಿಕೊಂಡು ಹೋಗಬೇಕಿದೆ ಎಂದರು.ಗ್ರಾಪಂ ಮಾಜಿ ಸದಸ್ಯ ಬಾಲಣ್ಣ, ಕನಕ ಬ್ಯಾಂಕ್ ಅಧ್ಯಕ್ಷ ಸೀಗೆಬಾಗಿ ಸಿದ್ದರಾಮಯ್ಯ, ಸಾದತ್, ಧನುಷ್ ಮತ್ತಿತರರು ಇದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link