ಜ.8: ರೈತರ ಬೇಡಿಕೆ ಈಡೇರಿಸದ ಕಾರಣ ಸಾರ್ವತ್ರಿಕ ಮುಷ್ಕರಕ್ಕೆ ಕರೆ

ಗುಬ್ಬಿ

    ರೈತರ ಹಿತ ಕಾಪಾಡುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದ್ದು ನಮ್ಮ ಯಾವುದೇ ಬೇಡಿಕೆಗಳನ್ನು ಈಡೇರಿಸದ ಕಾರಣ ಜ.8 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.

    ಪಟ್ಟಣದ ಎಪಿಎಂಸಿ ಆವರಣದ ರೈತ ಸಂಘದ ಕಚೇರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ತುಮಕೂರಿಗೆ ಬಂದಿದ್ದ ಪ್ರಧಾನಿಯವರು ಯಾವುದೇ ಹೊಸತನವನ್ನು ತರದೆ ಕೇವಲ ಹಳೆಯ ಯೋಜನೆಯನ್ನೆ ಇನ್ನೊಂದು ಕಂತಿನಲ್ಲಿ ರೈತರ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳುವುದಕ್ಕೆ ಬಂದಿದ್ದು ಬಿಟ್ಟರೆ ರೈತರಿಗೆ ಬೇಕಾದ ಯಾವ ಒಳ್ಳೆಯ ಯೋಜನೆಗಳ ಬಗ್ಗೆಯು ಮಾತನಾಡಲಿಲ್ಲ. ಇದುವರೆಗೂ ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆಯನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವ ಸರಕಾರಗಳ ವಿರುದ್ಧ ಬಂದ್ ಮಾಡಲಾಗುತ್ತಿದೆ.

   ಡಾ:ಸ್ವಾಮಿನಾಥನ್ ವರದಿಯನ್ನು ಇದುವರೆಗೂ ಜಾರಿ ಮಾಡಿಲ್ಲ. ಕಳೆದ ಚುನಾವಣೆಯಲ್ಲಿಯೇ ಜಾರಿಗೆ ತರುತ್ತೇವೆ ಎಂದವರು ಇದುವರೆಗೂ ತಂದಿಲ್ಲ. ಪ್ರವಾಹ ಪೀಡಿತರಿಗೆ ಇದುವರೆಗೂ ಯಾವುದೇ ರೀತಿಯಲ್ಲಿಯೂ ಸರಕಾರ ಸ್ಪಂದಿಸಿಲ್ಲ ಅವರ ಜೀವನ ಬೀದಿಗೆ ಬಿದ್ದಿದೆ. ಸುಮಾರು 35 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಿ ಹಣ ನೀಡುವಂತೆ ಒತ್ತಾಯ ಮಾಡಿದ್ದರು ಸಹ ಅದಕ್ಕೂ ಕೇಂದ್ರ ಸರಕಾರದ ಯಾವುದೇ ಸ್ಫಂದನೆ ಮಾಡಿಲ್ಲದಿರುವುದು ಶೋಚನಿಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಹಲವು ವರ್ಷದಿಂದ ಭೂಮಿಯಲ್ಲಿ ಕೆಲಸ ಮಾಡಿಕೊಂಡು ಬಂದಿರುವಂತವರಿಗೆ ಬಗರ್‍ಹುಕ್ಕುಂ ಸಾಗುವಳಿ ಚೀಟಿಯನ್ನು ನೀಡಬೇಕಾಗಿದೆ, ಭೂಸ್ವಾಧೀನ ಕಾಯಿದೆ ಜಾರಿ ಹಿನ್ನೆಲೆಯಲ್ಲಿ ತಂದಿರುವ ತಿದ್ದುಪಡಿ ಕೈಬಿಟ್ಟು ರೈತರನ್ನು ಕಾಪಾಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಮಾಡಿರುವ ಹಣವನ್ನು ಕೇಂದ್ರ ಸರಕಾರ ನೀಡುವಂತಹ ಕೆಲಸವನ್ನು ಮಾಡಬೇಕು.

     ತುಮಕೂರು ಜಿಲ್ಲೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಎಲ್ಲಾ ಕಾಮಗಾರಿಗಳು ಅತ್ಯಂತ ಬೇಗ ಮುಗಿಸಬೇಕು, ಹೇಮಾವತಿಯಲ್ಲಿ ಸಾಕಷ್ಟು ನೀರಿದ್ದು ಇನ್ನೂ 8 ಟಿ.ಎಂ.ಸಿ ನೀರು ಬಾಕಿ ಇದ್ದು ಅದನ್ನು ಸಂಪೂರ್ಣವಾಗಿ ನಮ್ಮ ಜಿಲ್ಲೆಗೆ ಬಿಡಬೇಕು. ಉಸ್ತುವಾರಿ ಸಚಿವರು ನಮ್ಮ ಭಾಗದ ನೀರು ಹರಿಯುವವರೆಗೂ ನೀರು ನಿಲ್ಲಸಬಾರದು. ಇಂತಹ ಹಲವು ವಿಚಾರವನ್ನು ಇಟ್ಟುಕೊಂಡು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಹಾಗೂ ಬಂದ್ ಮಾಡುತ್ತಿದ್ದು ಈ ಬಂದ್‍ಗೆ ಎಲ್ಲಾ ನಾಗರೀಕರು ಸಂಘಟನೆಗಳು ಸಾಥ್ ನೀಡಬೇಕು ಎಂದು ತಿಳಿಸಿದರು.

    ಕಾರ್ಮಿಕ ಘಟಕದ ಅಜ್ಜಪ್ಪ ಮಾತನಾಡಿ, ಜಿಲ್ಲೆಯಲ್ಲಿ ದುಡಿಮೆಯಲ್ಲಿರುವ ಪ್ರತಿಯೊಬ್ಬ ಕಾರ್ಮಿಕನಿಗೂ 21 ಸಾವಿರ ಹಣವನ್ನು ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇವರೆಲ್ಲರನ್ನು ಕಾಯಂ ಮಾಡಬೇಕು. ಹಮಾಲಿಗಳು, ಅಂಗನವಾಡಿ ನೌಕರರು, ಗ್ರಾಮಪಂಚಾಯತಿ ಸೇರಿದಂತೆ ಎಲ್ಲಾ ಕಾರ್ಮಿಕರುಗಳಿಗೂ ಅನುಕೂಲವಾಗಬೇಕು ಎಂಬ ನಿಟ್ಟಿನಲ್ಲಿ ಈ ಬಂದ್ ಮಾಡುತ್ತಿದ್ದು ಇದಕ್ಕೆ ಕಾರ್ಮಿಕ ಘಟಕದ 10 ಸಂಘಟನೆಗಳು ಇದರಲ್ಲಿ ಭಾಗವಹಿಸುತ್ತಿವೆ ಎಂದು ತಿಳಿಸಿದರು.

    ಅಂಗನವಾಡಿ ನೌಕರರ ತಾಲ್ಲೂಕು ಅಧ್ಯಕ್ಷೆ ಅನುಸೂಯ ಮಾತನಾಡಿ, ರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಮೀನಾಮೇಷ ಎಣಿಸುತ್ತಿದ್ದು ಇದು ಸರಿಯಲ್ಲ. ನಮ್ಮ ಬೇಡಿಕೆಯನ್ನು ಕಾಲ ಮಿತಿಯಲ್ಲಿ ಸರಿಪಡಿಸದೆ ಹೋದರೆ ವಿಧಾನಸೌಧ ಮುತ್ತಿಗೆ ಹಾಕುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ನಮ್ಮ ಬೇಡಿಕೆಗಳು ಈಗಾಗಲೇ ಸರಕಾರಕ್ಕೆ ತಿಳಿದಿದ್ದು ಅದರಂತೆ ಮಾಡಬೇಕು ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಕಾರ್ಯದರ್ಶಿ ವೆಂಕಟೆಗೌಡ, ಲೋಕೇಶ್, ಸರೋಜಮ್ಮ ನರಸಿಂಹಮೂರ್ತಿ ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap