ಅತಿಥಿ ಉಪನ್ಯಾಸಕರ ನೇಮಕಕ್ಕೆ ಎಚ್ ಡಿ ಕೆ ಆಗ್ರಹ..!

ಬೆಂಗಳೂರು

     ಕಳೆದ ಸಲದ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದ ಎಲ್ಲರನ್ನೂ ಮತ್ತೆ ಮರು ನೇಮಕ ಮಾಡಿಕೊಳ್ಳುವ ಮೂಲಕ ಸಂಕಷ್ಟದಲ್ಲಿರುವ ಅತಿಥಿ ಉಪನ್ಯಾಸಕರಿಗೆ ಸರ್ಕಾರ ನೆರವಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸುಮಾರು ಹದಿನೈದು ಸಾವಿರ ಅತಿಥಿ ಉಪನ್ಯಾಸಕರು ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಜೆಪಿ ಸರ್ಕಾರ 15000 ರೂ.ಗಳ ಮಾಸಿಕ ಗೌರವಧನ ನೀಡುವ ಭರವಸೆಯನ್ನು ಕೂಡಲೇ ಜಾರಿ ಮಾಡಬೇಕು. ಡಿಗ್ರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನವನ್ನು ಕನಿಷ್ಠ 15 ಸಾವಿರ ರೂಪಾಯಿಗಳಿಗೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದ 14 ವಿಧಾನಪರಿಷತ್ ಸದಸ್ಯರುಗಳಿಗೆ ನೀಡಿದ್ದ ಭರವಸೆಯನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

   ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಕೊರೊನಾದ ಸಂಕಷ್ಟದ ಸಮಯದಲ್ಲೂ ರಾಜ್ಯದ ಸರಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು ಶಾಲೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಸರಕಾರಿ ಶಾಲೆ ಶಿಕ್ಷಕರು ಕೋವಿಡ್ ಕರ್ತವ್ಯ ಹಾಗೂ ವಿದ್ಯಾಗಮ ಯೋಜನೆಯಡಿ ಈ ದಿನದ ತನಕ ಕೆಲಸ ಮಾಡಿದ್ದಾರೆ. ಆದರೆ ರಾಜ್ಯ ಸರಕಾರ ಈ ವರ್ಷ ಶೈಕ್ಷಣಿಕ ವರ್ಷದ ಮಧ್ಯಂತರ ರಜೆಯನ್ನು ರದ್ದುಗೊಳಿಸಿ ಶಿಕ್ಷಕರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ.

   ಈ ವರ್ಷದ ಅಕ್ಟೋಬರ್ 3 ರಿಂದ 26 ರವರೆಗೆ ನೀಡಬೇಕಿದ್ದ ಮಧ್ಯಂತರ ರಜೆಯನ್ನು ಸರ್ಕಾರ ರದ್ದು ಮಾಡಿರುವುದಕ್ಕೆ ಆಧಾರ ಏನು? ಶಿಕ್ಷಕರೆಂದರೆ ಸರ್ವಾಧಿಕಾರದ ಕೆಳಗೆ ದುಡಿಯುವ ದಿನಗೂಲಿ ನೌಕರರೆ?

   ಕೊರೊನ ಕಾರಣಕ್ಕೆ ಮಕ್ಕಳು ಶಾಲೆಗೆ ಬಾರದಿದ್ದರೂ ಶಿಕ್ಷಕರನ್ನು ಅನ್ಯ ಸೇವೆಗೆ ಯಥೇಚ್ಛವಾಗಿ ಬಳಸಲಾಗುತ್ತಿದೆ. ಆದಾಗ್ಯೂ ಮಧ್ಯಂತರ ರಜೆ ರದ್ದುಪಡಿಸಿ ಸರಕಾರ ಯಾವ ಪುರುಷಾರ್ಥ ಸಾಧನೆಗೆ ಹೊರಟಿದೆ? ಎಂದು ಅವರು ಪ್ರಶ್ನಿಸಿದ್ದಾರೆ.ಶಿಕ್ಷಕ ಸಮೂಹವನ್ನು ಗೌರವದಿಂದ ನಡೆಸಿಕೊಳ್ಳಬೇಕಾದ ಸರಕಾರ, ದರ್ಪದ ಆದೇಶಗಳನ್ನು ಜಾರಿ ಮಾಡಿ,ಶಾಪಕ್ಕೆ ಗುರಿಯಾಗುತ್ತಿದೆ. ‘ಹರ ಮುನಿದರೂ ಗುರು ಕಾಯ್ವನು’ ಎಂಬುದನ್ನು ಸರಕಾರ ಮರೆಯಬಾರದು.

   ರಾಜ್ಯ ಸರ್ಕಾರ ಅಕ್ಟೋಬರ್ 1ರಂದು ಮಧ್ಯಂತರ ರಜಾ ರದ್ದುಪಡಿಸಿ ಹೊರಡಿಸಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಶಿಕ್ಷಕರಿಗೆ ಮಧ್ಯಂತರ ರಜೆ ಘೋಷಿಸಬೇಕು. ಸರ್ಕಾರ ಭರವಸೆ ನೀಡಿದ್ದಂತೆ ಡಿಗ್ರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಮಾಸಿಕ ಗೌರವಧನವನ್ನು ಕನಿಷ್ಠ ಐದು ಸಾವಿರ ರೂಪಾಯಿ ಹೆಚ್ಚಳ ಮಾಡಬೇಕು. ಲಾಕ್ ಡೌನ್ ಸಂದರ್ಭದಲ್ಲಿ ತಡೆಹಿಡಿದಿದ್ದ ಗೌರವ ಧನದ ಬಾಕಿಯನ್ನು ತಕ್ಷಣವೇ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link