ನವದೆಹಲಿ
ಸದ್ಯ ವಿಶ್ವದ ದಿಗ್ಗಜ ಕಂಪನಿಗಳು ಶುರು ಮಾಡಿರುವ ಲೇ ಆಫ್ ಸಂಪ್ರದಾಯಕ್ಕೆ ಆನ್ ಲೈನ್ ಮೀಟಿಂಗ್ ಮಾಡಲು ಅನುವು ಮಾಡಿಕೊಡುತ್ತಿದ್ದ ಝೂಮ್ ಕೂಡ ಸೇರ್ಪಡೆಯಾಗಿದೆ.ಇದರ ಮೊದಲ ಭಾಗವಾಗಿ ಸುಮಾರು 1,300 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ಮಂಗಳವಾರ ಝೂಮ್ನ ಸಿ ಇ ಓ ಎರಿಕ್ ಯುವಾನ್ ಕಂಪನಿಯ ಅಧಿಕೃತ ಬ್ಲಾಗ್ನಲ್ಲಿ ಉದ್ಯೋಗಿಗಳ ವಜಾದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.”ಕಠಿಣ ಪರಿಶ್ರಮದ, ಕೌಶಲ್ಯವುಳ್ಳ ಉದ್ಯೋಗಿಗಳೇ” ಎಂದು ತಮ್ಮ ಬರಹ ಆರಂಭಿಸಿರುವ ಎರಿಕ್ ಯುವಾನ್, ಅಮೆರಿಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಉದ್ಯೋಗಿಗಳಿಗೆ ಇ-ಮೇಲ್ ಬರಲಿದೆ. ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಇತರ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
“ನೀವು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರೆ ಪರಿಣಾಮ ಎದುರಿಸುವ ಉದ್ಯೋಗಿಯಾಗಿದ್ದರೆ ಮುಂದಿನ 30 ನಿಮಿಷಗಳಲ್ಲಿ ನಿಮ್ಮ ಝೂಮ್ ಮತ್ತು ವೈಯಕ್ತಿಕ ಇ-ಮೇಲ್ ವಿಳಾಸಕ್ಕೆ ಮೇಲ್ ಬರಲಿದೆ” ಎಂದು ಎರಿಕ್ ಯುವಾನ್ ಬ್ಲಾಗ್ನಲ್ಲಿ ಹೇಳಿದ್ದಾರೆ.
ಉದ್ಯೋಗಿಗಳನ್ನು ತಮ್ಮ ಬರಹದಲ್ಲಿ ‘ಝೂಮೀಸ್’ ಎಂದು ಕರೆದಿರುವ ಎರಿಕ್ ಯುವಾನ್, ಅಮೆರಿಕದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಉದ್ಯೋಗಿಗಳು ವಜಾಗೊಂಡರೂ 16 ವಾರದ ವೇತನ, ಆರೋಗ್ಯ ವಿಮೆ ಸೌಲಭ್ಯ, 2023ರ ಬೋನಸ್ ಸಿಗಲಿದೆ ಎಂದು ತಿಳಿಸಿದ್ದಾರೆ.








