ಬೆಂಗಳೂರು:
ವಿರೋಧ ಪಕ್ಷದ ನಾಯಕನಿಲ್ಲದೆ ಕಳೆದ ವಾರ ವಿಧಾನಮಂಡಲದ ಅಧಿವೇಶನ ಮುಗಿದಿದೆ. ಬಿಜೆಪಿ ವಿರೋಧ ಪಕ್ಷದ ನಾಯಕನನ್ನು ಶೀಘ್ರದಲ್ಲೇ ನೇಮಿಸುವ ಆತುರದಲ್ಲಿಲ್ಲ ಎಂದು ತೋರುತ್ತಿದೆ. ಇದರ ಜೊತೆಗೆ ರಾಜ್ಯ ಘಟಕದ ಅಧ್ಯಕ್ಷರ ನೇಮಕವೂ ವಿಳಂಬವಾಗುವ ಸಾಧ್ಯತೆ ಇದೆ.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ನೇಮಕದ ವಿಳಂಬದಿಂದಾಗಿ ಶಾಸಕರು ಮತ್ತು ಕಾರ್ಯಕರ್ತರು ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.
ಪ್ರತಿಪಕ್ಷ ನಾಯಕ ಹಾಗೂ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡುವಂತೆ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರಲು ರಾಜ್ಯ ನಾಯಕರು ಯತ್ನಿಸುತ್ತಿದ್ದರೂ ಕೇಂದ್ರದ ನಾಯಕರ ಆತುರ ತೋರುತ್ತಿಲ್ಲ.
ಈ ಎರಡು ಹುದ್ದೆಗಳಿಗೆ ನೇಮಕ ಮಾಡಲು ವರಿಷ್ಠರು ಯಾವುದೇ ಆಸಕ್ತಿ ಹೊಂದಿಲ್ಲ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಈ ಹಿಂದೆ ಮೂರು ಸಂದರ್ಭಗಳಲ್ಲಿ, ಅಧಿವೇಶನದ ಹಿಂದಿನ ದಿನ ಸೇರಿದಂತೆ, ದೆಹಲಿ ನಾಯಕರು ಹೆಸರುಗಳನ್ನು ಘೋಷಿಸಲು ತಾತ್ಕಾಲಿಕ ದಿನಾಂಕಗಳನ್ನು ನೀಡಿದ್ದರು.
ವಾಸ್ತವವಾಗಿ, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಹಿರಿಯ ಬಿಜೆಪಿ ನಾಯಕ ವಿನೋದ್ ತಾವ್ಡೆ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕೆಲವು ವಾರಗಳ ಹಿಂದೆ ಬೆಂಗಳೂರಿನಲ್ಲಿ ಹಲವು ಬಾರಿ ನಾಯಕರ ಪ್ರತಿಕ್ರಿಯೆ ಪಡೆಯುತ್ತಿದ್ದರು. ಆದರೆ ಈಗ ಒಂದು ತಿಂಗಳು ಸಮೀಪಿಸುತ್ತಿದ್ದರೂ ಇಲ್ಲಿಯವರೆಗೆ ಏನೂ ಮಾಡಲಾಗಿಲ್ಲ.








