
ಬೆಂಗಳೂರು : ಪಕ್ಷದ ವರಿಷ್ಠ ನಾಯಕರು ಕರೆದರೆ ಮತ್ತೊಮೆ ದೆಹಲಿಗೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ಕುರಿತು ಚರ್ಚೆ ನಡೆಸಲು ಪಕ್ಷದ ವರಿಷ್ಠ ನಾಯಕರು ಆಹ್ವಾನಿಸಿದರೆ ದೆಹಲಿಗೆ ಬರುತ್ತೇವೆ ಎಂದಿದ್ದಾರೆ.
ಇದಕ್ಕೂ ಮುನ್ನ ಕರ್ನಾಟಕ ಭವನದಲ್ಲಿ ಸಿದ್ದರಾಮಯ್ಯ ರಾಜ್ಯದ ಕೆಲ ಶಾಸಕರ ಜೊತೆ ಉಪಾಹಾರ ಕೂಟ ನಡೆಸಿದರು. ಮಾಜಿ ಸಚಿವ ಎಂ.ಆರ್.ಸೀತಾರಾಮ್, ಶಾಸಕರಾದ ಬಸವರಾಜರಾಯ ರೆಡ್ಡಿ, ಪಿ.ಎಂ.ಅಶೋಕ್, ಪಾವಗಡ ವೆಂಕಟೇಶ್, ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಮತ್ತಿತರರೊಂದಿಗೆ ಉಪಾಹಾರ ಸೇವಿಸಿ ಆಪ್ತ ಸಮಾಲೋಚನೆ ನಡೆಸಿದ್ದರು.
ಗೊಂದಲದ ಗೂಡಾದ ಸಂಪುಟ ವಿಸ್ತರಣೆ: ಸಂಪುಟ ವಿಸ್ತರಣೆಯ ಕುರಿತಂತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ದೆಹಲಿಗೆ ತೆರಳಿದ್ದರು.
ಆದರೆ ಅಲ್ಲಿ ಯಾವುದೇ ಚರ್ಚೆಗಳಾಗದೇ ಬೆಂಗಳೂರಿಗೆ ವಾಪಾಸ್ ಬಂದರು. ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆಯಾಗಿದ್ದು, ಮುಂದೆ ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ. ರಾಜ್ಯ ಕಾಂಗ್ರೆಸ್ ನಾಯಕರು ಸಲ್ಲಿಸಿದ್ದ ಸಂಭವನೀಯ ಸಚಿವರ ಪಟ್ಟಿ ಹೈಕಮಾಂಡ್ಗೆ ಸಹನೀಯವಾಗಿಲ್ಲ ಎಂದು ಹೇಳಲಾಗಿದೆ.
ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರು, ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವವರು ಮತ್ತು ನಾಯಕತ್ವದ ನಿಷ್ಠೆಯಲ್ಲಿ ಅಚಲತೆ ಹೊಂದಿರುವವರು, ಯಾವುದೇ ಕ್ರಿಮಿನಲ್ ಹಿನ್ನೆಲೆಯಿಲ್ಲದೆ ನಿಷ್ಕಳಂಕ ಮತ್ತು ಸಚ್ಚಾರಿತ್ಯ ಹೊಂದಿರುವವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಹೈಕಮಾಂಡ್ ಸೂಚಿಸಿದೆ.
ಈಗ ನೀಡಲಾಗಿರುವ ಪಟ್ಟಿಯಲ್ಲಿ ಕೆಲವರನ್ನು ಬದಲಾವಣೆ ಮಾಡಬೇಕು ಎಂದು ಹೈಕಮಾಂಡ್ ಸೂಚಿಸಿದೆ. ಆದರೆ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕೆಲವರಿಗೆ ಆದ್ಯತೆ ನೀಡಲೇಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ನಾಯಕರು ಪ್ರತಿಪಾದಿಸಿದ್ದಾರೆ.
ಈ ನಡುವೆ ರಾಹುಲ್ ಗಾಂಧಿ, ರಾಜಕೀಯ ವಿಶ್ಲೇಷಕ ಸುನೀಲ್ ಕಣಗೋಲ್ ಅವರಿಂದ ಪ್ರತ್ಯೇಕ ಪಟ್ಟಿ ಪಡೆದಿದ್ದಾರೆ. ಆ ಪಟ್ಟಿಯಲ್ಲಿರುವವರಿಂದ ಪಕ್ಷಕ್ಕಾಗುವ ಲಾಭ-ನಷ್ಟಗಳ ಬಗ್ಗೆ ವ್ಯಾಪಕ ಚರ್ಚೆಗಳಾಗಬೇಕಿದೆ. ಆದರೆ ವರಿಷ್ಠ ನಾಯಕರು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿರುವುದರಿAದ ರಾಜ್ಯ ಸಂಪುಟದ ವಿಸ್ತರಣೆ ಕುರಿತು ಚರ್ಚೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹಳಬರಿಗೆ ಮಣೆ ಹಾಕುವ ಉಮೇದಿನಲ್ಲಿದ್ದರೆ, ಪಕ್ಷದ ವರಿಷ್ಠರು ಅದಕ್ಕೆ ಬ್ರೇಕ್ ಹಾಕಿದ್ದಾರೆ. ಈ ಹಗ್ಗ-ಜಗ್ಗಾಟದಲ್ಲಿ ಸಚಿವ ಸಂಪುಟ ವಿಸ್ತರಣೆ ಇತ್ಯರ್ಥಗೊಂಡಿಲ್ಲ, ಚರ್ಚೆ ಕೂಡ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ಇನ್ನೊಂದು ಸುತ್ತಿನ ಚರ್ಚೆಗಾಗಿ ರಾಜ್ಯದ ನಾಯಕರು ದೆಹಲಿಗೆ ಭೇಟಿ ನೀಡಬೇಕಾದ ಪರಿಸ್ಥಿತಿ ಇದೆ. ಆದರೆ ಅದು ಯಾವಾಗ ಎಂಬುದು ಖಚಿತವಾಗಿಲ್ಲ.








