
ದೆಹಲಿಯಲ್ಲಿ ಕಾದ ಕೈ ನಾಯಕರು, ಹೆಚ್ಚುವರಿ ಡಿಸಿಎಂ ಬಿಕ್ಕಟ್ಟು, ಸಚಿವಾಕಾಂಕ್ಷಿಗಳಲ್ಲಿ ತೀವ್ರ ಅಸಮಾಧಾನ!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ವಿಸ್ತರಣೆ ಕಸರತ್ತು ಗಜಪ್ರಸವದಂತಾಗಿದ್ದು, ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡುಬಿಟ್ಟಿರುವ ರಾಜ್ಯ ನಾಯಕರಿಗೆ ಹೈಕಮಾಂಡ್ ಭೇಟಿಗೆ ಅವಕಾಶವೇ ಸಿಗದೆ ಕಗ್ಗಂಟಾಗಿ ಪರಿಣಮಿಸಿದೆ. ಸಂಸತ್ ಕಲಾಪ ಹಾಗೂ ‘ನೀಟ್’ ಅಕ್ರಮದ ವಿರುದ್ಧದ ಹೋರಾಟದಲ್ಲಿ ವರಿಷ್ಠರು ಬ್ಯುಸಿಯಾಗಿರುವುದರಿಂದ ಸಭೆಗಳು ನಿರಂತರವಾಗಿ ಮುಂದೂಡಲ್ಪಡುತ್ತಿವೆ. ಖಾಲಿ ಇರುವ 20 ಸ್ಥಾನಗಳ ಪೈಕಿ 18ಕ್ಕೆ ಭರ್ತಿ ಮಾಡುವ ಲೆಕ್ಕಾಚಾರ, 2 ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಶೀತಲ ಸಮರ ಏರ್ಪಟ್ಟಿದೆ. ಇನ್ನೊಂದೆಡೆ, ರಾಜ್ಯದಲ್ಲಿ ಬರಗಾಲ ಮತ್ತು ಕಾವೇರಿ ಕಿಚ್ಚಿನಂತಹ ಜ್ವಲಂತ ಸಮಸ್ಯೆಗಳಿದ್ದರೂ ಆಡಳಿತದ ಕಡೆ ಗಮನಹರಿಸದೆ ನಾಯಕರು ದೆಹಲಿಯಲ್ಲಿ ಕಾಯುತ್ತಿರುವುದಕ್ಕೆ ವಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಕಾದು ಸುಸ್ತಾದ ಹಲವು ಸಚಿವಾಕಾಂಕ್ಷಿ ಶಾಸಕರು ದೆಹಲಿಯಿಂದ ಬರಿಗೈಲಿ ವಾಪಸ್ಸಾಗುತ್ತಿದ್ದು, ಗುರುವಾರ ನಿರ್ಣಾಯಕ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇಂದು (ಶುಕ್ರವಾರ) ಎಲ್ಲಾರು ಕೂತುಹಲದಿಂದ ಕಾಯುತಿದ್ದಾರೆ.
ವರಿಷ್ಠರ ಸಮಯಾವಕಾಶದ ಕೊರತೆ, ಶಾಸಕರ ಅಸಮಾಧಾನದ ಸ್ಫೋಟ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಸೋಮವಾರದಿಂದಲೇ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ನೀಟ್ ಹೋರಾಟ ಹಾಗೂ ಸಂಸತ್ತಿನ ಕಲಾಪಗಳಲ್ಲಿ ಸಂಪೂರ್ಣ ನಿರತರಾಗಿರುವುದರಿಂದ, ಸತತ ಮೂರು ದಿನಗಳಿಂದ ನಿಗದಿಯಾಗಿದ್ದ ಸಭೆಗಳು ರದ್ದಾಗುತ್ತಲೇ ಇವೆ.
ಸಚಿವ ಸ್ಥಾನದ ಲಾಬಿಗಾಗಿ 30ಕ್ಕೂ ಹೆಚ್ಚು ಶಾಸಕರು ದೆಹಲಿಗೆ ದೌಡಾಯಿಸಿದ್ದರು. ಆದರೆ ಹೈಕಮಾಂಡ್‌ನ ಈ ವಿಳಂಬ ಧೋರಣೆಯಿಂದ ಬೇಸತ್ತ ಕೆಲ ಶಾಸಕರು, ವರಿಷ್ಠರು ಏನು ತೀರ್ಮಾನ ಮಾಡುತ್ತಾರೋ ಮಾಡಲಿ, ಕಾದು ಕಾದು ಸಾಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಬುಧವಾರವೇ ಬೆಂಗಳೂರಿಗೆ ಹಿಂದಿರುಗಿದ್ದಾರೆ. ಕಲಾಪದ ನಡುವೆಯೂ ರಾಜ್ಯದ ನಾಯಕರಿಗೆ ಸ್ವಲ್ಪ ಸಮಯ ನೀಡಿ ಚರ್ಚೆ ಮುಗಿಸಬಹುದಿತ್ತಲ್ಲವೇ ಎಂಬುದು ಶಾಸಕರ ಪ್ರಶ್ನೆಯಾಗಿದ್ದು, ವರಿಷ್ಠರ ಈ ಅಸಡ್ಡೆ ಶಾಸಕರ ಒಳಗೊಳಗಿನ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಪುಟ ಲೆಕ್ಕಾಚಾರ, 18 ಸ್ಥಾನ ಭರ್ತಿಗೆ ಚಿಂತನೆ: ಹಾಲಿ ಖಾಲಿ ಇರುವ 20 ಸಚಿವ ಸ್ಥಾನಗಳ ಪೈಕಿ 18 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲು ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಚಿವ ಸ್ಥಾನ ಸಿಗದೆ ಬಂಡಾಯವೇಳುವ ಶಾಸಕರನ್ನು ಭವಿಷ್ಯದಲ್ಲಿ ಸಮಾಧಾನಪಡಿಸುವ ತಂತ್ರಗಾರಿಕೆಯ ಭಾಗವಾಗಿ ಉಳಿದ 2 ಸ್ಥಾನಗಳನ್ನು ಖಾಲಿ ಕಾಯ್ದಿರಿಸಲು ನಿರ್ಧರಿಸಲಾಗಿದೆ. ಸಿಎಂ, ಮಾಜಿ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಪ್ರತ್ಯೇಕ ಪಟ್ಟಿಗಳನ್ನು ನೀಡಿದ್ದು, ಜಾತಿ ಹಾಗೂ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳುವುದು ವರಿಷ್ಠರಿಗೆ ದೊಡ್ಡ ಸವಾಲಾಗಿದೆ.
ಹೆಚ್ಚುವರಿ ಡಿಸಿಎಂ ಹುದ್ದೆ ಚರ್ಚೆ : ಸಂಪುಟ ವಿಸ್ತರಣೆಗಿಂತ ಹೆಚ್ಚಾಗಿ ಇದೀಗ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ ವಿಚಾರವೇ ಹೈಕಮಾಂಡ್‌ಗೆ ತಲೆನೋವಾಗಿದೆ. ಲಿಂಗಾಯತ ಮತ್ತು ಪರಿಶಿಷ್ಟ ಪಂಗಡ ಸಮುದಾಯದ ತಲಾ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಸಿಎಂ ಡಿ.ಕೆ. ಶಿವಕುಮಾರ್ ವರಿಷ್ಠರ ಮುಂದಿಟ್ಟಿದ್ದಾರೆ. ಆದರೆ, ಈ ಪ್ರಸ್ತಾವನೆಗೆ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೇವಲ ಲಿಂಗಾಯತ ಮತ್ತು ಎಸ್‌ಟಿ ವರ್ಗಕ್ಕೆ ಡಿಸಿಎಂ ಸ್ಥಾನ ನೀಡಿದರೆ, ಪಕ್ಷದ ಬೆನ್ನೆಲುಬಾಗಿರುವ ಮುಸ್ಲಿಂ ಹಾಗೂ ಅಹಿಂದ ವರ್ಗಗಳು ಅಸಮಾಧಾನಗೊಳ್ಳಲಿವೆ. ಹೀಗಾಗಿ ಹೆಚ್ಚುವರಿ ಡಿಸಿಎಂ ಹುದ್ದೆಗಳೇ ಬೇಡ ಎಂಬ ನಿಲುವಿಗೆ ಅವರು ಬದ್ಧರಾಗಿದ್ದಾರೆ ಎನ್ನಲಾಗಿದೆ.
ಬಾಕ್ಸ್
ಮಿಡ್ ನೈಟ್ ನಿರ್ಣಾಯಕ ಸಭೆ? : ಇಂದು ಪದಗ್ರಹಣ ಸಾಧ್ಯತೆ..?
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರು, ನೀಟ್ ಹೋರಾಟ ಮತ್ತು ಕಲಾಪದ ಬ್ಯುಸಿಯಿಂದ ವಿಳಂಬವಾಗಿದೆ ಅಷ್ಟೇ, ಗುರುವಾರ ರಾತ್ರಿಯೊಳಗೆ ಸಂಪುಟ ವಿಸ್ತರಣೆ ಚರ್ಚೆಗಳು ಪೂರ್ಣಗೊಳ್ಳಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಒಂದು ವೇಳೆ ಶುಕ್ರವಾಋ ಪಟ್ಟಿ ಅಂತಿಮಗೊAಡರೆ ಇಂದೇ (ಶುಕ್ರವಾರವೇ) ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ ಎಂದಿದ್ದಾರೆ.
ಬಾಕ್ಸ್
ಬರ, ಕಾವೇರಿ ಮರೆತ ನಾಯಕರು: ಮುಗಿಬಿದ್ದ ಬಿಜೆಪಿ
ರಾಜ್ಯದಲ್ಲಿ ಬರ ಪರಿಸ್ಥಿತಿ ಮತ್ತು ಕಾವೇರಿ ವಿವಾದದಂತಹ ಗಂಭೀರ ಸಮಸ್ಯೆಗಳಿರುವಾಗ, ರಾಜ್ಯದ ಪ್ರಮುಖ ನಾಯಕರು ಮೂರು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿರುವುದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಮೂರು ದಿನಗಳಿಂದ ಕಾಯುತ್ತಾ ಕುಳಿತರೂ ರಾಜ್ಯ ನಾಯಕರಿಗೆ ಚರ್ಚೆಗೆ ಅವಕಾಶ ಸಿಕ್ಕಿಲ್ಲ, ಅವರಿಗೆ ಶುಭವಾಗಲಿ ಎಂದು ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವ್ಯಂಗ್ಯವಾಡಿದ್ದಾರೆ. ಇತ್ತ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಹ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿಗಳಿಗೆ ಆಡಳಿತದ ಕಡೆ ಗಮನವಿಲ್ಲ, ರಾಜ್ಯದ ಜನರ ಸಮಸ್ಯೆಗಳಿಗಿಂತ ಅವರಿಗೆ ಸಂಪುಟ ವಿಸ್ತರಣೆ, ಸ್ವಂತ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದಿದ್ದಾರೆ. ಹೈಕಮಾಂಡ್ ಕ್ಯಾರೇ ಎನ್ನದಿದ್ದರೂ ಅಸಡ್ಡೆ ಸಹಿಸಿಕೊಂಡು ದೆಹಲಿಯಲ್ಲಿ ಕಾದು ಕುಳಿತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.








