

ಮಂಗಳೂರು: ರಾಜ್ಯದಲ್ಲಿ ನಕಲಿ ಔಷಧ ಜಾಲ ಹಾಗೂ ಹೋಟೆಲ್ಗಳು ಮತ್ತು ರಸ್ತೆಬದಿಯ ತಿನಿಸು ಕೇಂದ್ರಗಳಲ್ಲಿ ಕಳಪೆ, ಅಸ್ವಚ್ಛ ಆಹಾರ ಮಾರಾಟಕ್ಕೆ ಕಡಿವಾಣ ಹಾಕಲು ಪ್ರತಿಯೊಂದು ತಾಲೂಕು ಮಟ್ಟದಲ್ಲೂ ನಿವೃತ್ತ ಹಿರಿಯ ನಾಗರಿಕರನ್ನೊಳಗೊಂಡ ವಿಶೇಷ ವಾಚ್ ಟೀಮ್ ರಚಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರಿನ ಸರ್ಕೂ್ಯಟ್ ಹೌಸ್ನಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಮಾಹಿತಿ ನೀಡಿದರು.
ತಾಲೂಕು ಮಟ್ಟದ ‘ವಾಚ್ ಟೀಮ್’ ೬೦ ವರ್ಷ ಮೇಲ್ಪಟ್ಟ ನಿವೃತ್ತ ವೈದ್ಯರು, ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು, ಪ್ರಾಧ್ಯಾಪಕರು ಹಾಗೂ ಸಾಮಾಜಿಕ ಕಾಳಜಿಯುಳ್ಳ ಹಿರಿಯ ನಾಗರಿಕರನ್ನು ಗುರುತಿಸಿ ತಾಲೂಕುವಾರು ವಾಚ್ ಟೀಮ್ಗಳನ್ನು ರಚಿಸಲಾಗುತ್ತದೆ. ಈ ಸಮಿತಿಯ ಸದಸ್ಯರಿಗೆ ಸ್ಥಳೀಯವಾಗಿ ಹೋಟೆಲ್, ಬೇಕರಿ ಹಾಗೂ ಔಷಧ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸುವ, ಸ್ವಚ್ಛತೆ ಮತ್ತು ಗುಣಮಟ್ಟದ ಕುರಿತು ಸರ್ಕಾರ ಹಾಗೂ ಇಲಾಖೆಗೆ ನೇರ ವರದಿ ನೀಡುವ ಅಧಿಕಾರ ನೀಡಲು ಕಾನೂನು ಚೌಕಟ್ಟಿನಲ್ಲಿ ನಿಯಮ ರೂಪಿಸಲಾಗುತ್ತಿದೆ ಎಂದರು.
ಕೋಟ್ಯAತರ ಜನಸಂಖ್ಯೆ ಇರುವ ರಾಜ್ಯದಲ್ಲಿ ಕೆಲವೇ ನೂರು ಮಂದಿ ಅಧಿಕಾರಿಗಳಿಂದ ಮಾತ್ರ ಎಲ್ಲವನ್ನೂ ತಪಾಸಣೆ ಮಾಡಲು ಸಾಧ್ಯವಿಲ್ಲ. ನಾಗರಿಕ ಸಮಾಜ ಕೈಜೋಡಿಸಿದಾಗ ಮಾತ್ರ ಆಹಾರ ಹಾಗೂ ಔಷಧ ಕಲಬೆರಕೆಯನ್ನು ಸಂಪೂರ್ಣವಾಗಿ ಮಟ್ಟಹಾಕಲು ಸಾಧ್ಯ ಎಂದರು.
ಕ್ಯೂಆರ್ ಕೋಡ್ ಮೂಲಕ ಕ್ಷಿಪ್ರ ದೂರು ವ್ಯವಸ್ಥೆ: ಸಾರ್ವಜನಿಕರಿಗೆ ಕಳಪೆ ಆಹಾರ ಅಥವಾ ಅವಧಿ ಮೀರಿದ ಔಷಧಗಳ ಬಗ್ಗೆ ದೂರು ನೀಡಲು ಹೋಟೆಲ್, ಔಷಧ ಮಳಿಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಗ್ರಾಹಕರು ಕ್ಯೂಆರ್ ಕೋಡ್ ಸ್ಕಾ÷್ಯನ್ ಮಾಡಿ ದೂರು ಸಲ್ಲಿಸಿದ ತಕ್ಷಣ, ಅದು ನೇರವಾಗಿ ಆಹಾರ ಸುರಕ್ಷತೆ ಅಥವಾ ಔಷಧ ನಿಯಂತ್ರಣ ಇಲಾಖೆಗೆ ತಲುಪುತ್ತದೆ. ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕಾಗುತ್ತದೆ. ಕಳೆದ ಎರಡೇ ದಿನಗಳಲ್ಲಿ ಈ ವ್ಯವಸ್ಥೆ ಮೂಲಕ ೪೦೦ಕ್ಕೂ ಅಧಿಕ ದೂರುಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ನಕಲಿ ಪನ್ನೀರ್, ಮರುಬಳಕೆಯ ಎಣ್ಣೆ ಹಾಗೂ ಜಂಕ್ ಫುಡ್ ನಿಯಂತ್ರಣ: ರಾಜ್ಯದಲ್ಲಿ ಕೃತಕ ಪನೀರ್ (ಪಾಮಾಯಿಲ್ ಬೆರೆಸಿದ ಪನೀರ್) ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ. ಸ್ಟಾರ್ ಹೋಟೆಲ್ಗಳಲ್ಲಿ ಬಳಸಿದ ಎಣ್ಣೆಯನ್ನು ರಸ್ತೆಬದಿಯ ಅಂಗಡಿಗಳಿಗೆ ಮಾರಾಟ ಮಾಡುವುದನ್ನು ತಡೆಯಲು ನಿಯಮ ರೂಪಿಸಲಾಗುತ್ತಿದೆ. ಬಳಸಿದ ಎಣ್ಣೆಯನ್ನು ಮರಳಿ ಪಡೆದು ಬಯೋ-ಡೀಸೆಲ್ ತಯಾರಿಕೆಗೆ ಬಳಸುವ ಕಂಪನಿಗಳೊAದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರೋತ್ಸಾಹಿಸಲಾಗುವುದು ಎಂದರು.
ಆಹಾರದಲ್ಲಿ ನಿಖರ ಮಾಹಿತಿ ಪ್ರದರ್ಶನ: ಫ್ರೋಜನ್ ಚಿಕನ್, ಬನ್ಗಳನ್ನು ಎಷ್ಟು ತಿಂಗಳು ಶೀತಲೀಕರಣದಲ್ಲಿ ಇಡಲಾಗಿತ್ತು ಎಂಬ ವಿವರವನ್ನು ಹೋಟೆಲ್ಗಳು ಬೋರ್ಡ್ನಲ್ಲಿ ನಮೂದಿಸಬೇಕು. ಬಹುರಾಷ್ಟಿçÃಯ ಕಂಪನಿಗಳು ಭಾರತದಲ್ಲಿ ನಿಗದಿಗಿಂತ ಹೆಚ್ಚು ಸಕ್ಕರೆ ಬಳಸುವುದನ್ನು ತಡೆಯಲು ದೇಶಾದ್ಯಂತ ಕಟ್ಟುನಿಟ್ಟಿನ ನಿಯಮ ಜಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಜನೌಷಧಿ ಕೇಂದ್ರಗಳ ವಾಸ್ತವ ಸ್ಥಿತಿ ಪರಿಶೀಲನೆ: ಜನೌಷಧಿ ಕೇಂದ್ರಗಳಲ್ಲಿ ಅಧಿಕೃತ ಸರ್ಕಾರದ ಔಷಧಗಳ ಕೊರತೆ ಉಂಟಾದಾಗ ಖಾಸಗಿ ಕಂಪನಿಗಳ ಜೆನರಿಕ್ ಔಷಧಗಳನ್ನು ತಂದು ಹೆಚ್ಚಿನ ಕಮಿಷನ್ಗಾಗಿ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನೌಷಧಿ ಕೇಂದ್ರಗಳ ಗುಣಮಟ್ಟ ಹಾಗೂ ಪೂರೈಕೆ ವ್ಯವಸ್ಥೆಯನ್ನು ಇಲಾಖೆ ತಪಾಸಣೆ ನಡೆಸುತ್ತಿದೆ ಎಂದು ತಿಳಿಸಿದರು.
ಶಿಕ್ಷಕರ ನೇಮಕಾತಿ: ಉರ್ದು ಮತ್ತು ಹಿಂದಿ ಭಾಷಾ ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗಿದ್ದು, ಶಿಕ್ಷಣ ಇಲಾಖೆಯೊಂದಿಗೆ ಚರ್ಚಿಸಿ ೮೦೦ ಉರ್ದು ಹಾಗೂ ೨೦೦ ಹಿಂದಿ ಶಿಕ್ಷಕರ ಹುದ್ದೆಗಳ ಹೆಚ್ಚುವರಿ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಾಕ್ಸ್
ನಕಲಿ ಔಷಧ ಜಾಲದ ವಿರುದ್ಧ ಎಸ್ಐಟಿ ತನಿಖೆ
ರಾಜ್ಯದಲ್ಲಿ ಪತ್ತೆಯಾಗಿರುವ ಬೃಹತ್ ನಕಲಿ ಔಷಧ ಜಾಲದ ಬಗ್ಗೆ ಆತಂಕ ವ್ಯಕ್ತಪಡಿಸಿದ ಯು.ಟಿ. ಖಾದರ್, “ಹಿಮಾಚಲ ಪ್ರದೇಶ, ತೆಲಂಗಾಣ ಮೊದಲಾದ ಕಡೆಗಳಿಂದ ಅನಧಿಕೃತವಾಗಿ ನಕಲಿ ಔಷಧಗಳನ್ನು ತಂದು, ದೊಡ್ಡ ಬ್ರಾ÷್ಯಂಡ್ಗಳ ಲೇಬಲ್ ಅಂಟಿಸಿ ಮಾರಾಟ ಮಾಡುವ ಮಾಫಿಯಾ ಪತ್ತೆಯಾಗಿದೆ. ಐಸಿಯುಗಳಲ್ಲಿ ಬಳಸುವ ಜೀವರಕ್ಷಕ ಔಷಧಗಳೂ ಇದರಲ್ಲಿವೆ. ಈ ಜಾಲದ ಮೂಲವನ್ನು ಬೇರುಸಹಿತ ಕಿತ್ತೊಗೆಯಲು ಪೊಲೀಸ್ ಹಾಗೂ ಡ್ರಗ್ ಇಲಾಖೆಯನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಲಾಗಿದೆ. ದುಬೈನಲ್ಲಿರುವ ಕಿಂಗ್ಪಿನ್ಗಳ ಪತ್ತೆಗೂ ಬಲೆ ಬೀಸಲಾಗಿದೆ” ಎಂದರು.








