ಹಬ್ಬದ ಹೊತ್ತಲ್ಲೇ ‘ಸಿಹಿ’ ಕಹಿ: ಸಕ್ಕರೆ-ಬೆಲ್ಲದ ಬೆಲೆ ದಿಢೀರ್ ಗಗನಕ್ಕೆ!

ಬೆಂಗಳೂರು: ಸಾಲು ಸಾಲು ಹಬ್ಬಗಳ ಸಸಂಭ್ರಮದಲ್ಲಿರುವ ರಾಜ್ಯದ ಜನತೆಗೆ ಸಿಹಿ ಪದಾರ್ಥಗಳ ದರ ಏರಿಕೆ ದೊಡ್ಡ ?ಶಾಕ್? ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಕ್ಕರೆ ಕೆ.ಜಿ.ಗೆ ೭೫ ರೂ. ಹಾಗೂ ಬೆಲ್ಲ ೧೦೦ ರೂ. ಸನಿಹಕ್ಕೆ ತಲುಪಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಶೇ. ೪೦ರಷ್ಟು ಜಿಗಿತ ಕಂಡಿದ್ದು, ಮಳೆ ಅಭಾವದಿಂದ ಬೆಳೆ ನಾಶವಾಗಿರುವುದು, ಎಥೆನಾಲ್ ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿನ ಕೃತಕ ಅಭಾವವೇ ಈ ಹಠಾತ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಸಕ್ಕರೆ ದರ ಪ್ರಸ್ತುತ ಕೆ.ಜಿ.ಗೆ ೫೦-೫೫ ರೂ.ನಿಂದ ೭೦-೭೫ ರೂ.ವರೆಗೆ ಏರಿಕೆಯಾಗಿದೆ. ಇತ್ತ ಬೆಲ್ಲದ ಬೆಲೆಯೂ ಗಗನಕ್ಕೇರಿದ್ದು, ಕ್ವಿಂಟಾಲ್‌ಗೆ ೪,೫೦೦ ರೂ. ಇದ್ದ ಬೆಲೆ ಈಗ ೬,೫೦೦-೭,೦೦೦ ರೂ. ತಲುಪಿದೆ. ಕೆಲವೇ ದಿನಗಳಲ್ಲಿ ಕ್ವಿಂಟಾಲ್‌ಗೆ ೨,೦೦೦ ರೂ. ದಷ್ಟು ಏರಿಕೆಯಾಗಿರುವುದು ಕೇವಲ ಗ್ರಾಹಕರಿಗೆ ಮಾತ್ರವಲ್ಲದೆ ವ್ಯಾಪಾರಿಗಳಲ್ಲೂ ತೀವ್ರ ಆತಂಕ ಮೂಡಿಸಿದೆ.

ಬೆಲೆ ಏರಿಕೆಗೆ ಅಸಲಿ ಕಾರಣವೇನು? : ಕಳೆದ ಆರು ತಿಂಗಳಿAದ ಮಳೆಯಿಲ್ಲದೆ ಕಬ್ಬಿಗೆ ನೀರಿನ ಪೂರೈಕೆಯಾಗಿಲ್ಲ. ಇದರಿಂದಾಗಿ ಕಬ್ಬಿನ ಗದ್ದೆಗಳು ಒಣಗಿ ನಿಂತಿದ್ದು, ಕಬ್ಬಿನ ಇಳುವರಿ ಅರ್ಧದಷ್ಟು ಕುಸಿತ ಕಂಡಿದೆ. ಇದರ ನೇರ ಪರಿಣಾಮ ಬೆಲ್ಲದ ಗಾಣಗಳ ಮೇಲಾಗಿದ್ದು, ಉತ್ಪಾದನೆ ಗಣನೀಯವಾಗಿ ಇಳಿಮುಖವಾಗಿದೆ. ಮಾರುಕಟ್ಟೆಗೆ ಪ್ರತಿದಿನ ಬರುತ್ತಿದ್ದ ೧೦ ರಿಂದ ೧೨ ಲಾರಿ ಬೆಲ್ಲದ ಪ್ರಮಾಣ ಈಗ ಅರ್ಧಕ್ಕೆ ಇಳಿದಿದೆ. ಬೆಲ್ಲದ ಮಾರುಕಟ್ಟೆ ಪ್ರಾರಂಭವಾದ ದಿನದಿಂದಲೂ ಇಷ್ಟೊಂದು ಪ್ರಮಾಣದ ದರ ಏರಿಕೆಯಾಗಿರಲಿಲ್ಲ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಇದರ ಜೊತೆಗೆ, ಸಕ್ಕರೆ ಉತ್ಪಾದನೆಗಿಂತ ಎಥೆನಾಲ್ ಕಚ್ಚಾವಸ್ತುವಾಗಿ ಕಬ್ಬನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದು ಹಾಗೂ ಹಬ್ಬದ ಬೇಡಿಕೆಯನ್ನು ಬಂಡವಾಳ ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಕೃತಕ ಅಭಾವವು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಕೇಂದ್ರ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ : ಸಕ್ಕರೆ ಮತ್ತು ಬೆಲ್ಲದ ಬೆಲೆ ದಿಢೀರ್ ಏರಿಕೆಯಾಗಿ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆಯಾಗಿರುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರದ ನೀತಿಗಳೇ ಈ ಪರಿಸ್ಥಿತಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಒಂದೆಡೆ ಪೆಟ್ರೋಲ್ ಜತೆಗೆ ಬೆಸೆಯಲು ಎಥೆನಾಲ್ ತಯಾರಿಕೆಗೆ ಕಬ್ಬನ್ನು ಬಳಸಲಾಗುತ್ತಿದೆ. ಇನ್ನೊಂದೆಡೆ ವಿದೇಶದಿಂದ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹಬ್ಬಗಳ ಸೀಸನ್‌ನಲ್ಲಿ ಜನಸಾಮಾನ್ಯರ ಮೇಲೆ ಹೊರೆ ಹಾಕುವ ಇಂತಹ ನೀತಿಗಳು ಯಾವ ರೀತಿಯ ಸ್ವಾವಲಂಬನೆ?.

ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷರು

 

Recent Articles

spot_img

Related Stories

Share via
Copy link