
ಬೆಂಗಳೂರು: ನಟ ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನು 59ನೇ ಸಿಸಿಹೆಚ್ ನ್ಯಾಯಾಲಯ ಅಂಗೀಕರಿಸಿದೆ.
ಅರ್ಜಿಯಲ್ಲಿರುವ ಅಂಶಗಳ ಕುರಿತು ಸ್ಪಷ್ಟತೆ ಇದೆಯೇ ಎಂದು ಈ ಹಿಂದಿನ ವಿಚಾರಣೆಯಲ್ಲಿ ವಿವರಣೆ ಪಡೆದಿದ್ದ ನ್ಯಾಯಾಲಯ, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿದೆ. ಜೊತೆಗೆ ಪ್ರದೋಷ್ಗೆ ಆದೇಶದ ಪ್ರತಿಯನ್ನ ತಲುಪಿಸಿ ಸಹಿ ಪಡೆದೊಕೊಳ್ಳುವಂತೆ ಜೈಲಾಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.
ಸಿಆರ್ಪಿಸಿ ಸೆಕ್ಷನ್ 307ರಡಿ ಪ್ರದೋಷ್ ಸಲ್ಲಿಸಿದ್ದ ಅರ್ಜಿಯನ್ನ ಅಂಗೀಕರಿಸಿರುವ ನ್ಯಾಯಾಲಯ, ಪ್ರಕರಣದ ಕುರಿತು ಸಂಪೂರ್ಣ ಸತ್ಯವನ್ನ ತಿಳಿಸಬೇಕು ಎಂದು ಸೂಚಿಸಿದೆ. ಅಲ್ಲದೆ ಪ್ರಕರಣದಲ್ಲಿ ಇತರೆ ಆರೋಪಿಗಳ ಪಾತ್ರ, ನಿಮ್ಮ ಬಳಿಯಿರುವ ಮಾಹಿತಿಯನ್ನ ಸಂಪೂರ್ಣವಾಗಿ ಬಹಿರಂಗಪಡಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಒಂದು ವೇಳೆ ಹೇಳುವ ಅಂಶಗಳು ಸುಳ್ಳಾದರೆ ಅಥವಾ ಹೇಳಿಕೆಯಿಂದ ಹಿಂದೆ ಸರಿದರೆ ಮತ್ತೆ ನಿಮ್ಮನ್ನ ಆರೋಪಿಯನ್ನಾಗಿ ಪರಿಗಣಿಸಲಾಗುವುದು ಮತ್ತು ಸುಳ್ಳು ಸಾಕ್ಷ್ಯದ ಪ್ರಕರಣ ದಾಖಲಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.
ಈ ಮೊದಲು ಆಗಸ್ಟ್ 20 ರಂದು ನಡೆದ ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರದೋಷ್ ಹಾಜರಾಗಿದ್ದರು. ಆ ವೇಳೆ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಮಾಫಿ ಸಾಕ್ಷಿಯಾಗಲು ಬಯಸಿರುವ ಅರ್ಜಿಯನ್ನು ಪರಿಗಣಿಸುವ ಮುನ್ನ ಅದರಲ್ಲಿರುವ ಅಂಶಗಳ ಕುರಿತು ತಮಗೆ ಮಾಹಿತಿ ಇದೆಯಾ, ಓದಿ ಸಹಿ ಹಾಕಿದ್ದೀರಾ? ಏನು ಬರೆದಿದ್ದೀರಾ? ಎಂದು ಹೇಳಬಹುದಾ ಎಂದು ಪ್ರದೋಷ್ನನ್ನು ಪ್ರಶ್ನಿಸಿದರು.








