ಹೊನ್ನಾಳಿ:
ತಾಲೂಕಿನ ಹರಗನಹಳ್ಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿ ಮತ್ತು ಶ್ರೀ ಮಾತಂಗ್ಯೆಮ್ಮ ದೇವಿ ದೇವಸ್ಥಾನದ ನೂತನ ಗೋಪುರ ಕಳಸಾರೋಹಣ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಸೆ.5ರ ಬುಧವಾರ ನಡೆಯಲಿದ್ದು, ಆ ಪ್ರಯುಕ್ತ ಮಂಗಳವಾರ ವಿವಿಧ ದೇವರುಗಳ ಉತ್ಸವ-ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಅವರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನೆರವೇರಿತು. ಪೂರ್ಣ ಕುಂಭ ಹೊತ್ತ, ಕಳಸಗಳನ್ನು ಹಿಡಿದ ಮಹಿಳೆಯರು ಮೆರವಣಿಗೆಗೆ ಮೆರುಗು ನೀಡಿದರು.
ಹಿರೇಕಬ್ಬಾರ ಗ್ರಾಮದ ಶ್ರೀರಾಮ್ ಬ್ರಾಸ್ ಬ್ಯಾಂಡ್ ಆರ್ಕೆಸ್ಟ್ರಾ, ತುಮ್ಮಿನಕಟ್ಟೆ ಮತ್ತು ಬುಳ್ಳಾಪುರ ಗ್ರಾಮಗಳ ಡೊಳ್ಳಿನ ಸಂಘಗಳು, ವರಹದ ಶ್ರೀ ಮಾತಂಗೇಶ್ವರಿ ಹಲಗೆ ಸಂಘಗಳ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎಚ್. ಗೋಪಗೊಂಡನಹಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ, ಮಾದೇನಹಳ್ಳಿ ಗ್ರಾಮದ ಶ್ರೀ ತಿಮ್ಮೇಶ್ವರ ಭಜನಾ ಮಂಡಳಿಗಳ ಕಲಾವಿದರು ರಾತ್ರಿ ಶಿವಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಕೊಕ್ಕನೂರು, ಗೋವಿನಹಾಳು, ಮೂಗಿನಗೊಂದಿ, ಹಿರೇಗೋಣಿಗೆರೆ, ಹರಗನಹಳ್ಳಿ, ಜಿ.ಟಿ. ಕಟ್ಟೆ, ಹಿಂಡಸಘಟ್ಟೆ, ಕೋಣನತಲೆ, ಚಿಕ್ಕಗೋಣಿಗೆರೆ ಗ್ರಾಮಗಳ ಶ್ರೀ ಆಂಜನೇಯಸ್ವಾಮಿ ದೇವರುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಹರಗನಹಳ್ಳಿ ಗ್ರಾಮದ ಎಲ್ಲಾ ಮುಖಂಡರು, ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಅಧಿಕ ಸಂಖ್ಯೆಯಲ್ಲಿ ಸ್ವಾಮೀಜಿ ಮೆರವಣಿಗೆ ವೇಳೆ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







