ತುಮಕೂರು :
ಉತ್ತಮ ಆರೋಗ್ಯಕ್ಕೆ ಸಮತೋಲನ ಆಹಾರ ಸೇವನೆ ಅಗತ್ಯ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಬಾಲಭವನ ಸಂಘ(ರಿ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾ ಮಂಡಳಿಯ ಸಂಯುಕ್ತಾಶ್ರಯದಲ್ಲಿ ಬಾಲಭವನದಲ್ಲಿಂದು ಏರ್ಪಡಿಸಿದ್ದ “ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ” ಮತ್ತು “ಮಾತೃವಂದನ ಸಪ್ತಾಹ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಆರೋಗ್ಯಯುತ ಜೀವನ ನಡೆಸಲು ಶೇ. 80ರಷ್ಟು ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಬೇಕು. ರಾಗಿ ಮುದ್ದೆ, ಅನ್ನ ಮಾತ್ರ ತಿನ್ನುವುದರಿಂದ ದೇಹಕ್ಕೆ ಪೌಷ್ಟಿಕಾಂಶ ದೊರೆಯುವುದಿಲ್ಲ. ಇದರ ಜೊತೆಗೆ ಬೇಳೆ-ಕಾಳುಗಳು, ಸೊಪ್ಪು, ಹಸಿರು ತರಕಾರಿ, ಮೊಟ್ಟೆ, ಹಾಲು, ಹಣ್ಣುಗಳನ್ನು ಸೇವಿಸಿದಲ್ಲಿ ಅಗತ್ಯ ಖನಿಜಾಂಶ, ಜೀವಸತ್ವಗಳು ದೇಹಕ್ಕೆ ಲಭಿಸಿ ಮಲಬದ್ಧತೆ, ರಕ್ತಹೀನತೆ, ಅಪೌಷ್ಟಿಕತೆಯಿಂದ ದೂರವಿರಬಹುದೆಂದು ತಿಳಿಸಿದರು.
ಒಂದು ವಾರಗಳ ಕಾಲ ನಡೆಯಲಿರುವ ಈ ಸಪ್ತಾಹ ಕಾರ್ಯಕ್ರಮದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಪೌಷ್ಟಿಕ ಕಿಟ್ಗಳನ್ನು ವಿತರಿಸಲಾಗುತ್ತಿದೆ. ತಾಯಂದಿರು, ತಮ್ಮ ಮಕ್ಕಳಿಗೆ ಈ ಕಿಟ್ನಲ್ಲಿರುವ ಆಹಾರವನ್ನು ನೀಡಿ ಪೌಷ್ಟಿಕಯುಕ್ತರನ್ನಾಗಿ ಮಾಡಬೇಕು. ಇದಕ್ಕೆ ಪೂರಕವಾಗಿ ಜಿಲ್ಲೆಯಲ್ಲಿ 3 ತಿಂಗಳ ಮುನ್ನವೇ ಇಲಾಖೆಯಿಂದ “ಪೌಷ್ಟಿಕ ಪೂರ್ಣ ತುಮಕೂರು” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತೀಚೆಗಷ್ಟೆ ಗರ್ಭಿಣಿ ಸ್ತ್ರೀಯರಿಗಾಗಿ ಸೀಮಂತ ಕಾರ್ಯಕ್ರಮವನ್ನು ಸಹ ಏರ್ಪಡಿಸಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಸೇವಿಸಬೇಕಾದ ಆಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದನ್ನು ಅವರು ಸ್ಮರಿಸಿದರು.
ಸಂಪೂರ್ಣ ಪೌಷ್ಟಿಕ ಜಿಲ್ಲೆಯಾಗುವವರೆಗೂ ಅಪೌಷ್ಟಿಕತೆ ವಿರುದ್ಧದ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದ ಅವರು ಮಹಿಳೆಯರು ಸರ್ಕಾರದಿಂದ ಉಚಿತವಾಗಿ ದೊರೆಯುವ ಎಲ್ಲಾ ಆರೋಗ್ಯ ಸೌಲಭ್ಯಗಳ ಪ್ರಯೋಜನ ಪಡೆಯಬೇಕೆಂದು ಅವರು ಆಶಿಸಿದರು.
ಉಪನ್ಯಾಸ ನೀಡಿ ಮಾತನಾಡಿದ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತಜ್ಞೆ ರಾಧಾ ಬಣಕಾರ್ ನಮ್ಮ ಪೂರ್ವಜರು ಸರಿಯಾದ ಆಹಾರ ಕ್ರಮವನ್ನು ಅನುಸರಿಸುತ್ತಿದ್ದ ಕಾರಣ ರಕ್ತದೊತ್ತಡ, ಮಧುಮೇಹಗಳಂತಹ ರೋಗವನ್ನು ಅವರು ಕಂಡಿರಲೇ ಇಲ್ಲ. ಆಧುನಿಕ ಕಾಲದ ಪೀಳಿಗೆಯವರು ಸಿದ್ಧ ಆಹಾರಕ್ಕೆ ಹೊಂದಿಕೊಂಡು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದೊರೆಯುವ ನಾರಿನಂಶವಿರದ ಸಂಸ್ಕರಿಸಿದ ಆಹಾರವನ್ನು ಸೇವಿಸಿ ಮಲಬದ್ಧತೆ, ರಕ್ತಹೀನತೆ, ಅಜೀರ್ಣದಂತಹ ಹಲವಾರು ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಕುಟುಂಬದವರ ಆರೋಗ್ಯದ ಜವಾಬ್ದಾರಿ ಮಹಿಳೆಯರ ಮೇಲಿರುವುದರಿಂದ ಸರಿಯಾದ ಆಹಾರ ಕ್ರಮದ ಬಗ್ಗೆ ಮಹಿಳೆಯರಿಗೆ ಮೊದಲು ತಿಳುವಳಿಕೆ ಇರಬೇಕು. ನಾರಿನಂಶ ಹೇರಳವಾಗಿರುವ ಸಿರಿಧಾನ್ಯಗಳನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸಬೇಕು. ಬಿಳಿ ಬಣ್ಣದ ಆಹಾರ ವಸ್ತುಗಳಾದ ಉಪ್ಪು, ಸಕ್ಕರೆ, ಮೈದಾ, ಸೋಡಾಗಳಿಂದ ವ್ಯರ್ಜಿಸಬೇಕು. ವೈವಿಧ್ಯತೆಯ ಆಹಾರ ಕ್ರಮವನ್ನು ಅನುಸರಿಸುವುದರೊಂದಿಗೆ ಮೊಳಕೆ ಬರಿಸಿದ ಕಾಳುಗಳು ಸೇವಿಸುವುದರಿಂದ ಸುಲಭವಾಗಿ ಆಹಾರ ಜೀರ್ಣವಾಗುತ್ತದೆಯಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಮನೆಯ ಸುತ್ತಮುತ್ತಲಿನ ಜಾಗದಲ್ಲಿ, ಟೆರಸ್ ಮೇಲೆ ಕೈದೋಟಗಳನ್ನು ನಿರ್ಮಿಸಿ ದಿನನಿತ್ಯ ಬೇಕಾದ ಸೊಪ್ಪು-ತರಕಾರಿಗಳನ್ನು ಬೆಳೆದು ತಿನ್ನಬೇಕು. ಇದರಿಂದ ರೋಗಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.
ಶಿಶು ಅಭಿವೃದ್ಧಿ ಅಧಿಕಾರಿ ಶ್ರೀಧರ್ ಮಾತನಾಡಿ, ತಿನ್ನುವ ಆಹಾರದಲ್ಲಿರುವ ರಾಸಾಯನಿಕ ವಸ್ತುಗಳ ಬಗ್ಗೆ ನಮಗೆ ಅರಿವಿಲ್ಲದ ಕಾರಣ ಇತ್ತೀಚಿನ ದಿನಗಳಲ್ಲಿ ಶೇ. 40ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಆಹಾರದಲ್ಲಿ ಪೌಷ್ಟಿಕಾಂಶ ಇಲ್ಲದಿರುವುದೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಮ್ಮ ವ್ಯಾಪ್ತಿಗೆ ಬರುವ ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ಆಹಾರ ಕ್ರಮವನ್ನು ಅನುಸರಿಸುವ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್. ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟ್ರೀಯ ಪೌಷ್ಟಿಕ ಆಹಾರ ಯೋಜನೆ ಕಾರ್ಯಕ್ರಮದಡಿ ಮಹಿಳೆಯರಲ್ಲಿ ವಿಶೇಷವಾಗಿ ಗರ್ಭಿಣಿ-ಬಾಣಂತಿಯರಲ್ಲಿ ಪೌಷ್ಟಿಕ ಆಹಾರ ಸೇವನೆ, ಎದೆ ಹಾಲಿನ ಮಹತ್ವ, ಮಗುವಿನ ಪೋಷಣೆ, ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಅದೇ ರೀತಿ ಪ್ರಧಾನ ಮಂತ್ರಿ ಮಾತೃವಂದನ ಯೋಜನೆಯಡಿ ತಾಯಂದಿರಿಗೆ ತಮ್ಮ ಮೊದಲ ಹೆರಿಗೆ ಸಮಯದಲ್ಲಿ ಆರ್ಥಿಕ ಸಹಾಯ ಒದಗಿಸಲಾಗುವುದು. ಗರ್ಭ ಧರಿಸಿದ 150 ದಿನಗಳೊಳಗಾಗಿ 1ಸಾವಿರ ರೂ., 6 ತಿಂಗಳ ನಂತರ 2ಸಾವಿರ ರೂ. ಹಾಗೂ ಹೆರಿಗೆ ನಂತರ 2ಸಾವಿರ ರೂ.ಗಳ ಆರ್ಥಿಕ ನೆರವು ನೀಡುವುದರೊಂದಿಗೆ ಜನನ ಸುರಕ್ಷಾ ಯೋಜನೆಯಡಿ 1ಸಾವಿರ ರೂ.ಗಳ ಆರ್ಥಿಕ ಸಹಾಯ ಸೇರಿ ಒಟ್ಟು 6ಸಾವಿರ ರೂ.ಗಳ ನೆರವು ನೀಡಲಾಗುವುದು. ಸರ್ಕಾರಿ ಸೇವೆಯಲ್ಲಿರುವ ಮಹಿಳೆಯರನ್ನು ಹೊರತುಪಡಿಸಿ ಉಳಿದೆಲ್ಲಾ ಮಹಿಳೆಯರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ತಜ್ಞ ಜೆ.ಎನ್.ಪ್ರಶಾಂತ್ ಮಾತನಾಡಿ ಅಪೌಷ್ಟಿಕ ಮಕ್ಕಳ ತಾಯಂದಿರಿಗೆ ಮಕ್ಕಳನ್ನು ಪೌಷ್ಟಿಕಯುಕ್ತರನ್ನಾಗಿ ಬೆಳೆಸುವ ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಬಾಲಭವನ ಸದಸ್ಯ ಬಸವರಾಜು, ಡಿಹೆಚ್ಓ ಡಾ: ಚಂದ್ರಿಕಾ, ಕೆ.ವಿ.ಕೆ.ಮುಖ್ಯಸ್ಥ ಡಾ: ಲೋಗಾನಂದನ್, ಸಿಡಿಪಿಓ ಆರ್. ಸತ್ಯನಾರಾಯಣ್, ಅಂಬಿಕಾ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಭಾಗವಹಿಸಿದ್ದರು.







