ಬೆಂಗಳೂರು:
ರಾಜ್ಯದ ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆ ಕೂಡ ವರ್ಷದಿಂದ ವರ್ಷಕ್ಕೆ ವೃದ್ಧಿಸುತ್ತಿದೆ. ರಾಜ್ಯದ 6.3 ಕೋಟಿ ಜನಸಂಖ್ಯೆಗೆ 2 ಕೋಟಿ ವಾಹನಗಳಿವೆ.
ಸಾರ್ವಜನಿಕ ವಾಹನಗಳ ಮೇಲೆ ಅವಲಂಬಿತವಾಗುವುದಕ್ಕಿಂತ ಹೆಚ್ಚಿಗೆ ಜನ ತಮ್ಮದೇ ಖಾಸಗಿ ವಾಹನಕೊಳ್ಳಲು ಜನ ಹೆಚ್ಚು ಆಸಕ್ತಿತೋರುತ್ತಿದ್ದಾರೆ. ಸಾರಿಗೆ ಇಲಾಖೆ ಪ್ರಕಾರ ಜುಲೈ 31ರವರೆಗೆ ಕರ್ನಾಟಕದಲ್ಲಿರುವ ವಾಹನಗಳ ಸಂಖ್ಯೆ 1.99 ಕೋಟಿಗೇರಿದೆ. ಏಳು ವರ್ಷದಲ್ಲಿ ಈ ಸಂಖ್ಯೆ ಶೇ. 100ರಷ್ಟು ಅಧಿಕಗೊಂಡಿದೆ. ವಾರ್ಷಿಕವಾಗಿ ಶೇ. 8-10ರಷ್ಟು ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಈ ಸಂಖ್ಯೆ 2 ಕೋಟಿ ಮುಟ್ಟಿರುವ ಸಾಧ್ಯತೆ ಕೂಡ ಹೆಚ್ಚಿದೆ.
ಸಿಲಿಕಾನ್ ನಗರಿ ಬೆಂಗಳೂರು ನಗರ ಜಿಲ್ಲೆಯಲ್ಲಿ 10 ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು, ವಾಹನಗಳ ಸಂಖ್ಯೆ 76.2ಲಕ್ಷ ಇದೆ. ಬೆಳಗಾವಿ ನಗರ ಎರಡನೇ ಸ್ಥಾನದಲ್ಲಿದ್ದು, 35.7 ಲಕ್ಷ ವಾಹನಗಳನ್ನು ಹೊಂದಿದೆ.
ಮೂರನೇ ಸ್ಥಾನವನ್ನು ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ, ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಂಚಿಕೊಂಡಿವೆ. ಇಲ್ಲಿ ಸರಾಸರಿ 35 ಲಕ್ಷ ವಾಹನಗಳಿವೆ. ಇನ್ನು ಮೂರನೇ ಸ್ಥಾನದಲ್ಲಿ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ದಾವಣಗೆರೆ ಮತ್ತು ಚಿಕ್ಕಮಗಳೂರಿನಲ್ಲಿ 29.9ಲಕ್ಷ ವಾಹನಗಳಿವೆ.
ಮೈಸೂರು ಒಳಗೊಂಡಂತೆ ಮೈಸೂರು ವಿಭಾಗದ ಚಾಮರಾಜನಗರ, ಮಂಡ್ಯ, ಕೊಡಗು, ಮತ್ತು ಹಾಸನ ಜಿಲ್ಲೆಯಲ್ಲಿ 22 ಲಕ್ಷ ವಾಹನಗಳಿವೆ. ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳ ಬೀದರ್? ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 19.3 ಲಕ್ಷ ವಾಹನಗಳನ್ನು ಹೊಂದಿದ್ದರೆ, ಬೆಂಗಳೂರು ಗ್ರಾಮೀಣ ವಿಭಾಗ ಸೇರಿದಂತೆ ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಪ್ರತಿ ಜಿಲ್ಲೆಗಳು 16.7 ಲಕ್ಷ ವಾಹನಗಳಿವೆ.
ರಾಜ್ಯ ಹೊಂದಿರುವ 1.99 ಕೋಟಿ ವಾಹನಗಳಲ್ಲಿ 1.4 ಕೋಟಿ ವಾಹನ ದ್ವಿಚಕ್ರವಿದ್ದರೆ, 23.7 ಲಕ್ಷ ಕಾರ್ಗಳಿವೆ. ಇದರಲ್ಲಿ ಸಾರ್ವಜನಿಕ ವಾಹನಗಳಾದ ಬಸ್ 1 ಲಕ್ಷ, ಕ್ಯಾಬ್ 3.3 ಲಕ್ಷ ಹಾಗೂ ಆಟೋ ರಿಕ್ಷಾಗಳು 4.4 ಲಕ್ಷದಷ್ಟಿದೆ.
ರಾಜ್ಯದಲ್ಲಿ 2008-09ರಲ್ಲಿ 82.9 ಲಕ್ಷ ವಾಹನವಿದ್ದರೆ, 2011-12ರಲ್ಲಿ ಈ ಸಂಖ್ಯೆ ಕೋಟಿ ತಲುಪಿತ್ತು. 2015-16ರಲ್ಲಿ 1.6 ಕೋಟಿ ಇದ್ದ ಈ ಸಂಖ್ಯೆ 2017-18ರಲ್ಲಿ 1.9 ಕೋಟಿ ಗಡಿ ತಲುಪಿದೆ.
ಬೆಳಗಾವಿ ಜಿಲ್ಲೆ ಅತಿ ಹೆಚ್ಚು ವಾಹನ ಸಂಖ್ಯೆ ಹೊಂದಿದ್ದರೆ ಅದರ ನಂತರದ ಸ್ಥಾನ ಬೆಂಗಳೂರು ನಗರದ್ದು. ಬೆಳಗಾವಿಯಲ್ಲಿ ಮಾರ್ಚ್ನಲ್ಲಿ 11.6 ಲಕ್ಷ ವಾಹನ ಹೊಂದಿದರೆ, ಮಂಗಳೂರಿನಲ್ಲಿ 11.2 ಲಕ್ಷ, ಮೈಸೂರು ಜಿಲ್ಲೆಯಲ್ಲಿ 10.4 ಹಾಗೂ ತುಮಕೂರಿನಲ್ಲಿ 6.8 ಲಕ್ಷ ವಾಹನಗಳು ಹೊಸದಾಗಿ ಸೇರ್ಪಡೆಯಾಗಿದೆ.
ದಿನದಿಂದ ದಿನಕ್ಕೆ ಈ ರೀತಿಯಾಗಿ ವಾಹನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ತಜ್ಞರು ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ವಾಹನಗಳ ಸಂಖ್ಯೆ ಹೆಚ್ಚಾದರೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದ್ದು, ಅಪಘಾತದ ಸಂಖ್ಯೆ ಕೂಡ ಏರಿಕೆ ಕಾಣಲಿದೆ ಎನ್ನುತ್ತಾರೆ. ಸಾರ್ವಜನಿಕ ವಾಹನ ಬಳಕೆ ಬಗ್ಗೆ ಸರ್ಕಾರ ಜನರಿಗೆ ಅರಿವು ಮೂಡಿಸಬೇಕು ಎಂದು ಕೂಡ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಸುಲಭವಾದ ಇಎಂಐ ಕಂತು ಮತ್ತು ಸಾರ್ವಜನಿಕ ವಾಹನಗಳ ಅಲಭ್ಯತೆ ಕೂಡ ಖಾಸಗಿ ವಾಹನಗೊಳ್ಳಲು ಉತ್ತೇಜನಕಾರಿ ಅಂಶವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
