ಬೆಂಗಳೂರು
ಬಾಕಿಯಿರುವ 5 ತಿಂಗಳ ನಿಗದಿತ ಮಾಸಿಕ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರು ಬ್ಯಾಂಕ್ ವೃತ್ತದ ಬಳಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಆಶಾ ನಿಧಿ ನೋಂದಣಿ ಇರುವ ಸಮಸ್ಯೆಗಳನ್ನು ಸರಿಪಡಿಸಿ, ಆಶಾಗಳು ನಿರ್ವಹಿಸಿದ ಎಲ್ಲಾ ಕೆಲಸಗಳಿಗೆ ಸಂಪೂರ್ಣ ಪ್ರೋತ್ಸಾಹ ಧನ, ನೀಡಬೇಕು. ಪ್ರತಿ ಬಾರಿ ಪ್ರೋತ್ಸಾಹ ಧನ ಮತ್ತು ರಾಜ್ಯದ ನಿಗದಿತಗೌರವ ಧನ ನೀಡುವಾಗ ಅದು ಯಾವ ತಿಂಗಳ ವೇತನ ಎಂದು ನಮೂದಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಆಗ್ರಹಿಸಿದರು.
ಬಹುತೇಕ ಕಡೆಗಳಲ್ಲಿ ತಿಂಗಳಿಗೆ ಎರಡು ಬಾರಿ ಲಾರ್ವಾ ಸರ್ವೆ, ಆಗಾಗ ಕುಷ್ಠರೋಗದ ಸರ್ವೆ ಎಂದೆಲ್ಲಾ ಹೇಳಿ, ಹಲವು ಕೆಲಸಗಳನ್ನು ಮಾಡಬೇಕು.ಆದರೆ, ಸೂಕ್ತ ರೀತಿಯಲ್ಲಿ, ಪ್ರೋತ್ಸಾಹ ಧನ ನೀಡುವುದಿಲ್ಲ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಸಂಘದ ಸಲಹೆಗಾರ್ತಿ ಟಿ.ಸಿ.ರಮಾ, ಜಿಲ್ಲಾಧ್ಯಕ್ಷೆ ಫಾತೀಮಾ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








