ಚಿತ್ರದುರ್ಗ:
ವಿಶ್ವಮಾನವ ಸಾಹಿತ್ಯ ಸೃಷ್ಟಿಸಿದ ರವೀಂದ್ರನಾಥ ಠಾಗೂರ್ ಬಂಗಾಳಿ ಸಾಹಿತ್ಯಕ್ಕೆ ದೊಡ್ಡ ಆಲದ ಮರವಿದ್ದಂತೆ ಎಂದು ಲೇಖಕಿ, ವಿಮರ್ಶಕಿ, ಚಿಂತಕಿ, ಪ್ರಾಧ್ಯಾಪಕಿ ತಾರಿಣಿ ಶುಭದಾಯಿನಿ ಹೇಳಿದರು.
ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ಬೆಂಗಳೂರು ವತಿಯಿಂದ ಚಿತ್ರದುರ್ಗದ ತ.ರಾ.ಸು.ರಂಗಮಂದಿರದಲ್ಲಿ ನಡೆಯುತ್ತಿರುವ ಸಾಹಿತ್ಯ ಸಂವಾದ ಭಾರತೀಯ ಸಾಹಿತ್ಯ ಮತ್ತು ಬಂಡಾಯ ಪರಂಪರೆ ಪರಿಕಲ್ಪನಾತ್ಮಕ ಚಿಂತನೆ ಎರಡನೆ ದಿನದ ನಾಲ್ಕನೇ ಗೋಷ್ಟಿಯಲ್ಲಿ ಬಂಗಾಳಿ ಸಾಹಿತ್ಯ ಕುರಿತು ಮಾತನಾಡಿದರು.
ಬರವಣಿಗೆಯೇ ನಿಜವಾದ ಬಂಡಾಯ. ಬ್ರಿಟೀಷರು ಭಾರತಕ್ಕೆ ಬಂದ ನಂತರ ಎಲ್ಲಾ ಭಾಷೆಗಳಿಗೂ ಸಾಹಿತ್ಯ ರೂಪಿಸುವ ಕೆಲಸ ಶುರುವಾಯಿತು. ಭಾರತೀಯ ಸಮಾಜ ವಸಾಹತುಶಾಹಿಗಳ ಕೈಕೆಳಗಿತ್ತು. ಬಂಗಾಳಿ ಭಾರತೀಯ ಸಾಹಿತ್ಯವಾಗಿ ಗುರುತಿಸಬೇಕಿದೆ. ವಸಾಹತುಶಾಹಿಗಳಿಗೆ ಬಂಗಾಳಿ ಸಾಹಿತ್ಯದ ಮೂಲಕ ಪ್ರತಿಕ್ರಿಯೇ ನೀಡಿತು. ಮೇಲ್ವರ್ಗ, ಮೇಲ್ಜಾತಿಯ ಜನ ಬಂಗಾಳಿ ಸಾಹಿತ್ಯಕ್ಕೆ ಒಳಗಾದರು ಎಂದು ಬಂಗಾಳಿ ಸಾಹಿತ್ಯದ ಪ್ರಭಾವವನ್ನು ತಿಳಿಸಿದರು.
ಬಂಗಾಳದಲ್ಲಿ ಬರವಣಿಗೆಯೆ ಇಲ್ಲದ ಕಾಲದಲ್ಲಿ ಮಹಿಳೆಯರು ಕದ್ದುಮುಚ್ಚಿ ಆತ್ಮಕಥನಗಳನ್ನು ಬರೆದಿದ್ದುಂಟು. ಬಂಡಾಯ ಸಂವೇದನೆ ಎಲ್ಲಾ ಸಾಹಿತ್ಯದಲ್ಲಿ ಬರಲು ಆರಂಭವಾಯಿತು. ಆಧುನಿಕತೆ ಚರ್ಚೆ ಇಡೀ ಬಂಗಾಳ ಸಾಹಿತ್ಯದಲ್ಲಿ ನಡೆಯುತ್ತಿದೆ. ಆಧುನಿಕತೆಯನ್ನು ವಿರೋಧಿಸುವ ಸಾಹಿತ್ಯ ಬಂಗಾಳಿಯಲ್ಲಿ ಬಂತು. ಉಗ್ರನಿಷ್ಟೆ ತೋರುವುದು ಒಂದು ರೀತಿಯ ಬಂಗಾಳಿ ಸಾಹಿತ್ಯದಲ್ಲಿದೆ. ಸಮಕಾಲೀನ ಸಂದರ್ಭದಲ್ಲಿ ಬರಹಗಾರ ಬರಹಗಾರನಾಗಿ ಉಳಿಯಬಾರದು ನೈತಿಕ ಜವಾಬ್ದಾರಿಯನ್ನು ಇಟ್ಟುಕೊಳ್ಳಬೇಕು. ಮರುವ್ಯಾಖ್ಯಾನ ಮಾಡಿಕೊಳ್ಳುವ ಸಂದರ್ಭವಿದೆ. ಬಹುತತ್ವ ಅಪಾಯಕಾರಿಗಳನ್ನು ಹೇಗೆ ಎದುರಿಸಬೇಕು ಎನ್ನುವುದೇ ಬಂಗಾಳಿ ಸಾಹಿತ್ಯಕ್ಕೆ ಇರುವ ಬಹುದೊಡ್ಡ ಸಮಸ್ಯೆ ಎಂದರು.
ಹಿಂದಿ ಸಾಹಿತ್ಯ ಕುರಿತು ಕಾಶಿನಾಥ ಅಂಬಲಿಗೆ ಮಾತನಾಡಿ ದೂರವನ್ನು ಗೆದ್ದು ಹತ್ತಿರದವರನ್ನು ಕಳೆದುಕೊಂಡಿದ್ದೇವೆ ಎನ್ನುವ ಈಗಿನ ಪರಿಸ್ಥಿತಿಯಲ್ಲಿ ಬರೆಯುವುದು ಮಾತನಾಡುವುದು ಅರ್ಥಪೂರ್ಣವಾಗಿರಬೇಕು. ಕೋಮುವಾದ ಅಧಿಕಾರದ ಮೇಲೆ ಬಂದು ಕೂತು ಸಮಾನತೆಯನ್ನು ಸುಡುತ್ತಿದೆ. ಬುದ್ದಿಜೀವಿಗಳನ್ನು, ಜಾತ್ಯಾತೀತರನ್ನು ಸಾಲಾಗಿ ನಿಲ್ಲಿಸಿ ಗುಂಡು ಹಾರಿಸಬೇಕು ಎಂದು ಶಾಸಕರೊಬ್ಬರು ಹೇಳಿದ್ದಾರೆ. ಕ್ರೌರ್ಯವನ್ನು ಜನರು ಒಪ್ಪಿಕೊಳ್ಳುವಂತೆ ಮಾಡುವುದು ಒಂದು ಅಪಾಯಕಾರಿ ಇದರ ವಿರುದ್ದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ದೇವಾಲಯ ಪ್ರವೇಶ ನಿರಾಕರಣೆ ಮೊದಲು ಹುಟ್ಟಿಕೊಂಡಿದ್ದು, ಹಿಂದಿ ಸಾಹಿತ್ಯದಲ್ಲಿ ಕಲ್ಲುಸಂಸ್ಕತಿ, ದೇವಾಲಯ ಸಂಸ್ಕತಿ, ಜಾತಿವ್ಯವಸ್ಥೆಯನ್ನು ಮೊದಲು ವಿರೋಧಿಸಿದವರು ಕಬೀರದಾಸರು. ಅಸ್ಪಶ್ಯತೆ ದೇಶವನ್ನು ಒಟ್ಟಾಗಿ ಇರಲು ಬಿಡುತ್ತಿಲ್ಲ. ಜಾತಿಗಿಂತ, ಪ್ರತಿಯೊಬ್ಬರಿಗೂ ಅರಿವು, ಜ್ಞಾನ ಮುಖ್ಯವಾಗಿ ಇರಬೇಕು ಎಂದು ತಿಳಿಸಿದರು.
ಭಾರತದಲ್ಲಿ ಹಿಂದಿ ಭಾಷೆ ಅತ್ಯಂತ ಕಿರಿಯದಾದುದು. ಹಿಂದಿ ಭಾಷೆಗೆ ಪ್ರತಿಭಟನೆ ಹುಟ್ಟಿಕೊಳ್ಳುತ್ತದೆ. ಪ್ರತಿಭಟನೆ ಸ್ವರೂಪ ಹಿಂದಿ ಸಾಹಿತ್ಯದಲ್ಲಿದೆ. ಎಲ್ಲಾ ಭಾಷೆಗಳಲ್ಲಿಯೂ ಪ್ರತಿಭಟನೆ ಧ್ವನಿ ಇರುವುದು ಸಮಾಧಾನದ ಸಂಗತಿ ಎಂದರು.
ಗೋರಕ್ಷಣೆ ಹೆಸರಲ್ಲಿ ನೂರಕ್ಕೂ ಹೆಚ್ಚು ಕಗ್ಗೊಲೆಗಳಾಗಿವೆ. ಗೋಮಾತೆಯನ್ನು ಪೂಜಿಸಬೇಕು ಎನ್ನುವವರು ಒಂದು ದಿನವಾದರೂ ಗೋವಿನ ಮೈದಡಿ ಸಗಣಿ ಗಂಜಳವನ್ನು ಕೈಯಲ್ಲಿ ಮುಟ್ಟಿದ್ದಾರಾ ಎಂದು ಪ್ರಶ್ನಿಸಿದ ಕಾಶಿನಾಥ ಅಂಬಲಿಗೆ ಆಳುವ ಸರ್ಕಾರಗಳು ರೈತನನ್ನು ಎರಡು ಮೂರನೆ ದರ್ಜೆಯ ಪ್ರಜೆಗಳನ್ನಾಗಿ ನೋಡುತ್ತಿವೆ. ರೈತರು ಕಬ್ಬಿನ ಬಾಕಿ ಹಣ ಪಡೆಯಲು ಹೋರಾಟ ಮಾಡುವಂತಾಗಿದೆ. ಇದಕ್ಕಿಂತ ಹೀನಾಯ ಸ್ಥಿತಿ ಬೇರೊಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಂಗನಾಥ ಆರನಕಟ್ಟೆ ತಮಿಳು ಸಾಹಿತ್ಯ ಕುರಿತು ಮಾತನಾಡುತ್ತ ತಮಿಳು ಎನ್ನುವ ಭಾಷೆಯ ಬಂಡಾಯ. ದ್ರಾವಿಡ ಪ್ರಜ್ಞೆಯ ತಾಯಿ ಬೇರೆ ಎಂದರೆ ತಮಿಳು. ಎಲ್ಲಾ ಸಮುದಾಯದ ಸಿದ್ದರು ತಮಿಳು ಸಾಹಿತ್ಯದಲ್ಲಿ ಬರುತ್ತಾರೆ. ಜಾತಿ ಮತ್ತು ಮತಧರ್ಮದ ನಂಬಿಕೆಗಳನ್ನು ಸಿದ್ದರು ಪುಡಿ ಪುಡಿ ಮಾಡಿದ್ದಾರೆ. ತಮಿಳು, ಕನ್ನಡ ಬಂಡಾಯ ಸಾಹಿತ್ಯ ಪರಂಪರೆಗೆ ತುಂಬಾ ಕೊಡುಕೊಳ್ಳುವಿಕೆ ಇದೆ. ಒಂದು ಕಾಲದಲ್ಲಿ ಬರೆಯುವುದೇ ಬಂಡಾಯವಾಗಿತ್ತು. ಈಗ ಬದುಕುವುದೇ ಬಂಡಾಯವಾಗಿದೆ ಎಂದು ನುಡಿದರು.
ಬಂಡಾಯ ಸಾಹಿತ್ಯಕ್ಕೆ ಜಾತಿ, ಮತ, ಭಾಷೆಗಳ ಹಂಗಿಲ್ಲ. ಕನ್ನಡ ದಲಿತ ಸಾಹಿತ್ಯಕ್ಕಿಂತ ತಮಿಳು ದಲಿತ ಸಾಹಿತ್ಯ ತುಂಬಾ ತೀಕ್ಷ್ಣವಾದುದು ಎಂದರು.ಗುಜರಾತಿ ಸಾಹಿತ್ಯ ಕುರಿತು ಎಂ.ಜಿ.ಹೆಗಡೆ ಮಾತನಾಡಿದರು.ಅಲ್ಲಮಪ್ರಭು ಬೆಟ್ಟದೂರು ಗೋಷ್ಟಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿ.ಡಿ.ಚಿತ್ತಯ್ಯ ಸ್ವಾಗತಿಸಿದರು. ಡಿ.ಗೋಪಾಲಸ್ವಾಮಿ ನಾಯಕ ವಂದಿಸಿದರು. ಕೆ.ಶರೀಫ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ