ಹುಳಿಯಾರು
ಹುಳಿಯಾರು ಹೋಬಳಿಯ ಕೋರಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಾಠಿಪಾಳ್ಯ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಅನೈರ್ಮಲ್ಯ ತಾಣವಾಗಿ ಮಾರ್ಪಟ್ಟಿದೆ ಎಂದು ಕೆಲ ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಬೀದಿಗಳಲ್ಲಿರುವ ಚರಂಡಿಗಳಲ್ಲಿ ಕಸ ತೆಗೆಯದ ಕಾರಣ ನೀರು ಮತ್ತು ಕಸ ಸೇರಿ ದುರ್ನಾತ ಬೀರುತ್ತಿವೆ. ಇನ್ನೂ ಗ್ರಾಮದಲ್ಲಿರುವ ಶಾಲೆಯ ಸುತ್ತಮುತ್ತಲೂ ಕಸತುಂಬಿದೆ. ಚರಂಡಿಗಳಲ್ಲಿ ನೀರು ತುಂಬಿ ಸೊಳ್ಳೆಗಳ ಉತ್ಪಾದನಾ ಕೇಂದ್ರಗಳಾಗಿ ಮಾರ್ಪಟ್ಟಿವೆ. ಗ್ರಾಮದಲ್ಲಿ ರೋಗ ರುಜಿನಗಳು ಉಲ್ಬಣಗೊಂಡಿವೆ. ಈಗಾಗಲೇ ಕೆಲವರು ಸ್ವರ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ದಯಾನಂದ್ ದೂರಿದ್ದಾರೆ.’
ಗ್ರಾಮ ಪಂಚಾಯಿತಿ ಪಿಡಿಒಗೆ ಚರಂಡಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಕ್ರಮ ಜರುಗಿಸಿ ಜನರ ಆರೋಗ್ಯ ಕಾಪಾಡುವಂತೆ ಒತ್ತಾಯಿಸಿದ್ದಾರೆ.








