ದಾರ್ಶನಿಕರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿದ್ದರಾಮಯ್ಯ

ಹೂವಿನಹಡಗಲಿ :

        ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು ವಾಲ್ಮೀಕಿ ಮಹರ್ಷಿಗಳು ಸೇರಿದಂತೆ ಈ ನಾಡಿನಲ್ಲಿ ಅನೇಕ ದಾರ್ಶನಿಕರು ತಮ್ಮ ತತ್ವಗಳ ಮೂಲಕ ಸಮಾನತೆಯ ಬದುಕು ಕುರಿತು ಸಾರಿದ್ದಾರೆ. ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

        ಅವರು ತಾಲೂಕಿನ ಪಶ್ಚಿಮಕಾಲ್ವಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬೀರಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ, ಕನಕದಾಸರ 530ನೇ ಜಯಂತ್ಯೋತ್ಸವ ಹಾಗೂ ಕಾಗಿನೆಲೆ ಶ್ರೀಗಳ 60ನೇ ತುಲಾಬಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು

        ದೇವನೊಬ್ಬ, ನಾಮಹಲವು ಎನ್ನುವಂತೆ ಎಲ್ಲಾ ದೇವರುಗಳು ಕೂಡಾ ಸಮಾಜಕ್ಕೆ ಒಳಿತನ್ನು ಬಯಸುವವರ ಪರವಾಗಿರುತ್ತವೆ, ಕೆಲವರು ಧರ್ಮದ ಹೆಸರಿನಲ್ಲಿ ಜಾತಿ ಜಾತಿಗಳ ಮಧ್ಯೆ ದ್ವೇಶವನ್ನು ಹಚ್ಚಿ, ಒಡೆದಾಳುತ್ತಾರೆ. ಅಂತಹವರ ಮಾತಿಗೆ ಕಿವಿಗೊಡದೆ ಎಲ್ಲರೂ ಕೂಡಾ ಸಾಮರಸ್ಯದಿಂದ ಬಾಳಬೇಕೆಂದು ಹೇಳಿದರು. ಮನುಷ್ಯನಿಗೆ ಆತ್ಮಸಾಕ್ಷಿ, ಮನಸಾಕ್ಷಿಗಳಿಗೆ ಅನುಗುಣವಾಗಿ ನಡೆದಕೊಳ್ಳುವುದೇ ನಿಜವಾದ ಭಕ್ತಿಯಾಗಿದೆ ಎಂದ ಅವರು, ಧರ್ಮ ವಿಂಗಡಣೆ ಮಾಡುವವರ ವಿರುದ್ಧ ಎಚ್ಚರವಿದೆ ಎಂದು ಕಿವಿಮಾತು ಹೇಳಿದರು.

       ಅರಣ್ಯ ಸಚಿವ ಆರ್.ಶಂಕರ, ಸಂಸದ ವಿ.ಎಸ್.ಉಗ್ರಪ್ಪ, ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ವಿಧಾನ ಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ ಮಾತನಾಡಿ ಬೀರಲಿಂಗೇಶ್ವರ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ಅತ್ಯಂತ ಔಚಿತ್ಯಪೂರ್ಣವಾಗಿದೆ. ಹಾಗೂ ಸಾಮೂಹಿಕ ವಿವಾಹಗಳು ಜರುಗಿದ್ದು ನವದಂಪತಿಗಳು ಆರತಿಗೊಂದು, ಕಿರುತಿಗೊಂದು ಎನ್ನುವಂತೆ ಎರಡು ಮಕ್ಕಳನ್ನು ಪಡೆದು ಅವರನ್ನು ವಿದ್ಯಾವಂತರನ್ನಾಗಿ ಮಾಡುವುದರ ಮೂಲಕ ಸದೃಡ ಸಮಾಜಕ್ಕೆ ಸಹಕರಿಸಬೇಕೆಂದು ಹೇಳಿದರು

       ಕಾರ್ಯಕ್ರಮದ ಸಾನಿಧ್ಯವಹಿಸಿದ್ದ ಕಾಗಿನೆಲೆ ಗುರುಪೀಠದ ಶ್ರೀಗಳಾದ ನಿರಂಜನಾನಂದಪುರಿ ಸ್ವಾಮೀಜಿಗಳು ಆಶೀರ್ವಚನ ನೀಡಿ, ಇಂತಹ ಕಾರ್ಯಕ್ರಮಗಳು ಜರುಗುವುದರಿಂದ ಸಮಾಜದಲ್ಲಿ ಒಗ್ಗಟ್ಟು ಮತ್ತು ಜಾಗೃತಿ ಮೂಡುತ್ತದೆ ಎಂದು ಅಭಿಪ್ರಾಯ ಪಟ್ಟರು.
ಅಲ್ಲದೇ , ಇತ್ತೀಚೆಗೆ ಸಮಾಜದ ಯುವಕರು ತಮ್ಮ ಟೀಶರ್ಟಗಳ ಮೇಲೆ ಹಲವಾರು ಸಮಾಜದ ವಿರುದ್ಧವಾದಂತಹ ಸ್ಲೋಗನ್‍ಗಳನ್ನು ಬರೆಸಿಕೊಳ್ಳುವುದರ ಮೂಲಕ ಬೇರೆ ಸಮಾಜದವರನ್ನು ಕೆಣಕುತ್ತಿರುವುದು ಸರಿಯಲ್ಲ. ಪೀಠ ಇದನ್ನು ಖಂಡಿಸುತ್ತದೆ ಎಂದರು.

       ಇತ್ತೀಚೆಗೆ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿಕೊಳ್ಳುವುದರ ಮೂಲಕ ಜಾತಿ ನಿಂದನೆ ಮಾಡುತ್ತಿದ್ದು, ವಾಲ್ಮೀಕಿ ಸಮಾಜ ಮತ್ತು ಕುರುಬ ಸಮಾಜ ಇತಿಹಾಸದ ಕಾಲದಿಂದಲೂ ಸಹೋದರರಂತೆ ಬದುಕಿದ್ದೇವೆ.

           ಆದರೆ ಇತ್ತಿಚೆಗೆ ಬೂದಿ ಮುಚ್ಚಿದ ಕೆಂಡದಂತೆ ವಾತಾವರಣ ಹದಗೆಡುತ್ತಿದ್ದು, ವಾಲ್ಮೀಕಿ ಸಮಾಜದ ಮುಖಂಡರಾದ ಉಗ್ರಪ್ಪನವರು ಮತ್ತು ಹಾಲಮತ ಸಮಾಜದ ಮುಖಂಡರಾದ ಹೆಚ್.ಎಂ.ರೇವಣ್ಣನವರು ಶೀಘ್ರದಲ್ಲಿಯೇ ಇಂತಹ ಬೆಳವಣಿಗೆ ಕುರಿತು ಚರ್ಚೆ ನಡೆಸಿ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ಕೊಡುವುದರ ಮೂಲಕ ಕಿಡಿಗೇಡಿಗಳಿಗೆ ಬುದ್ದಿಹೇಳಿ, ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.

       ಹಂಪಸಾಗರ ಮಠದ ಶಿವಲಿಂಗರುದ್ರಮುನಿ ಶ್ರೀ, ಚರಂತೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಕೆ.ಶಾರದಮ್ಮ, ಉಪಾಧ್ಯಕ್ಷೆ ಪುಷ್ಪಾವತಿ, ಪುರಸಭೆ ಅಧ್ಯಕ್ಷೆ ಮರ್ದಾನ್‍ಬೀ, ಜಿ.ಪಂ.ಸದಸ್ಯೆ ಕುಂಚೂರು ಶೀಲಾ, ಜಿಲ್ಲಾ ಕಾಂಗೈ ಅಧ್ಯಕ್ಷ ಬಿ.ವಿ.ಶಿವಯೋಗಿ, ಬ್ಲಾಕ್ ಕಾಂಗೈ ಅಧ್ಯಕ್ಷರುಗಳಾದ ಎಂ.ಪರಮೇಶ್ವರಪ್ಪ, ಐಗೋಳ್ ಚಿದಾನಂದ, ಮಾಜಿ ಶಾಸಕ ಶಿರಾಜಶೇಖ್, ನಂದಿಹಳ್ಳಿ ಹಾಲಪ್ಪ, ಮಾಜಿ ವಿ.ಪ.ಸದಸ್ಯ ಕೆ.ಎಸ್.ಎಲ್.ಸ್ವಾಮಿ, ಅಬ್ದುಲ್ ಜಬ್ಬರ್‍ಸಾಬ್, ಸಿದ್ದನಗೌಡ, ರಾಮಚಂದ್ರಪ್ಪ, ಕೆ.ಎಂ.ಹಾಲಪ್ಪ, ಅಟವಾಳಗಿ ಕೊಟ್ರೇಶ, ಬಿ.ಹನುಮಂತಪ್ಪ, ಹೆಚ್.ಬೀರಪ್ಪ, ಸೇರಿದಂತೆ ಹಲವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಗಿನೆಲೆ ಶ್ರೀಗಳಿಗೆ 60ನೇ ತುಲಾಬಾರ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link