ಪ್ರತಿ ಪಡಿತರ ಚೀಟಿಗೆ 100 ರೂ. ಕಮಿಷನ್‍ಗೆ ಆಗ್ರಹ

ದಾವಣಗೆರೆ :

         ಪ್ರತಿ ಪಡಿತರ ಚೀಟಿಗೆ 100 ರೂ. ಕಮಿಷನ್ ನೀಡಬೇಕು. ಕನಿಷ್ಠ ಮೂರು ಲೀಟರ್ ಸೀಮೆ ಎಣ್ಣೆಯ ಜತೆಗೆ ಮೊದಲಿನಂತೆ ಗೋಧಿ, ಸಕ್ಕರೆ, ಉಪ್ಪು, ತಾಳೆ ಎಣ್ಣೆಯನ್ನು ಪಡಿತರ ವ್ಯವಸ್ಥೆಯಡಿಯಲ್ಲಿ ವಿತರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

        ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ನ್ಯಾಯಬೆಲೆ ಅಂಗಡಿ ನಡೆಸಲು ಸರ್ಕಾರದಿಂದ ಮಾನ್ಯತೆ ಪಡೆದು, ಕಳೆದ ಮೂರ್ನಾಲ್ಕು ದಶಕಗಳಿಂದ ಪಡಿತರ ವಿತರಣಾ ಪದ್ಧತಿಯಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಪದಾರ್ಥಗಳನ್ನು ವಿತರಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ನಮಗೆ ಸರ್ಕಾರ ಕ್ವಿಂಟಾಲ್‍ಗೆ 100 ರೂ. ಕಮಿಷನ್ ನೀಡುತ್ತಿದ್ದು, ಇದರಲ್ಲಿ ಮಳಿಗೆ ಬಾಡಿಗೆ, ಕೂಲಿ ನೀಡಿ ನಮ್ಮ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರತಿ ಪಡಿತರ ಚೀಟಿಗೆ 100 ರೂ. ಕಮಿಷನ್ ನೀಡಬೇಕೆಂದು ಒತ್ತಾಯಿಸಿದರು.

         ಕಳೆದ ಒಂದು ವರ್ಷದಿಂದ ಪ್ರತಿ ಹಂತದಲ್ಲೂ ಆಧಾರ್ ಆಧಾರಿತ ಬಯೋಮೆಟ್ರಿಕ್ ಪದ್ಧತಿಯ ಅಡಿಯಲ್ಲಿ ಪಡಿತರ ವಿತರಣೆಯಾಗುತ್ತಿದ್ದು, ಫಲಾನುಭವಿ ಹೆಬ್ಬೊಟ್ಟಿನ ಗುರುತು ನೀಡಿದರೆ ಮಾತ್ರ ಪಡಿತರ ವಿತರಣೆಯಾಗಲಿದೆ. ಹೀಗಾಗಿ ಯಾವುದೇ ದುರುಪಯೋಗ ನಡೆಯಲು ಸಾಧ್ಯವಿಲ್ಲ. ವಾಸ್ತವ ಪರಿಸ್ಥಿತಿ ಹೀಗಿರುವಾಗ, ಜಾಗೃತಿ ಸಮಿತಿ ಸದಸ್ಯರುಗಳ ಅವಶ್ಯಕತೆ ಹಾಗೂ ಅವರೊಂದಿಗೆ ಮಾಸಿಕ ಸಭೆ ನಡೆಸುವ ಅನಿವಾರ್ಯತೆ ಇರುವುದಿಲ್ಲ. ಆದ್ದರಿಂದ ಈ ಜಾಗೃತಿ ಸಮಿತಿಯನ್ನು ತಕ್ಷಣವೇ ರಾಜ್ಯ ಸರ್ಕಾರ ರದ್ದು ಪಡಿಸಬೇಕೆಂದು ಮನವಿ ಮಾಡಿದರು.

         ಪ್ರತಿ ತಿಂಗಳ 7ನೇ ತಾರೀಖಿನಂದು ನ್ಯಾಯಬೆಲೆ ಅಂಗಡಿ ಮಟ್ಟದಲ್ಲಿ ಜಾಗೃತಿ ಸಮಿತಿ ಸದಸ್ಯರು, ಅಧಿಕಾರಿಗಳು ಹಾಗೂ ಪಡಿತರ ಚೀಟಿದಾರರನ್ನೊಳಗೊಂಡು ನಡೆಯುವ ಆಹಾರ ಅದಾಲತ್ ಸಭೆಯಲ್ಲಿ ಚರ್ಚೆಗೆ ಬರುವ ಪಡಿತರ ಚೀಟಿದಾರರ ಬೇಡಿಕೆಗಳು ಇದುವರೆಗೂ ಈಡೇರಿಲ್ಲ. ಹೀಗಾದರೆ, ಈ ಆಹಾರ ಅದಾಲತ್ ನಡೆಸುವುದು ಯಾವ ಪುರುಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದರು.

        ಪ್ರತಿ ಆಹಾರ ಅದಾಲತ್ ಸಭೆಯಲ್ಲಿ ಪಡಿತರ ಚೀಟಿದಾರರು, ಮೊದಲಿನಂತಯೇ ಸೀಮೆ ಎಣ್ಣೆ, ಗೋಧಿ, ಸಕ್ಕರೆ, ತಾಳೇ ಎಣ್ಣೆ ಮತ್ತು ಉಪ್ಪು ವಿತರಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ಸರ್ಕಾರವು ಪಡಿತರ ಚೀಟಿದಾರರ ಬೇಡಿಕೆಯನ್ನು ಅರಿತು, ಪ್ರತಿ ಕಾರ್ಡ್‍ಗೆ ಕನಿಷ್ಠ ಮೂರು ಲೀಟರ್ ಸೀಮೆ ಎಣ್ಣೆ ವಿತರಿಸುವುದರ ಜತೆಗೆ ಗೋಧಿ, ಸಕ್ಕರೆ ತಾಳೆ ಎಣ್ಣೆ ಮತ್ತು ಉಪ್ಪು ವಿತರಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

         ಯಾವುದೇ ಕಾರಣಕ್ಕೂ ಪಡಿತರ ಚೀಟಿದಾರರು ಪದಾರ್ಥ ಪಡೆಯುವಾಗದ ಬಯೋ ಮೆಟ್ರಿಕ್ ನೀಡಲು ಹಣ ನೀಡಬಾರದು ಹಾಗೂ ಪಡಿತರ ಖರೀದಿಗೆ ಸರ್ಕಾರ ನಿಗದಿ ಮಾಡಿರುವ 38 ರೂ. ಹಣವನ್ನು ಮಾತ್ರ ನೀಡಬೇಕು. ಇದನ್ನು ಹೊರತು ಪಡಿಸಿ, ಯಾರಾದರೂ ಹೆಚ್ಚು ಹಣ ಕೇಳಿದರೆ, ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

          ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಡಿ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಎನ್.ಬಿ.ರಾಜು, ಉಪಾಧ್ಯಕ್ಷ ಮಲ್ಲೇಶ್, ಸುಬ್ಬಣ್ಣ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link