ಬೆಂಗಳೂರು
ಅಪಘಾತದಂತಹ ಹಲವಾರು ಕಾರಣಗಳಿಂದ ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗದೆ ತೊಂದರೆ ಅನುಭವಿಸುತ್ತಿದ್ದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಅನೇಕ ವಿಶೇಷ ಚೇತನರಿಗೆ ಕೃತಕ ಮೊಣಕೈ ವಿತರಿಸಲಾಯಿತು.
ಕಳೆದ 25 ವರ್ಷಗಳಿಂದ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿ ನಡೆಸುತ್ತಾ ಬಂದಿರುವ ಫ್ರೆಂಡ್ಸ್ ವೆಲ್ ಫೇರ್ ಅಸೋಷಿಯೇಷನ್ ಇಂದು ನಗರದ ಆದರ್ಶ ಕಾಲೇಜಿನಲ್ಲಿ ವಿಶೇಷ ಚೇತನರಿಗಾಗಿ ಉಚಿತ ಕೃತಕ ಮೊಣಕೈ ವಿತರಣೆ ಕಾರ್ಯಕ್ರಮ ಆಯೋಜಿಸಿತ್ತು.
ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನೀ ಅನಂತಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಫ್ರೆಂಡ್ಸ್ ವೆಲ್ ಫೇರ್ ಅಸೋಷಿಯೇಷನ್ ಜತೆ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವಿನಾಭಾವ ಸಂಬಂಧ ಹೊಂದಿದ್ದರು. ವಿಶೇಷಚೇತನರ ಅಭಿವೃದ್ದಿಗಾಗಿ ಫ್ರೆಂಡ್ಸ್ ವೆಲ್ ಫೇರ್ ಅಸೋಷಿಯೇಷನ್ ಮಾಡುತ್ತಿರುವ ಕಾರ್ಯಶ್ಲಾಘನೀಯ. ಶಿವಮೊಗ್ಗ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಅನೇಕ ಅಂಗವಿಕಲರು ಹೊಸದಾಗಿ ದೊರೆತ ಕೈಗಳನ್ನು ಉಪಯೋಗಿಸಿ ಬ್ಯಾಗ್ ನೇತುಹಾಕಿಕೊಳ್ಳುವುದು ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿರುವುದನ್ನು ಕಂಡು ತಮಗೆ ಸಂತಸವಾಗಿದೆ ಎಂದರು.
ಉಚಿತ ಮೊಣಕೈ ಪಡೆದುಕೊಂಡ ಶಿವಮೊಗ್ಗದ ಯುವತಿ ಶ್ರೀದೇವಿ ಮಾತನಾಡಿ, ಮೊದಲಬಾರಿಗೆ ನಾನು ಅಂಗವಿಕಲತೆಯಿಂದ ಹೊರಬಂದಿರುವ ಅನುಭವವಾಗುತ್ತಿದೆ. ಪಿಯುಸಿ ಓದುತ್ತಿರುವ ನನಗೆ ಮುಂದಿನ ದಿನಗಳಲ್ಲಿ ಇದರಿಂದ ಆಗುವ ಅನಾನುಕೂಲತೆಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕಳಾಗಿದ್ದೇನೆ ಎಂದರು.
ಎಲೆನ್ ಮೆಡೋಸ್ ಹ್ಯಾಂಡ್ ಫೌಂಡೇಶನ್ ಅಮೇರಿಕಾದ ಕ್ಯಾಲಿಫೆರ್ನಿಯಾದಲ್ಲಿ ತಯಾರಿಸುವ ಕೃತಕ ಅಂಗಾಂಗಗಳನ್ನು ತರಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ನೀಡುವ ಶಿಬಿರವನ್ನು ಪ್ರತಿವರ್ಷ ಆಯೋಜಸಿತ್ತಿದೆ. ಈ ಶಿಬಿರದಲ್ಲಿ ನೂರಕ್ಕೂ ಹೆಚ್ಚು ವಿಶೇಷ ಚೇತನರು ಮೊಣಕೈ ಪಡೆದುಕೊಂಡು ಹರ್ಷ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








