ದಾವಣಗೆರೆ:
ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕರೊಬ್ಬರು ಅಕ್ರಮವಾಗಿ ಉಚಿತ ನಿವೇಶನ ಪಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ.ಎಸ್.ಮಲ್ಲಿಕಾರ್ಜುನ ಇಂಗಳೇಶ್ವರ ಆರೋಪಿಸಿದರು.
ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪನವರಿಗೆ ಅರ್ಜಿ ಸಲ್ಲಿಸಿದ ಮಲ್ಲಿಕಾರ್ಜುನ್, ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕಿ ಶೋಭಾ ಎಂಬುವರು ಅಕ್ರಮವಾಗಿ ಉಚಿತವಾದ ನಿವೇಶನ ಪಡೆದಿದ್ದು, ಸೂಕ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಅಲ್ಲದೆ, ಕೆಪಿಎಂಇ ನಿಯಮಾವಳಿಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ಎವಿಕೆ ಕಾಲೇಜು ರಸ್ತೆಯಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಇರುವ ಕಡೆಯಲ್ಲಿ ಖಾಸಗಿ ಆಸ್ಪತ್ರೆಗೆ ಪರವಾನಗಿ ನೀಡಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ನ್ಯಾಮತಿಯ ಅರಬಗಟ್ಟೆ ಗ್ರಾ.ಪಂ ವ್ಯಾಪ್ತಿಯ ಮಾದನಬಾವಿ ಗ್ರಾಮದ ಹನುಮಂತಪ್ಪ ಮತ್ತು ಇತರೆ ರೈತರು ಮೆಕ್ಕೆಜೋಳದ ಬೆಳೆ ವಿಮೆ ಕಂತು ಪಾವತಿಸಿದ್ದರೂ, ವಿಮೆ ಹಣ ಇನ್ನೂ ಕೂಡ ಬಂದಿಲ್ಲ ಎಂದು ಆರೋಪಿಸಿದರು.ಹರಿಹರ ತಾಲೂಕಿನ ಅಮರಾವತಿ ಕಾಲೋನಿಯ ಜಿ.ಗುರುರಾಜ್ ಎಂಬುವರು ಹರಿಹರ-ಕೊಟ್ಟೂರು ರೈಲ್ವೆ ಗಾಡಿಯನ್ನು ಹೊಸಪೇಟೆಯವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು.
ನ್ಯಾಮತಿ ತಾಲೂಕಿನ ಟಿ.ಗೋಪಗೊಂಡನಹಳ್ಳಿ ಗ್ರಾಮದಲ್ಲಿ ಮಲ್ಲಪ್ಪ ಹೆಚ್ ಎಂಬುವರು 6 ಜನರ ಜಮೀನನ್ನು ಹದ್ದುಬಸ್ತು ಮಾಡಲು ಅರ್ಜಿ ಸಲ್ಲಿಸಿದ್ದೆವು ಆದರೆ ಇದೂವರೆಗೂ ಯಾರು ಸಹ ಬಂದಿರುವುದಿಲ್ಲ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಮನವಿ ಸಲ್ಲಿಸಿದರು.
ಹರಿಹರ ತಾಲ್ಲೂಕಿನ ಧೂಳೆಹೊಳೆ ಗ್ರಾಮದ ಮಹಾಲಿಂಗಯ್ಯ ಎಂಬುವವರು, 1978ರ ಮೇ.2 ರಂದು ಹಕ್ಕುಪತ್ರದ ಮೂಲಕ ನನಗೆ ಸರ್ಕಾರದಿಂದ ಸರ್ವೆ ನಂ.24/1ಬಿ ರಲ್ಲಿ ನಿವೇಶನ ನೀಡಲಾಗಿದ್ದು, ಭೂ ದಾಖಲೆಗಳ ಇಲಾಖೆಯ ಭೂಮಾಪಕರು ಅಳತೆ ಮಾಡಿ ಪರಿಶೀಲಿಸಿದಾಗ ಮೂಲ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲು ಕೋರಿ ಸಲ್ಲಿಸಿದ ಅರ್ಜಿ ಹಾಗೂ ಈ ಸೊತ್ತಿನ ಇ-ದಾಖಲೆ ಕೊಡಿಸಿಕೊಡಲು ಮನವಿ ಸಲ್ಲಿಸಿದರು.
ಜಾಲಿನಗರದ ನಸರೀನಭಾನು ಎಂಬುವರು ತನ್ನ ಒಂದು ವರ್ಷದ ಮಗುವಿಗೆ ಮೂತ್ರಕೋಶ ತೊಂದರೆ ಇರುವುದರಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








