ಚಿತ್ರದುರ್ಗ:
ಸನ್ಮಾನದ ಹಿಂದೆ ದೊಡ್ಡ ಮಾಫಿಯ ಇದೆ ಎನ್ನುವ ಅನುಮಾನ ಮೂಡಿಸುವ ಈ ಕಾಲದಲ್ಲಿ ಅರ್ಹರನ್ನು ಗುರುತಿಸಿ ಸನ್ಮಾನಿಸುವುದು ತುಂಬಾ ಕಷ್ಟದ ಕೆಲಸ ಎಂದು ನಿವೃತ್ತ ಪ್ರಾಂಶುಪಾಲರು ಹಾಗೂ ಚಿಂತಕರಾದ ಜೆ.ಯಾದವರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ಮದಕರಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಚಿತ್ರದುರ್ಗ ತಾಲೂಕು ನಾಲ್ಕನೆ ಕನ್ನಡ ಸಾಹಿತ್ಯ ಸಮ್ಮೇಳನದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬೆಂಗಳೂರು, ಡೆಲ್ಲಿ, ಮುಂಬಯಿ ಇನ್ನು ಮುಂತಾದ ಕಡೆ ಪ್ರಶಸ್ತಿಗಳನ್ನು ಕೊಡಿಸಿ ಸನ್ಮಾನ ಮಾಡಿಸುವ ಏಜೆಂಟರುಗಳಿದ್ಧಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದೂ ನಿಜಕ್ಕೂ ಸಾಹಿತ್ಯ ಸಮ್ಮೇಳನಕ್ಕೆ ಗೌರವ ಸಿಕ್ಕಂತಾಗಿದೆ ಎಂದು ಗುಣಗಾನ ಮಾಡಿದರು.
ಸಾಧಕರುಗಳಿಗೆ ಶಾಲು ಹೊದಿಸಿ ಸನ್ಮಾನಿಸುವ್ಯದರಿಂದ ಸುಖವಿಲ್ಲ. ಕನಿಷ್ಟ ಗೌರವಯುತವಾಗಿ ಜೀವಿಸಲು ಅವರಿಗೆ ನೆಲೆ ಕಲ್ಪಿಸುವುದು ಸರ್ಕಾರದ ಕೆಲಸ. ಎಲೆಮ್ಮರೆಯ ಕಾಯಿಯಂತೆ ಸಮಾಜ ಸೇವೆ ಮಾಡುತ್ತಿರುವವರು ತುಂಬಾ ಮಂದಿಯಿದ್ದಾರೆ. ಕಣ್ಣೊರೆಸುವುದಕ್ಕಾಗಿ ಸಾಧಕರಿಗೆ ಸನ್ಮಾನ ಮಾಡುವುದು ಬೇಡ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವುದರಿಂದ ಎಪ್ಪತ್ತು ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನಗಳ ಮೂಲಕವಾಗಲಿ ಸರ್ಕಾರವನ್ನು ಎಚ್ಚರಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಖ್ಯಾತ ಸಾಹಿತಿ ಸೋಮಶೇಖರಯ್ಯ ಮಾತನಾಡುತ್ತ ಸನ್ಮಾನಕ್ಕಾಗಿ ಯಾರು ಸಾಧನೆ ಮಾಡಬಾರದು. ಎಲೆಮರೆಯ ಕಾಯಿಯಂತೆ ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನ ಮಾಡುವುದು ಮುಖ್ಯ. ಯಾರ ಕಣ್ಣಿಗೂ ಬೀಳದೆ ಸಾಧನೆ ಮಾಡುವವರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ಸ್ಪೂರ್ತಿ ನೀಡಿದಂತಾಗುತ್ತದೆ. ಹಿಂದೆ ಜನರಲ್ಲಿ ಕರ್ತವ್ಯ ಪ್ರಜ್ಞೆ ಇತ್ತು, ನ್ಯಾಯ, ನೀತಿ, ಧರ್ಮದಿಂದ ಬಾಳುತ್ತಿದ್ದರು. ಈಗ ಎಲ್ಲವನ್ನು ಕಾನೂನು ಮೇಲೆ ಹಾಕಿ ಮಾನವ ಆತ್ಮಸಾಕ್ಷಿಯನ್ನು ಕಳೆದುಕೊಳ್ಳುತ್ತಿರುವುದು ದೊಡ್ಡ ದುರಂತ ಎಂದು ನೋವಿನಿಂದ ನುಡಿದರು.
ಆಕಾಶವಾಣಿಯ ಅರಕಲಗೂಡು ಮಧುಸೂದನ್, ತುರವನೂರು ಠಾಣೆ ಸಬ್ಇನ್ಸ್ಪೆಕ್ಟರ್ ಬಿ.ರಾಜು. ವಂದೆಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಅಂಚೆಚೀಟಿ ಸಂಗ್ರಾಹಕಿ ನಾಗಲಕ್ಷ್ಮಿಸುರೇಶ್, ಸ್ನೇಕ್ ಮುರುಗೇಶ್, ಎನ್.ಡಿ.ಗೌಡ, ಶಿಕ್ಷಕ ಪ್ರಕಾಶ್, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆಳಗಳಹಟ್ಟಿ ಗೋವಿಂದರಾಜ್, ಎಂ.ಆರ್.ಬಸವರಾಜ್, ರಂಗಭೂಮಿ ಕಲಾವಿದ ಇನ್ಫೆಂಟ್ ವಿನಯ್ï, ವುಶು ಕ್ರೀಡೆಯ ಕಿಶೋರ್ಕುಮಾರ್, ಟೇಕ್ವಾಂಡೋದಲ್ಲಿ ಚಿನ್ನದ ಪದಕ ವಿಜೇತೆ ಧನ್ಯಶ್ರೀ, ಫೈಲ್ವಾನ್ ನಾರಾಯಣಸ್ವಾಮಿ ಇವರುಗಳನ್ನು ಸನ್ಮಾನಿಸಲಾಯಿತು.
ಸಮ್ಮೇಳನಾಧ್ಯಕ್ಷ ಎಸ್.ಆರ್.ಗುರುನಾಥ್, ಕಸಾಪ ಜಿಲ್ಲಾಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ತಾಲೂಕು ಅಧ್ಯಕ್ಷ ಎಂ.ಆರ್.ದಾಸೇಗೌಡ ಇನ್ನು ಮುಂತಾದವರು ವೇದಿಕೆಯಲ್ಲಿದ್ದರು.