ಗುಬ್ಬಿ
ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಚಿಕ್ಕೂನಹಳ್ಳಿ ಮಜರೆ ನಡುವಲಪಾಳ್ಯ ಗ್ರಾಮದ ಶ್ರೀಘಂಟೆ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪರೇವು ಮತ್ತು ಬೆಳ್ಳಿ ಕವಚ ಹಾಗೂ ಬೆಳ್ಳಿ ಮುಖವಾಡ ಧಾರಣೆ ಕಾರ್ಯಕ್ರಮದ ಅಂಗವಾಗಿ ಕಳೆದೆರಡು ದಿನಗಳಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು.
ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಹರಕೆ ಮಾಡಿಕೊಂಡಂತೆ ದೇವಾಲಯಕ್ಕೆ ಗಂಟೆ ಕಟ್ಟುವ ಮೂಲಕ ತಮ್ಮ ಇಷ್ಠಾರ್ಥ ಪೂಜೆ ಸಲ್ಲಿಸಿದರು.ನೂರಾರು ವರ್ಷದ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ಪ್ರತಿ ನಿತ್ಯ ಭಕ್ತಾದಿಗಳು ಆಗಮಿಸಿ ತಮ್ಮ ಇಷ್ಠಾರ್ಥ ಸಿದ್ದಿಗಾಗಿ ಗಂಟೆಕಟ್ಟಿ ಹರಕೆ ತೀರಿಸುವುದು ಸಂಪ್ರದಾಯವಾಗಿದ್ದು, ಪ್ರತಿ ವರ್ಷಕ್ಕೊಮ್ಮೆ ನಡೆಯುವ ಪರದಲ್ಲಿ ಆರತಿ ಹೊತ್ತ ಮಹಳೆಯರು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ ದೇವರಿಗೆ ಆರತಿ ಬೆಳಗಿಸಿದ ನಂತರ ಪೂಜಾಕಾರ್ಯಗಳಲ್ಲಿ ಭಾಗವಹಿಸುತ್ತಾರೆ.
ದೇವಾಲಯಕ್ಕೆ ಭಕ್ತರು ಕಟ್ಟಿರುವ ಗಂಟೆ ಲೆಕ್ಕಹಾಕಲು ಸಾಧ್ಯವೆ ಇಲ್ಲ. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಗಂಟೆಗಳನ್ನು ಕಟ್ಟಿದ್ದಾರೆ. ಇವುಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಗಂಟೆಗಳು ಸಹ ಇವೆ. ಪುರಾತನ ಇತಿಹಾಸ ಹೊಂದಿರುವ ಗಂಟೆ ಬಸವೇಶ್ವರಸ್ವಾಮಿಗೆ ಮಹತ್ವದ ಧಾರ್ಮಿಕ ಇತಿಹಾಸವಿದೆ. ಗ್ರಾಮದ ಗಂಗಮ್ಮ ಎಂಬ ಭಕ್ತರೊಬ್ಬರೂ ಈ ಬಾರಿಯ ಪರದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ 20 ಕೆಜಿ ಬೆಳ್ಳಿಯಿಂದ ತಯಾರಿಸಿದ ಕವಚ ಮತ್ತು ಮುಖವಾಡವನ್ನು ಸೋಮವಾರ ನಡೆದ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನಂತರ ದೇವರಿಗೆ ಧಾರಣೆ ಮಾಡಲಾಯಿತು.
ಗ್ರಾಮದ ಮುಖಂಡ ರಾಜಣ್ಣ ಗೌಡರು ಮಾತನಾಡಿ, ಇಲ್ಲಿಗೆ ರಾಜ್ಯದ ಹಲವು ಭಾಗಗಳಿಂದ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹರಕೆ ಮಾಡಿಕೊಂಡಂತಹ ಭಕ್ತರಿಗೆ ಶೇ.100 ರಷ್ಟು ಯಶಸ್ಸು ಇಲ್ಲಿ ಸಿಕ್ಕಿದೆ. ಹಾಗಾಗಿ ಈಗಾಗಲೆ ಸುಮಾರು 50 ಸಾವಿರಕ್ಕೂ ಹೆಚ್ಚು ಘಂಟೆಗಳು ದೇವಾಲಯದಲ್ಲಿ ಇದ್ದು ಈ ಬಸವಣ್ಣನಿಗೆ ಘಂಟೆಗಳೆ ಶ್ರೀ ರಕ್ಷೆಯಾಗಿದೆ ಎಂದು ತಿಳಿಸಿದ ಅವರು, ಸುತ್ತ ಮುತ್ತಲ ಗ್ರಾಮಸ್ಥರು ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾದಿಗಳು ಭಕ್ತಿ ಭಾವನೆಯಿಂದ ತಮ್ಮ ಇಷ್ಠಾರ್ಥ ಸಿದ್ದಿಗಾಗಿ ಗಂಟೆಗಳನ್ನು ಕಟ್ಟುವ ಮೂಲಕ ಹರಕೆ ಅರ್ಪಿಸುತ್ತಾರೆ ಎಂದು ತಿಳಿಸಿದರು.
ಇಲ್ಲಿ ಕಟ್ಟಿರುವ ಪ್ರತಿಯೊಂದು ಘಂಟೆಗೂ ವಿಶೇಷತೆ ಕಂಡು ಬರುತ್ತದೆ. ಇಲ್ಲಿಗೆ ನಡೆದುಕೊಳ್ಳುವ ಸಾವಿರಾರು ಭಕ್ತರು ತಮ್ಮ ಸಮಸ್ಯೆಗಳು ನಿವಾರಣೆಯಾದಾಗ ಇಲ್ಲ್ಲಿಗೆ ಬಂದು ಘಂಟೆ ಕಟ್ಟುವುದು ರೂಢಿಯಲ್ಲಿದೆ. ಬೆಳ್ಳಿಕವಚ ನೀಡಿದ ಬಸವರಾಜು ಮಾತನಾಡಿ, ನಮ್ಮ ಕಷ್ಟವನ್ನು ಶ್ರೀ ಬಸವೇಶ್ವರ ಸ್ವಾಮಿಯು ಬಗೆ ಹರಿಸಿದ್ದರಿಂದ ಬೆಳ್ಳಿ ಕವಚವನ್ನು ನೀಡಲಾಗಿದ್ದು ನಂಬಿದವರನ್ನು ಎಂದಿಗೂ ಕೈ ಬಿಡದ ಮಹಾನುಭವ ಶ್ರೀ ಬಸವೇಶ್ವರ ಸ್ವಾಮಿಯಾಗಿದ್ದಾರೆ ಎಂದು ತಿಳಿಸಿದರು.
ಕಳೆದ ಎರಡು ದಿನಗಳ ಕಾಲ ಹೋಮ, ಹವನ, ದಾಸೋಹ, ಆರತಿ ಸೇವೆ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ವಿಧಿವತ್ತಾಗಿ ನಡೆಸಲಾಯಿತು. ಮಧ್ಯಾಹ್ನದಿಂದ ಆರಂಭವಾದ ದಾಸೋಹ ನಿರಂತರವಾಗಿ ರಾತ್ರಿಯವರೆಗೆ ನಡೆಯಿತು. ಭಕ್ತಾದಿಗಳು ಪೂಜೆ ಮಾಡಿಸಿದ ನಂತರ ಪ್ರಸಾದ ಸ್ವೀಕರಿಸಿ ಹೊರಡುವುದು ಇಲ್ಲಿನ ವಿಶೇಷವಾಗಿದೆ. ಗ್ರಾಮದ ಭಕ್ತಾದಿಗಳು, ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








