ಜೆಡಿಎಸ್ ಪಕ್ಷದಿಂದ ಚುನಾವಣಾ ಅಕ್ರಮ: ಬಿ.ಸೋಮಶೇಖರ್

ತುಮಕೂರು

         ಮಂಡ್ಯ, ಹಾಸನ ಮತ್ತು ತುಮಕೂರು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕೆಂದು ಹರಸಾಹಸ ಪಡುತ್ತಿರುವ ಜೆಡಿಎಸ್ ಗುತ್ತಿಗೆದಾರರ ಕಮಿಷನ್ ಹಣವನ್ನು ಹಂಚುವ ಮೂಲಕ ಚುನಾವಣಾ ಅಕ್ರಮ ಎಸಗುತ್ತಿದ್ದಾರೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ಸೋಮಶೇಖರ್ ವಾಗ್ದಾಳಿ ನಡೆಸಿದರು.

          ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರೂ ಕ್ಷೇತ್ರಗಳಲ್ಲಿ ಅವರಿಗೆ ಭಯ ಶುರುವಾಗಿದೆ. ಅಪ್ಪ, ಮಕ್ಕಳು, ಮೊಮ್ಮಕ್ಕಳು ಕಣದಲ್ಲಿದ್ದಾರೆ. ಹೀಗಾಗಿ ಗುತ್ತಿಗೆದಾರರ ಕಮಿಷನ್ ಹಣವನ್ನು ಹಂಚಲು ಹೊರಟಿದ್ದಾರೆ. ರಾಜ್ಯದಲ್ಲಿ ಮಿಲ್ಕ್ ಸೊಸೈಟಿಗಳು ಅವರ ಹಿಡಿತದಲ್ಲಿದ್ದು, ಆ ಸಂಘಗಳಿಗೆ ಹಣ ತಲುಪಿಸುವ ಮಾಹಿತಿಯೂ ಇದೆ. ಚುನಾವಣಾ ಆಯೋಗ ಇತ್ತ ಗಮನ ಹರಿಸಲಿ ಎಂದರು.

          ದೇವೇಗೌಡರ ಪಕ್ಷವಿಂದು ಜಾತ್ಯತೀತ ದಳವಾಗಿ ಉಳಿದಿಲ್ಲ. ಅದೇನಿದ್ದರೂ ಈಗ ಕುಟುಂಬ ದಳವಾಗಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಜಾಪ್ರಭುತ್ವದ ಬೆಲೆ ಗೊತ್ತಿಲ್ಲ. ದೇಶಪ್ರೇಮ ಎಂದರೇನು ತಿಳಿದಿಲ್ಲ. ಯೋಧರ ಬಗ್ಗೆ ಗೌರವವಿಲ್ಲ. ಇಂತಹವರು ಈ ರಾಜ್ಯ ಆಳುತ್ತಿದ್ದಾರೆ. ಹಿಂದೆ ಆದಾಯ ತೆರಿಗೆ ದಾಳಿ ನಡೆದಾಗ ಸಂವಿಧಾನ ಬದ್ಧ ಸಂಸ್ಥೆಗಳು ಯಾವಾಗಬೇಕಾದರೂ ತಪಾಸಣೆ ಮಾಡಬಹುದು ಎಂದಿದ್ದರು.

           ಈಗ ಇವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಾಗ ಸಂವಿಧಾನ ಸಂಸ್ಥೆಗಳ ದುರುಪಯೋಗ ಎನ್ನುತ್ತಾರೆ. ಐಟಿ ಕಛೇರಿ ಎದುರು ಪ್ರತಿಭಟನೆ ನಡೆಸುತ್ತಾರೆ. ಇವರಿಗೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ ಅವರು, ಮಮತಾ ಬ್ಯಾನರ್ಜಿಗು, ಕುಮಾರ ಸ್ವಾಮಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ಆರೋಪಿಸಿದರು.

          ರಾಜ್ಯದಲ್ಲಿ ಅಪವಿತ್ರ ಮೈತ್ರಿ ಸರ್ಕಾರದಿಂದಾಗಿ ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಸರ್ಕಾರ ರಚನೆಯಾದಂತಾಗಿದೆ. ಇಲ್ಲಿ ಕಾಂಗ್ರೆಸ್ ದೌರ್ಬಲ್ಯ ಎದ್ದು ಕಾಣುತ್ತಿದೆ ಎಂದು ದೂರಿದರು. ದೇವೇಗೌಡರು ಮತ್ತು ಜೆಡಿಎಸ್ ಪಕ್ಷವು ಯಾವತ್ತೂ ದಲಿತರು ಮತ್ತು ಹಿಂದುಳಿದವರ ವಿರೋಧಿ. ಇಂತಹವರಿಗೆ ಈ ವರ್ಗಗಳು ತಕ್ಕ ಪಾಠ ಕಲಿಸಬೇಕು ಎಂದರು.

           ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಜಿಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಹಾಲನೂರು ಲೇಪಾಕ್ಷ್, ಮಲ್ಲಿಕಾರ್ಜುನಯ್ಯ, ಕೊಪ್ಪಲ್ ನಾಗರಾಜ್, ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

          1994 -95 ರಲ್ಲಿ ದೇವೇಗೌಡರು ಮುಖ್ಯಮಂತ್ರಿಗಳಾಗಿದ್ದಾಗ ಸುಪ್ರೀಂಕೋರ್ಟ್‍ನ ಆದೇಶ ಉಲ್ಲಂಘಿಸಿದ್ದರು. ಇವರಿಂದಾಗಿ ಐ.ಎ.ಎಸ್. ಅಧಿಕಾರಿಯೊಬ್ಬರು ಜೈಲಿಗೆ ಹೋಗಬೇಕಾದ ಪ್ರಸಂಗ ಎದುರಾಗಿತ್ತು. ಇಂತಹ ಅನೇಕ ಉದಾಹರಣೆಗಳು ನನ್ನ ಬಳಿ ಇವೆ. ದೇವೇಗೌಡರು ದಲಿತರು ಮತ್ತು ಹಿಂದುಳಿದವರ ವಿರೋಧಿ ಎನ್ನುವುದಕ್ಕೆ ಹಲವಾರು ಸಾಕ್ಷಿಗಳು ನನ್ನ ಬಳಿ ಇವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link