ಬಳ್ಳಾರಿ 
ಬಳ್ಳಾರಿ ಲೋಕಸಭಾ ಚುನಾವಣಾ ನಿಮಿತ್ತ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಉದ್ಯೋಗಸ್ಥ ಮಹಿಳೆಯರ ಮತ್ತು ಕಲಾತಂಡಗಳ ಜಾಗೃತಿ ಜಾಥಾ ಗಮನಸೆಳೆಯಿತು.
ನಗರದ ಬುಡಾ ಕಚೇರಿಯ ಆವರಣದಿಂದ ಆರಂಭವಾದ ಮತದಾನ ಜಾಗೃತಿ ಜಾಥಾಗೆ ಚುನಾವಣಾ ಆಯೋಗದ ಐಕಾನ್ ಮತ್ತು ಹಿರಿಯ ಕಲಾವಿದೆ ಡಾ.ಸುಭದ್ರಮ್ಮ ಮನ್ಸೂರ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಸಿಡಿಪಿಒ ಉಷಾ, ಕಚೇರಿ ವೀಕ್ಷಕ ನಾಗರಾಜ ಸೇರಿದಂತೆ 600ಕ್ಕೂ ಹೆಚ್ಚು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಈ ಜಾಥಾದಲ್ಲಿ ಭಾಗವಹಿಸಿದ್ದರು.
ಈ ಜಾಥಾವು ಎಚ್.ಆರ್.ಗವಿಯಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಮಾರ್ಗವಾಗಿ ಗಡಗಿಚನ್ನಪ್ಪ ವೃತ್ತದ ಮುಖಾಂತರ ಬೆಂಗಳೂರು ರಸ್ತೆಯಲ್ಲಿ ಸಂಚರಿಸಿ ಬ್ರೂಸ್‍ಪೇಟೆ ಪೊಲೀಸ್ ಠಾಣೆ ಮಾರ್ಗವಾಗಿ ಗವಿಯಪ್ಪ ವೃತ್ತದ ಮುಖಾಂತರ ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ತಲುಪಿತು.
ಜಾಥಾದಲ್ಲಿ ಮತದಾನದ ಮಹತ್ವ, ಕಡ್ಡಾಯ ಮತದಾನ ಮತ್ತು ನೈತಿಕ ಮತದಾನ ಸಾರುವ ಸಂದೇಶ ಫಲಕಗಳನ್ನಿಡಿದುಕೊಂಡು ಮತದಾನದ ಮಹತ್ವದ ಘೋಷಣೆಗಳನ್ನು ಕೂಗುತ್ತಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸಾಗಿದರು.ಈ ಜಾಥಾದಲ್ಲಿ ವಿವಿಧ ಕಲಾತಂಡಗಳ ಪ್ರದರ್ಶನ ಗಮನಸೆಳೆಯಿತು. ನಂತರ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ 32 ಮಹಿಳೆಯರು ಪಾಲ್ಗೊಂಡಿದ್ದರು.ಅದರಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಹಾಗೂ 10 ಸಮಾಧಾನಕರ ಬಹುಮಾನಗಳನ್ನು ಇದೇ ಸಂದರ್ಭದಲ್ಲಿ ಗಣ್ಯರು ವಿತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








