ಹರಪನಹಳ್ಳಿ
ಲೋಕಸಭೆಗೆ ನಡೆಯುವ ಚುನಾವಣೆ ಐತಿಹಾಸಿಕವಾಗಿದ್ದು ಸಂವಿಧಾನವನ್ನು ಬದಲಾಯಿಸಲು ಹೊಂಚು ಹಾಕಿರುವ ಬಿಜೆಪಿ ಪಕ್ಷವನ್ನು ಮನೆಗೆ ಕಳಿಸಬೇಕಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಖಲಿದ್ ಹೇಳಿದರು.
ಪಟ್ಟಣದಲ್ಲಿ ಮತಯಾಚನೆ ಮಾಡಿ ಸುದ್ಧಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ದೀನ, ದಲಿತರ ಪ್ರಗತಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ನೂತನ ಯೋಜನೆಗಳನ್ನು ಜಾರಿಮಾಡಲು ಉತ್ತಮವಾದ ಪ್ರಣಾಳಿಕೆಯನ್ನು ಘೋಷಣೆ ಮಾಡಿದ್ದಾರೆ. ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಮತದಾರರು ಬೆಂಬಲಿಸಬೇಕು.
ದಾವಣಗೆರೆ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಕಳೆದ 20 ವರ್ಷಗಳಿಂದ ಹಿಂದುಳಿದ ಅಭ್ಯರ್ಥಿಗೆ ಪಕ್ಷ ಟಿಕೇಟ್ ನೀಡಿರಲಿಲ್ಲ ಈ ಬಾರಿ ಹೆಚ್.ಬಿ.ಮಂಜಣ್ಣ ಅವರಿಗೆ ನೀಡಿದ್ದು ಕಾರ್ಯಕರ್ತರು ಅತೀ ಉತ್ಸಹದಿಂದ ಚುನಾವಣೆಯಲ್ಲಿ ಮತಯಾಚನೆ ಮಾಡುವ ಮೂಲಕ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಲಿದ್ದಾರೆ ಎಂದರು.
ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರನಾಯ್ಕ್ ಮಾತನಾಡಿ, ಕೇಂದ್ರದಲ್ಲಿ ಆಡಳಿತ ಮಾಡುತ್ತಿದ್ದ ಕಾಂಗ್ರೆಸ್ ಜಾರಿಗೆ ತಂದಿದ್ದ ಹಲವಾರು ಯೋಜನೆಗಳನ್ನು ನರೇಂದ್ರ ಮೋದಿ ಸರ್ಕಾರ ಕೃತಿಚೌರ್ಯ ಮಾಡುತ್ತಿದೆ. ಆಧಾರ ಕಾರ್ಡ್ ಉದ್ಯೋಗ ಖಾತ್ರಿ, ಆರ್ಟಿಐ, ಸರ್ವ ಶಿಕ್ಷಣ ಅಭಿಯಾನ ಇನ್ನೂ ಮುಂತಾದ ಯೋಜನೆಗಳ ಜಾರಿಗೆ ಅಡ್ಡಗಾಲು ಹಾಕುತ್ತಿದ್ದ ಮೋದಿ ಅವರು ಅವುಗಳ ಮಹತ್ವ ಅರಿತು ಜಾರಿಮಾಡಿದ್ದಾರೆ.
ಕೆಲವು ಯೋಜನೆಗಳಾದ ಬೇಟಿ ಬಚವಾ ಬೇಟಿ ಪಡಾವ್ ಹೆಸರು ಬದಲಾಯಿಸಿ ತಮ್ಮವೆಂದು ಹೇಳಿಕೊಂಡು ಅನುಷ್ಠಾನ ಮಾಡುತ್ತಿದ್ದಾರೆ. ಜನಸಮಾನ್ಯರ ಕಷ್ಟ ನೋವುಗಳಿಗೆ ಕಾಂಗ್ರೆಸ್ ಪಕ್ಷ ಮಾತ್ರ ಪರಿಹಾರ ಒದಗಿಸುವುದು. ಬಿಜೆಪಿ ಶ್ರೀಮಂತರ ಪಕ್ಷ ಎಂದು ಜರಿದು ಮತಯಾಚಿಸಿ ಎಂದರು.
ರಾಮ ಮಂದಿರ ಕಟ್ಟಲು ಮುಸ್ಲಿಂ ಬೆಂಬಲ :
ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಕೆ.ಸಮೀವುಲ್ ಮಾತನಾಡಿ, ರಾಮಮಂದಿರ ಕಟ್ಟಲು ಮುಸ್ಲಿಂ ಭಾಂದವರು ಬೇಡ ಎಂದಿಲ್ಲ. ದೇಶದಲ್ಲಿ ಕೇವಲ ಶೇ.14 ರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಂಮರು ಶೇ.86 ರಷ್ಟು ಜನಸಂಖ್ಯೆ ಹೊಂದಿರುವ ಹಿಂದೂಗಳ ವಿರುದ್ಧ ಮಾಡುವುದು ಸಾಧ್ಯವೇ. ಆರ್ಎಸ್ಎಸ್ ಹಾಗೂ ಬಿಜೆಪಿ ಅವರ ಭಯದ ನೆರಳಲ್ಲಿ ಮುಸ್ಲಿಂರು ನರಳುತ್ತಿದ್ದಾರೆ. ಆದ್ದರಿಂದ ಬಿಜೆಪಿ ಪಕ್ಷವನ್ನು ಕಡೆಗಣಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಬೇಕು ಎಂದರು.
ಮುಖಂಡರಾದ ಎಂ.ಡಿ. ಶ್ರೀಕಾಂತ, ಪರಶುರಾಮ, ರಾಜುನಾಯ್ಕ್, ಬಸವರಾಜ, ಜಮೀರ್, ರಿಯಾಜ್, ಕಾಂತರಾಜ, ಹನುಮಂತ, ಗುರುಮೂರ್ತಿ, ಹರ್ಷವರ್ದನ್, ಕೊಟ್ರೇಶ್, ಮಹಂತೇಶ್ ಹಾಗೂ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








