ಬೆಂಗಳೂರು
ಬೈಕ್ ನಿಲುಗಡೆ ಮಾಡಲು 10 ರೂ.ಗಳ ಶುಲ್ಕವನ್ನು ನೀಡದ ಕಾರಣಕ್ಕೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಟೈಲ್ಸ್ ಕೆಲಸಗಾರರೊಬ್ಬರ ಮೇಲೆ ಹಲ್ಲೆ ನಡೆಸಿ ಎದೆಗೆ ಗುದ್ದಿ ಕೊಲೆ ಮಾಡಿರುವ ದುರ್ಘಟನೆ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಾವಣ್ಯ ಚಿತ್ರಮಂದಿರದ ಬಳಿ ಗುರುವಾರ ರಾತ್ರಿನಡೆದಿದೆ.
ಕೊಲೆಯಾದವರನ್ನು ಪುಲಿಕೇಶಿನಗರದ ಆಸ್ಟಿನ್ ಟೌನ್ನ ಭರಣೀಧರನ್ (38)ಎಂದು ಗುರುತಿಸಲಾಗಿದೆ.ಟೈಲ್ಸ್ ಕೆಲಸ ಮಾಡುತ್ತಿದ್ದ ಭರಣಿ ಧರನ್ ಅವರು ಸಂಜೆ 6.30ರ ವೇಳೆ ಲಾವಣ್ಯ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಬೈಕ್ನಲ್ಲಿ ಹೋಗಿ, ಪಕ್ಕದ ವಾಹನ ನಿಲುಗಡೆ ಪ್ರದೇಶದಲ್ಲಿ ಬೈಕ್ ನಿಲ್ಲಿಸಲು ಹೋಗಿದ್ದಾರೆ.
ವಾಹನ ನಿಲುಗಡೆ ಪ್ರದೇಶದ ಶುಲ್ಕ ಸಂಗ್ರಹಿಸುತ್ತಿದ್ದ ಸೆಲ್ವರಾಜ್ ಎಂಬಾತ ಬೈಕ್ ನಿಲುಗಡೆಗೆ 10 ರೂ. ನೀಡುವಂತೆ ಕೇಳಿದ್ದಾನೆ. ಕುಡಿತದ ಅಮಲಿನಲ್ಲಿದ್ದ ಭರಣೀಧರನ್ ಸಿನಿಮಾ ನೋಡಿಕೊಂಡು ವಾಪಸ್ ಬಂದಾಗ ಕೊಡುವುದಾಗಿ ಹೇಳಿದ್ದಾರೆ.
ಇದನ್ನು ಒಪ್ಪದ ಸೆಲ್ವರಾಜ್ ಈಗಲೇ ಹಣಕೊಟ್ಟು ಹೋಗುವಂತೆ ಕೇಳಿದ್ದು, ಇದರಿಂದಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾದಾಗ ಸೆಲ್ವರಾಜ್ನ ನೆರವಿಗೆ ಬಂದ ಶೇಖರ್ ಎಂಬಾತ ಭರಣೀಧರನ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ.
ಈ ವೇಳೆ ಇಬ್ಬರ ನಡುವೆ ಹೊಡೆದಾಟ ಸಂಭವಿಸಿದೆ ರೊಚ್ಚಿಗೆದ್ದ ಸೆಲ್ವರಾಜ್ ಹಾಗೂ ಶೇಖರ್ ಸೇರಿ ಭರಣೀಧರನ್ ಅವರ ಎದೆಗೆ ಬಲವಾಗಿ ಗುದ್ದಿದ್ದು ಸೂಕ್ಷ್ಮ ಜಾಗಕ್ಕೆ ಹೊಡೆದ ಬಿದ್ದಿದ್ದರಿಂದ ಅಸ್ಸ್ಥಗೊಂಡು ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿರುವ ಭಾರತಿ ನಗರ ಪೊಲೀಸರು, ಸೆಲ್ವರಾಜ್ನನ್ನು ಬಂಧಿಸಿ, ಪರಾರಿಯಾಗಿರುವ ಶೇಖರ್ಗಾಗಿ ತೀವ್ರಶೋಧ ನಡೆಸಿದ್ದಾರೆ ಎಂದು ರಾಹುಲ್ ಕುಮಾರ್ ಶಹಪುರವಾಡ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








