ಬೆಂಗಳೂರು
ರಾಜ್ಯ ಸರ್ಕಾರ ಈ ವರ್ಷದಿಂದ ಪೂರ್ವ ಪ್ರಾಥಮಿಕ(ಎಲ್‍ಕೆಜಿ)ಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿ ಆರಂಭಿಸಲು ಮುಂದಾಗಿರುವುಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಅವರು ಸರ್ಕಾರದ ಇಂತಹ ಕ್ರಮದಿಂದ ನಾಡ ಭಾಷೆಗಳು ನಾಶವಾಗಲಿದೆ ಎಂದು ಆತಂಕವ್ಯಕ್ತಪಡಿಸಿದರು.
ಪೂರ್ವ ಪ್ರಾಥಮಿಕ(ಎಲ್‍ಕೆಜಿ)ಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ಆರಂಭಿಸುವ ಕುರಿತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರೊಂದಿಗೆ ಚರ್ಚಿಸಿದಾಗ ಇಂಗ್ಲಿಷ್ ಮಾಧ್ಯಮದಿಂದ, ನಮ್ಮ ಮುಂದಿನ ಪೀಳಿಗೆ ಪ್ರಾದೇಶಿಕ ಭಾಷೆಗಳನ್ನು ಮರೆಯಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆ ತಲೆ ಎತ್ತಲು ನಾಡಿನ ಮೂರ್ಖ ಮತ್ತು ಭ್ರಷ್ಟ ರಾಜಕಾರಣಿಗಳು ಕಾರಣ ಎಂದು ಟೀಕಿಸಿದರು.
ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಥಾಪನ ದಿನಾಚರಣೆ ಹಾಗೂ ವಿಜಯ ವೈಜಯಂತಿ ಪುರಸ್ಕೃತ ಮತ್ತು ನಿವೃತ್ತ ಅಧ್ಯಾಪಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು ನಾವು ಆಯ್ಕೆ ಮಾಡಿದ ಮೂರ್ಖ ಮತ್ತು ಭ್ರಷ್ಟ ರಾಜಕಾರಣಿ ಗಳಿಂದ ಇಂತಹ ತೀರ್ಮಾನಗಳು ಬರುತ್ತದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಆಲೋಚನೆ ನಡೆಸಲಿದೆ ಎಂದು ಹೇಳಿದರು.
ಸಂಸ್ಕೃತ ಭಾಷೆಗೆ ಐತಿಹಾಸಿಕ ಹಿನ್ನೆಲೆ ಇದ್ದರೂ ಒಂದು ವರ್ಗಕ್ಕೆ ಮಾತ್ರ ಈ ಭಾಷೆ ಸೀಮಿತವಾದ ಕಾರಣ ಸಾಮಾನ್ಯ ಭಾಷೆ ಆಗಿ ಮಾರ್ಪಟ್ಟಿಲ್ಲ.ಆದರೆ, ಇಂತಹ ವಾತಾವರಣ ಸದ್ಯ ಬದಲಾಗಿದ್ದು, ಈ ಭಾಷೆ ಮತ್ತಷ್ಟು ಬೆಳೆಯುವಂತೆ ನೋಡಿಕೊಳ್ಳಬೇಕು ಎಂದರು.
ಗುರುಕುಲ ಪದ್ಧತಿ ಅಗತ್ಯ
ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಕುಲಪತಿ ಪ್ರೊ.ವಿ.ಮುರಳೀಧರ ಶರ್ಮಾ ಮಾತನಾಡಿ, ಭಾರತದ ಪ್ರಾಚೀನ ಶಿಕ್ಷಣ ಪದ್ಧತಿಗಳಲ್ಲಿ ಒಂದಾದ ಗುರುಕುಲ ಪದ್ಧತಿಗೆ ಪುನರುಜ್ಜೀವನ ನೀಡಬೇಕು.ಇದಕ್ಕಾಗಿ, ಅಗತ್ಯ ತಂತ್ರಜ್ಞಾನದ ಸಹಾಯ ಪಡೆದುಕೊಳ್ಳಬೇಕು ಎಂದು ನುಡಿದರು.
ವಿಶ್ವದಲ್ಲಿಯೇ ಹೆಸರು ಮಾಡಿದ್ದ ಕೆಲವೇ ವಿಶ್ವ ವಿದ್ಯಾಲಯಗಳಲ್ಲಿ ಭಾರತದ ನಳಾಂದ ಹಾಗೂ ಸಾಲೋಟಗಿಯ ವಿಶ್ವವಿದ್ಯಾಲಯಗಳು ಗುರುಕುಲ ಮಾದರಿಯ ಶಿಕ್ಷಣ ನೀಡುತ್ತಿದ್ದವು.ಇನ್ನೂ, ಗುರುಕುಲ ಮಾದರಿ ಉತ್ತಮ ಸಮಾಜ ನಿರ್ಮಿಸುವ ನಾಗರಿಕರನ್ನು ತಯಾರು ಮಾಡುತ್ತದೆ. ಜಗತ್ತು ಎಷ್ಟೇ ಮುಂದುವರೆದರೂ ಗುರುಕುಲ ಪದ್ಧತಿಯ ಶಿಕ್ಷಣ ಮಾದರಿ ಇಂದಿಗೂ ಪ್ರಸ್ತುತವಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಚೀನ ಭಾರತ ಇತಿಹಾಸದ ಪುಟಗಳನ್ನು ನೋಡಿದಾಗ, ಅನೇಕ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು, ವಿದೇಶಿಗರು ಬಂದಿದ್ದಾರೆ.ಆದರೆ, ಈಗ ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಭಾರತದ ಹೆಸರೇ ಇಲ್ಲ. ಇದನ್ನು ಸರಿಮಾಡಲು ನಾವು ಬಹಳ ಪ್ರಯತ್ನ ಮಾಡಬೇಕಾಗಿದೆ ಎಂದರು.
ಸಂಸ್ಕೃತ ವಿವಿಗಳಲ್ಲಿ, ಸಂಸ್ಕೃತ ಮಾಧ್ಯಮದಲ್ಲಿಯೇ ಅಧ್ಯಯನ ನಡೆದರೆ, ಭಾಷೆಯ ಸ್ವರೂಪ ಸಂರಕ್ಷಣೆ ಸಾಧ್ಯವಾಗ ಬಹುದು .ಇಲ್ಲದಿದ್ದರೆ, ಗ್ರೀಕ್, ಲ್ಯಾಟಿನ್ ಭಾಷೆಗಳಂತೆ, ಸಂಸ್ಕೃತ ತನ್ನ ಆಸ್ತಿತ್ವ ಕಳೆದುಕೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶೈವ ಸಂಶೋಧನಾ ಸಂಸ್ಥೆ
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪದ್ಮಾಶೇಖರ್ ಮಾತನಾಡಿ, ವಿಶ್ವವಿದ್ಯಾಲಯ ಭವಿಷ್ಯದಲ್ಲಿ ಜ್ಯೋತಿಷ್ಯ ಶಾಸ್ತ್ರ, ಯೋಗ, ತೀರ್ಥಕ್ಷೇತ್ರ ಪ್ರವಾಸೋದ್ಯಮ, ಭಕ್ತಿ ಸಂಸ್ಕೃತಿ, ದೇವಾಲಯ ವಿನ್ಯಾಸ, ಪ್ರಾಚೀನ ಭಾರತೀಯ ಇತಿಹಾಸ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಭಾಗಗಳನ್ನು ಪ್ರಾರಂಭಿಸಲಿದೆ ಎಂದರು.
ಮೈಸೂರಿನಲ್ಲಿ ಶೈವ ಸಂಶೋಧನಾ ಸಂಸ್ಥೆ ಸ್ಥಾಪಿಸಿ, ನೂತನ ಕಟ್ಟಡ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಇದೇ ವಾರ್ಷಿಕ ಸಾಲಿನಲ್ಲಿ ಗ್ರಂಥ ಪುರಸ್ಕಾರ ವನ್ನು 14 ವಿದ್ವಾಂಸರಿಗೆ ನೀಡಲಾಗಿದೆ ಎಂದ ಅವರು, ಮೇಲು ಕೋಟೆಯ ರಾಮಾನುಜ ಚಾರ್ಯರ ಸಹಸ್ರಮಾನರ ಪ್ರಯುಕ್ತ ಗ್ರಂಥಾಲಯ ಕಟ್ಟಡದ ಪುನರುಜ್ಜೀವನಗೊಳಿಸಲಾಗಿದೆ.ಜೊತೆಗೆ ಪ್ರತ್ಯೇಕವಾಗಿ ನೂತನ ಕಟ್ಟಡ ಕಟ್ಟಲಾಗಿದೆ ಎಂದು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕುಲಸಚಿವೆ ಎಂ.ಶಿಲ್ಪಾ, ವಿವಿಯ ಹಣಕಾಸು ಅಧಿಕಾರಿ ಡಾ.ಪ್ರಕಾಶ ಆರ್.ಪಾಗೋಜಿ ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








