ಅಲ್ಲಮನ ವಚನಗಳಲ್ಲಿ ಸಾಮಾಜಿಕ ರೋಗಕ್ಕೆ ಚಿಕಿತ್ಸೆ

ಚಿತ್ರದುರ್ಗ :

    ಸಮಾಜದ ರೋಗಗಳನ್ನು ಗುಣಪಡಿಸುವ ಚಿಕಿತ್ಸಕ ಗುಣವನ್ನು ನಾವು ಅಲ್ಲಮನ ವಚನಗಳಲ್ಲಿ ಕಾಣಬಹುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

      ಬಸವಕೇಂದ್ರ ಶ್ರೀಮುರುಘಾಮಠ, ಶ್ರೀ ಬೃಹನ್ಮಠ ಸಂಯುಕ್ತ ಪ.ಪೂ.ಕಾಲೇಜು, ಎಸ್.ಜೆ.ಎಂ. ಚಿತ್ರಕಲಾ ಶಾಲೆ, ಬಾಪೂಜಿ ಸಮೂಹ ಸಂಸ್ಥೆಗಳು ಚಿತ್ರದುರ್ಗ ಇವರ ಸಹಯೋಗದಲ್ಲಿ ನಿನ್ನೆ ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ ಶರಣಸಂಗಮ ಮತ್ತು ಡಾ. ಕುಂ.ವೀ. ಅವರ ಜೈ ಭಜರಂಗಬಲಿ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು
ಕಾದಂಬರಿಗಳಲ್ಲಿ 3 ವಿಧಗಳನ್ನು ನಾವು ಕಾಣಬಹುದು.

     ವಿಕೃತ ಶೈಲಿ, ವಿಕಟ ಶೈಲಿ ಮತ್ತು ವಿಡಂಬನಾ ಶೈಲಿ. ಅಲ್ಲಮನ ವಚನಗಳಲ್ಲಿ ನಾವು ಈ ವಿಡಂಬನ ಶೈಲಿಯನ್ನು ಕಾಣಬಹುದು. ಅಷ್ಟೇ ಅಲ್ಲ ಸಮಾಜದ ರೋಗಗಳನ್ನು ನಿವಾರಣೆ ಮಾಡುವ ಚಿಕಿತ್ಸಕ ಗುಣವನ್ನು ಅಲ್ಲಮ ತನ್ನ ವಿಚಾರಗಳಲ್ಲಿ ಹಾಗೂ ವಚನಗಳಲ್ಲಿ ಅಳವಡಿಸಿದ್ದಾನೆ. ಅಲ್ಲಮಪ್ರಭುಗಳು ಸಮಾಜಮುಖಿ ಕಾರ್ಯಗಳನ್ನು ಮಾಡುವಾಗ ಸಮಾಜದ ಸರಿ ವ್ಯವಸ್ಥೆಯನ್ನು ಒಪ್ಪಿಕೊಂಡು, ಸರಿಯಲ್ಲದ್ದನ್ನು ಸರಿಪಡಿಸುವ ಕಾರ್ಯವನ್ನು ಮಾಡುತ್ತಿದ್ದರು ಎಂದರು.

       ಹಾಗೆಯೇ ಕುಂ.ವೀ. ಅವರ 20ನೇ ಕಾದಂಬರಿಯಾದ ಜೈ ಭಜರಂಗಬಲಿಯು ವಿಡಂಬನಾತ್ಮಕ ದೃಷ್ಟಿಯನ್ನು ಹೊಂದಿದೆ. ಧಾರ್ಮಿಕ, ರಾಜಕೀಯ ಹೀಗೆ ನಾನಾ ಕ್ಷೇತ್ರಗಳ ಚೇಷ್ಠೆಗಳನ್ನು ಅನಾವರಣಗೊಳಿಸುವ ಕೃತಿಯಾಗಿದ್ದು ಅದಕ್ಕಾಗಿಯೆ ಮುಖಪುಟಕ್ಕೆ ಅವರು ಮರ್ಕಟ ಚಿತ್ರಗಳನ್ನು ಹಾಕಿದ್ದಾರೆ. ಇದು ಬರವಣಿಗೆಯಲ್ಲಿ ಪಕ್ವತೆ, ಪರಾಕಾಷ್ಟತೆ ಹಾಗು ವಿಶೇಷತೆಗಳನ್ನು ಒಳಗೊಂಡ ಕೃತಿಯಾಗಿದೆ ಎಂದು ಶರಣರು ನುಡಿದರು.

       ಲೇಖಕರಾದ ಡಾ. ಕುಂ.ವೀ. ಅವರು ಡಾ. ಶಿವಮೂರ್ತಿ ಮುರುಘಾ ಶರಣರಿಗೆ ತಾವೇ ಪುಸ್ತಕ ನೀಡುವುದರ ಮುಖಾಂತರ ವಿನೂತನವಾಗಿ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ನಿವೃತ್ತ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅವರು, ಇದು ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಚರ್ಚೆಗೆ ಗ್ರಾಸವಾಗಿರುವ ಕಾದಂಬರಿ. ಧರ್ಮದ ಕಪಿಮುಷ್ಠಿಯಲ್ಲಿ ಸಿಲುಕಿದ ರಾಜಕಾರಣವೇ ಕಾದಂಬರಿಯ ಕಥಾವಸ್ತು. ರೂಪಕಗಳನ್ನು ಬಳಸಿಕೊಂಡು ಪ್ರಸಕ್ತ ವಿದ್ಯಮಾನಗಳನ್ನು ಅರ್ಥಪೂರ್ಣವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದಾರೆ ಎಂದ ಅವರು, ಕುಂ.ವೀ. ಅವರನ್ನು ಅಭಿನಂದಿಸಿದರು.

       ಕೃತಿಕಾರ ಕುಂ.ವೀ. ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಸಮಾಜಮುಖಿ ಕೆಲಸಗಳನ್ನು ಈಗಿನ ಡಾ. ಶಿವಮೂರ್ತಿ ಮುರುಘಾ ಶರಣರು ಮಾಡುತ್ತಿದ್ದಾರೆ. ಅವರು ನನಗೆ ಸದಾ ಪ್ರೇರಣೆ. ಇಂದು ಬೆಳಗ್ಗೆ ಶ್ರೀಮಠದ ಸರಳ ಸಾಮೂಹಿಕ ವಿವಾಹದಲ್ಲಿ ನನ್ನ ಮಗನ ವಿವಾಹವೂ ಅತ್ಯಾನಂದವನ್ನು ನೀಡಿದೆ. ಪುನೀತ ಭಾವನೆ ಮೂಡಿಸಿದೆ. ಮುಂದಿನ ಜನ್ಮ ಎಂಬುದಿದ್ದರೆ ನಾನು ನನ್ನ ಹೆಂಡತಿ ಇಲ್ಲಿಯೇ ವಿವಾಹವಾಗುತ್ತೇವೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

       ಇಂದಿನ ಸಮಸ್ಯೆಗಳಿಗೆ ಲೇಖಕನಾಗಿ ಹೇಗೆ ಸ್ಪಂದಿಸಬೇಕೆಂಬುದನ್ನು ಅರಿತು ಈ ಕಾದಂಬರಿ ಬರೆದಿದ್ದೇನೆ. ಕಾದಂಬರಿ ಪ್ರಕಾರ ನನಗೆ ದಕ್ಕುವುದಿಲ್ಲವೆಂದು ಅನೇಕರು ಜರೆದಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿ ಕಾದಂಬರಿ ರಚನೆಯಲ್ಲಿ ತೊಡಗಿದೆ. ರಸ್ತೆ ನೀರು ವಿದ್ಯುತ್ ಕಾಣದ ಗ್ರಾಮವೊಂದರ ದೀಪದ ಬೆಳಕಿನಲ್ಲಿ `ಕಪ್ಪು’ ಕಾದಂಬರಿಯನ್ನು 8 ದಿನಗಳಲ್ಲಿಯೇ ಬರೆದಿದ್ದೇನೆ ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು. ಅರಮನೆ ಕಾದಂಬರಿ ಬರೆಯಲು ನನಗೆ ಸುಮಾರು 15 ವರ್ಷಗಳೇ ಬೇಕಾದವು ಎಂದು ಅವರು ಹೇಳಿದರು.

        ನಂತರ ಕಳೆದ ತಿಂಗಳ 31ನೇ ತಾರೀಖಿನಂದು ನಿವೃತ್ತರಾಗಿದ್ದ ಚಿತ್ರದುರ್ಗ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾಗಿದ್ದ ಡಾ. ಎಂ.ಜಿ. ವೇದಮೂರ್ತಿ ಅವರನ್ನು ಶ್ರೀಗಳು ಸನ್ಮಾನಿಸಿದರು. ವೇದಿಕೆಯಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್ ಅವರೂ ಇದ್ದರು.

       ಚರಮೂರ್ತಿಗಳಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳು, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಹೊಳಲ್ಕೆರೆ ಒಂಟಿಕಂಬ ಮುರುಘಾಮಠದ ಪ್ರಜ್ಞಾನಂದ ಸ್ವಾಮಿಗಳು ಉಪಸ್ಥಿತರಿದ್ದರು.

       ಚಿತ್ರದುರ್ಗ ಆಕಾಶವಾಣಿ ಎಡಿಇ ಶೆಳಿಗೆಪ್ಪ, ಆನಂದಪ್ಪ, ಹೋಮ ಪಂಡಿತಾರಾಧ್ಯರು, ಪ್ರೊ.ಲಿಂಗಪ್ಪ,ಪ್ರೊ.ಶಿವಕುಮಾರ್, ಚಿತ್ರಲಿಂಗಸ್ವಾಮಿ, ಶೇಷಣ್ಣಕುಮಾರ್, ಜಂಬುನಾಥ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ ಮತ್ತಿತರರಿದ್ದರು.

        ಜಮುರಾ ಕಲಾವಿದರು ಪ್ರಾರ್ಥಿಸಿದರು. ವಿದ್ಯಾರ್ಥಿ ಶರತ್‍ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಶ್ಮಿತ ಸ್ವಾಗತಿಸಿದರು. ನೀಲಾ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap