ಬೆಂಗಳೂರು
ನಗರದ ವೈಟ್ ಫೀಲ್ಡ್,ದೇವನಹಳ್ಳಿ,ಆರ್ಟಿನಗರ ಹಾಗೂ ಕಾಡುಗೊಂಡನಹಳ್ಳಿ ಬಳಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.
ಗಾರೆ ಕೆಲಸಗಾರ ಸಾವು
ದಾಟುತ್ತಿದ್ದ ಗಾರೆ ಕೆಲಸಗಾರನೊಬ್ಬ ಕ್ಯಾಬ್ ಹರಿದು ಮೃತಪಟ್ಟಿರುವ ವೈಟ್ ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬೇವಿನ ಮರದ ಕಾಲೋನಿ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ
ಬೇವಿನ ಮರದ ಕಾಲೋನಿಯ ಮರಿಸುಂದರ್ (45)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ ಅವರು ರಾತ್ರಿ 8ರ ವೇಳೆ ಮದ್ಯಪಾನ ಮಾಡಲು ಹತ್ತಿರದ ಬಾರ್ಗೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ವೈಟ್ ಫೀಲ್ಡ್ ಸಂಚಾರ ಪೊಲೀಸರು, ಕ್ಯಾಬ್ ಚಾಲಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಯುವಕ ಸಾವು
ದೇವನಹಳ್ಳಿಯ ಬಳಿ ಸ್ಕೂಟರ್ನಲ್ಲಿ ಹೋಗುತ್ತಿದ್ದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗಾರ್ಡನ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಕ್ಯಾಂಟರ್ ಹರಿದು ಮೃತಪಟ್ಟಿರುವ ದುರ್ಘಟನೆ ಸೋಮವಾರ ನಡೆದಿದೆ
ಭುವನಹಳ್ಳಿಯ ಶ್ರೀನಿವಾಸ್ (34)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಬೆಳಿಗ್ಗೆ 9ರ ವೇಳೆ ಕೆಲಸಕ್ಕೆ ಸ್ಕೂಟರ್ನಲ್ಲಿ ಭುವನಹಳ್ಳಿ ರೈಲ್ವೆ ಮೇಲುಸೇತುವೆ ಬಳಿ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕ್ಯಾಂಟರ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.
ಕ್ಯಾಂಟರ್ ಬಿಟ್ಟು ಚಾಲಕ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿರುವ ದೇವನಹಳ್ಳಿ ಸಂಚಾರ ಪೆÇಲೀಸರು, ಚಾಲಕನಿಗಾಗಿ ತೀವ್ರಶೋಧ ನಡೆಸಿದ್ದಾರೆ.
ಮೂವರಲ್ಲಿ ಓರ್ವ ಸಾವು
ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ನಲ್ಲಿ ಹೋಗುತ್ತಿದ್ದ ಮೂವರಲ್ಲಿ ಓರ್ವ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡಿರುವ ದುರ್ಘಟನೆ ಜಯಮಹಲ್ ರಸ್ತೆಯಲ್ಲಿ ನಡೆದಿದೆ.
ಸುಲ್ತಾನ್ ಪಾಳ್ಯದ ಮೋತಿ ನಗರದ ಸಯೈದ್ ಇಸ್ಮಾಯಿಲ್ (23) ಮೃತಪಟ್ಟರೆ, ಗಾಯಗೊಂಡಿರುವ ಮೊಹ್ಮದ್ ಅಲಿ ಹಾಗೂ ಹಜ್ವಾನ್ ಷರೀಫ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಎಸ್ಪಿ ರಸ್ತೆಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಯೈದ್ ಇಸ್ಮಾಯಿಲ್ ಸೋಮವಾರ ಸಂಜೆ 4.30ರ ವೇಳೆ ಮೊಹ್ಮದ್ ಅಲಿ ಹಾಗೂ ಹಜ್ವಾನ್ ಷರೀಫ್ನನ್ನು ಬೈಕ್ನಲ್ಲಿ ಹಿಂದೆ ಕೂರಿಸಿಕೊಂಡು ಜಯಮಹಲ್ ರಸ್ತೆಯಲ್ಲಿ ಹೋಗುತ್ತಿದ್ದರು.
ಮಾರ್ಗ ಮಧ್ಯೆ ಸಿಟಿ ಮಾರುಕಟ್ಟೆಯಿಂದ ಸುಲ್ತಾನ್ ಪಾಳ್ಯ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಇಸ್ಮಾಯಿಲ್ ಸ್ಥಳದಲ್ಲೇ ಮೃತಪಟ್ಟರು.ಪ್ರಕರಣ ದಾಖಲಿಸಿರುವ ಆರ್ಟಿ ನಗರ ಸಂಚಾರ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಸಾರಾ ಫಾತಿಮಾ ತಿಳಿಸಿದ್ದಾರೆ.
ಪೇಯಿಂಟರ್ ಸಾವು
ಕಾವಲ್ಸಂದ್ರದ ಬಳಿ ಬೈಕ್ನಲ್ಲಿ ಹೋಗುತ್ತದ್ದ ಪೇಯಿಂಟರ್ ಶಿವ್ರಾಜ್ (29) ಆಯಾತಪ್ಪಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಸೋಮವಾರ ಸಂಜೆ ನಡೆದಿದೆ.
ದೇವರಜೀವನಹಳ್ಳಿಯ ಶಿವರಾಜ್ ಸಂಜೆ 4.30ರ ವೇಳೆ ಕೆಲಸಕ್ಕೆ ರಜೆ ಇದ್ದರಿಂದ ಸ್ನೇಹಿತರ ಮನೆಗೆ ಬೈಕ್ನಲ್ಲಿ ಅತಿವೇಗವಾಗಿ ವಾಪಸ್ಸಾಗುತ್ತಿದ್ದಾಗ ಕಾವಲ್ಭೈರಸಂದ್ರದ ಬಳಿ ನಿಯಂತ್ರಣತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








