ಬೆಂಗಳೂರು
ಅಧಿಕ ಬಡ್ಡಿಯ ಆಸೆ ತೋರಿಸಿ ಕೋಟ್ಯಾಂತರ ವಂಚನೆ ನಡೆಸಿ ಪರಾರಿಯಾಗಿರುವ ಐಎಂಎ ಮಾಲೀಕನ 26 ಸ್ಥಿರಾಸ್ತಿಗಳನ್ನು ಗುರುತಿಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಐಎಂಎ ಕಂಪನಿಯ ಮಾಲೀಕನಿಗೆ ಸೇರಿದ ಮಹಮ್ಮದ್ ಮನ್ಸೂರ್ ಖಾನ್‍ಗೆ ಸೇರಿದ ವಾಣಿಜ್ಯ ಕಟ್ಟಡಗಳು, ಶಾಲಾ ಜಾಗ, ಜಮೀನು, ಅಪಾರ್ಟ್‍ಮೆಂಟ್, ಮನೆ, ಸೇರಿ 26 ಸ್ಥಿರಾಸ್ತಿ ಗಳನ್ನು ಪತ್ತೆ ಹಚ್ಚಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ತನಿಖಾ ತಂಡದ ಡಿಸಿಪಿ ಎಸ್.ಗಿರೀಶ್ ಅವರು ತಿಳಿಸಿದ್ದಾರೆ.
ಈ ನಡುವೆ ಐಎಂಎ ಮಾಲೀಕ ಮನ್ಸೂರ್ ಖಾನ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದ್ದು ಚಿನ್ನದ ವ್ಯಾಪಾರಿ ಅಂಕಿತ್ ಸಾಂಘ್ವಿ ಎಂಬವರು ಮನ್ಸೂರ್ ಖಾನ್ ವಿರುದ್ಧ ವಂಚನೆ ಆರೋಪ ಮಾಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕರಿಂದ ಮಾತ್ರವಲ್ಲದೆ, ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳಿಗೂ ಇದೇ ರೀತಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.ಮನ್ಸೂರ್ ಬಳಿ ಪತ್ತೆ ಹಚ್ಚಿರುವ ಸ್ಥಿರಾಸ್ತಿಗಳ ಮೌಲ್ಯದ ಅಂದಾಜು ಮಾಡಲಾಗುತ್ತಿದ್ದು ಅದರ ವಿವರವನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ಸಲ್ಲಿಸಿ ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜಯನಗರದ ಐಎಂಎ ಜ್ಯೂವೆಲರ್ಸ್ ಮಳಿಗೆ ಮೇಲೆ ದಾಳಿ ನಡೆಸಿ 13 ಕೋಟಿ ಮೌಲ್ಯದ 43 ಕೆ.ಜಿ. ಚಿನ್ನ, 17.6 ಕೋಟಿ ಮೌಲ್ಯದ 5964 ಕ್ಯಾರೆಟ್ ವಜ್ರ, ತಲಾ ಒಂದೂವರೆ ಕೋಟಿ ಮೌಲ್ಯದ 520 ಕೆ.ಜಿ. ಬೆಳ್ಳಿ, ಸೈಲ್ಟರ್ ಡೈಮೆಂಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮನ್ಸೂರ್ ನ ವಿಚ್ಛೇದಿತ ಪತ್ನಿ ತಬಸ್ಸಮ್ ಬಾನು ಅವರ ಶಿವಾಜಿನಗರದ ಗುಲ್ಫನ್ ಅಪಾರ್ಟ್‍ಮೆಂಟ್‍ನ ಮನೆಯಲ್ಲಿ 39.5 ಲಕ್ಷ ಮೌಲ್ಯದ ಒಂದು ಕೆ.ಜಿ. 500 ಗ್ರಾಂ ಚಿನ್ನ, 1.5 ಕೆ.ಜಿ. ಬೆಳ್ಳಿ, 2.69 ಲಕ್ಷ ನಗದು ಸೇರಿ 40 ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಪಾರ್ಟ್‍ಮೆಂಟ್ ವಶ
ಇದಲ್ಲದೇ ತಿಲಕ್ ನಗರದ ಎಸ್.ಆರ್.ಕೆ.ಗಾರ್ಡನ್‍ನಲ್ಲಿ ಹೊಂದಿರುವ 1.20 ಕೋಟಿ ಮೌಲ್ಯದ ಅಪಾರ್ಟ್‍ಮೆಂಟ್ ದಾಖಲಾತಿಗಳನ್ನು ವಶಪಡಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ಗಿರೀಶ್ ಹೇಳಿದರು.
ಐಎಂಎ ಕಂಪನಿಯ ಸ್ತಿರಾಸ್ಥಿಗಳಲ್ಲಿ ಶೋಧನಾ ಕಾರ್ಯ ಮುಂದುವರೆಸಲಾಗಿದ್ದು ಅಲ್ಲಿರುವ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮನ್ಸೂರ್ ಖಾನ್ ನಡೆಸುತ್ತಿದ್ದ ಔಷಧ ಫಾರ್ಮ ಆಸ್ಪತ್ರೆಯಲ್ಲೂ ಶೋಧನೆ ನಡೆಸಲಾಗುತ್ತಿದೆ ಎಂದು ಗಿರೀಶ್ ತಿಳಿಸಿದರು.
9 ಪ್ರಕರಣ ದಾಖಲು
ಮನ್ಸೂರ್ ಖಾನ್ ನನ್ನ ಬಳಿ ಸುಮಾರು 9.80 ಕೋಟಿ ರೂ. ಮೌಲ್ಯದ ಚಿನ್ನವನ್ನು ಖರೀದಿಸಿದ್ದರು. ಬಳಿಕ ಕಂಪನಿ ಹೆಸರಲ್ಲಿ ಚೆಕ್ ನೀಡಿ, ನಾಳೆ ಡ್ರಾ ಮಾಡಿಕೊಳ್ಳಿ ಎಂದು ಹೇಳಿದ್ದರು. ಆದರೆ ಹಣ ಡ್ರಾ ಮಾಡಿಕೊಳ್ಳುವ ಹಿಂದಿನ ದಿನವೇ ಮನ್ಸೂರ್ ಖಾನ್ ಕುಟುಂಬ ಸಮೇತ ತಲೆಮರೆಸಿಕೊಂಡಿದ್ದಾರೆ ಎಂದು ಅಂಕಿತ್ ಸಾಂಘ್ವಿ ದೂರಿದ್ದಾರೆ.ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮೂಲಕ ಇಲ್ಲಿವರೆಗೂ ಒಟ್ಟು 6 ಎಫ್‍ಐಆರ್ ಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








