ಜಿಂದಾಲ್ ಗೆ ಭೂಮಿ ಪರಭಾರೆ : ಜಯಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ಬೆಂಗಳೂರು

    ಜಿಂದಾಲ್ ಕಂಪನಿಗೆ ಯಾವುದೇ ಕಾರಣಕ್ಕೂ ಭೂಮಿ ಹಸ್ತಾಂತರ ಮಾಡದೇ ಕಂಠೀರವ ಕ್ರೀಡಾಂಗಣದ ಉಸ್ತುವಾರಿ ಜವಾಬ್ದಾರಿಯ ಪರವಾನಗಿಯನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

     ಪುರಭವನದ ಮುಂಭಾಗ ಸೇರಿದ ನೂರಾರು ಮಂದಿ ಕಾಯಕರ್ತರು ಅಲ್ಲಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮೆರವಣಿಗೆ ಹೊರಟಾಗ ಪೊಲೀಸರು ಮಾರ್ಗ ಮಧ್ಯೆ ಮೈಸೂರು ಬ್ಯಾಂಕ್ ವೃತ್ತ ಬಳಿ ತಡೆದರು.

      ಅಲ್ಲೇ ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ, ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಾಯುಕ್ತರ ವರದಿಯಲ್ಲೂ ಜಿಂದಾಲ್ ಕಂಪನಿ ಹೆಸರು ಉಲ್ಲೇಖವಾಗಿದೆ. ಅಲ್ಲದೆ ಸರ್ಕಾರಿ ಸ್ವಾಮ್ಯದ ಮಿನರಲ್ ಕಂಪನಿಗೆ ಜಿಂದಾಲ್ ಕಂಪನಿ ಹಣ ಬಾಕಿ ಉಳಿಸಿಕೊಂಡಿದೆ ಇಂತಹ ಕಂಪನಿಗೆ 3,667 ಎಕರೆ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಆಗ್ರಹಿಸಿದರು.

       ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಜಿಂದಾಲ್‍ಕಂಪನಿಗೆ ಕೆಲವು ವರ್ಷಗಳ ಅವಧಿಗೆ ಭೂಮಿಯನ್ನು ಕೊಡಲಾಗಿತ್ತು. ಆಗಲೂ ಸಹ ಯಡಿಯೂರಪ್ಪ ಅವರು ಕಿಕ್‍ಬ್ಯಾಕ್ ಪಡೆದು ಜಿಂದಾಲ್‍ಗೆ ಭೂಮಿ ನೀಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿತ್ತು.ಇದರ ಪರಿಣಾಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದು ಪ್ರತಿಪಕ್ಷ ನಾಯಕರಾಗಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿದ್ದರು.ಹೀಗಿರುವಾಗ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಸಮ್ಮಿಶ್ರ ಪಕ್ಷದ ತೆಗೆದುಕೊಂಡಿರುವ ತೀರ್ಮಾನದ ಬಗ್ಗೆ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.

      3,667 ಎಕರೆ ಭೂಮಿಯನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲು ಮುಂದಾಗಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಜಿಂದಾಲ್ ಕಳ್ಳ ಕಂಪನಿ ಎಂದು ಗೊತ್ತಿದ್ದರೂ ಭೂಮಿ ಪರಭಾರೆ ಮಾಡಲು ಮುಂದಾಗಿರುವದನ್ನು ನೋಡಿದರೆ ಸಮ್ಮಿಶ್ರ ಸರ್ಕಾರವೂ ಕಿಕ್‍ಬ್ಯಾಕ್ ಪಡೆದಿರುವ ಬಗ್ಗೆ ನಮಗೆ ಅನುಮಾನವಿದೆ ಎಂದು ಆರೋಪಿಸಿದರು.

      ಜಿಂದಾಲ್ ಕಂಪನಿಗೆ ನೀಡಿರುವ ಕ್ರೀಡಾ ಸಂಸ್ಥೆ ಕಂಠೀರವ ಕ್ರೀಡಾಂಗಣದ ಉಸ್ತುವಾರಿ ಜವಾಬ್ದಾರಿಯ ಪರವಾನಗಿಯ ಅವಧಿ ಈಗಾಗಲೇ ಮುಗಿದಿದ್ದು, ಪುನ: ಪರವಾನಗಿಯನ್ನು ನೀಡುವಂತೆ ಸರ್ಕಾರಕ್ಕೆ ಜಿಂದಾಲ್ ಸಂಸ್ಥೆ ಮನವಿ ಸಲ್ಲಿಸಿದ್ದು ಯಾವುದೇ ಕಾರಣಕ್ಕೂ ಕ್ರೀಡಾಂಗಣದ ಪರವಾನಗಿಯನ್ನು ಅವರಿಗೆ ನೀಡಬಾರದು. ಮತ್ತು ಈ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕಂಠೀರವ ಕ್ರೀಡಾಂಗಣದಲ್ಲಿಯೇ ನಡೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

      ಅರೆಬೆತ್ತಲೆಯಾಗಿ ರಸ್ತೆ ಮೇಲೆ ಉರುಳಾಟ ಮೈಸೂರು ಬ್ಯಾಂಕ್ ವೃತ್ತದ ಮಧ್ಯ ರಸ್ತೆಯ್ಲಲ್ಲಿಯೇ ಕುಳಿತ ಜಯ ಕರ್ನಾಟಕ ಸದಸ್ಯರು, ರಾಜ್ಯ ಸರ್ಕಾರದ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ, ಪ್ರತಿಭಟನಾಕಾರರು ಮತ್ತು ಪೊಲಿಸರ ನಡುವೆ ವಾಗ್ವಾದ ನಡೆಯಿತು.ಇನ್ನೂ ಸಂಚಾರ ದಟ್ಟಣೆಯೂ ಅಧಿಕವಾಗಿತ್ತು.ಕೆಲ ಸದಸ್ಯರು ರಸ್ತೆಯಲ್ಲಿ ಉರುಳುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link