ಮತ್ತೊಂದು ಮುಡಾ ಹಹರಣ ಬೆಳಕಿಗೆ….!

ಮೈಸೂರು:

    ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಮುಖ್ಯಮಂತ್ರ ಸಿದ್ದರಾಮಯ್ಯ ವಿರುದ್ಧ ವಿರೋಧ ಪಕ್ಷಗಳು ಹರಿಹಾಯುತ್ತಿವೆ. ಈ ನಡುವಲ್ಲೇ ಮುಡಾ ಮಾಜಿ ಅಧ್ಯಕ್ಷ ಹೆಚ್​.ವಿ.ರಾಜೀವ್ ಅವರು ನಡೆಸಿದ್ದಾರೆ ಎನ್ನಲಾಗಿರುವ​ ದೊಡ್ಡ ಅಕ್ರಮವೊಂದು ಬೆಳಕಿಗೆ ಬಂದಿದೆ.

    ಆಯುಕ್ತರ ಅನುಮತಿ ಇಲ್ಲದೇ ಹೆಚ್​.ವಿ.ರಾಜೀವ್ ಅವರು ಮೈಸೂರಿನ ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘದಿಂದ ಒಂದೇ ದಿನದಲ್ಲಿ 848 ನಿವೇಶನಗಳ ಖಾತೆ ಮಾಡಿಸಿಕೊಂಡಿದ್ದಾರೆಂಬ ಗಂಭೀರ ಆರೋಪವೊಂದು ಕೇಳಿ ಬಂದಿದೆ.

    ಮೈಸೂರು ಜ್ಞಾನ ಗಂಗಾ ಗೃಹ ನಿರ್ಮಾಣ ಸಹಕಾರ ಸಂಘದಿಂದ ಕೇರ್ಗಳ್ಳಿ, ನಗರ್ತಳ್ಳಿ ಮತ್ತು ಬಲ್ಲಹಳ್ಳಿ ಗ್ರಾಮದ ಒಟ್ಟು 252 ಎಕರೆ 10 ಗುಂಟೆ ಪ್ರದೇಶದಲ್ಲಿ ಬಡವಾಣೆ ನಿರ್ಮಾಣ ಮಾಡಲಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ 2018ರ ಆದೇಶದ ವಿರುದ್ಧವಾಗಿ ಬಡಾವಣೆ ನಿರ್ಮಾಣ ಮಾಡಲಾಗಿದೆ. ಜ್ಞಾನಗಂಗಾ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಎಚ್.ವಿ ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ.

    252 ಎಕರೆ ಜಾಗದ ಕೆಲವು ಸರ್ವೆ ನಂಬರ್​ಗಳು ವ್ಯಾಜ್ಯ ನ್ಯಾಯಾಲಯದಲ್ಲಿರುತ್ತೆ. ಹೀಗಾಗಿ ಸದರಿ ಬಡವಾಣೆಗಳ ನಿವೇಶನ ಹಕ್ಕುಗಳನ್ನ ಮುಡಾ ವರ್ಗಾವಣೆ ಮಾಡಬಾರದೆಂದು‌ ಆದೇಶವಿದೆ. ಹೀಗಿದ್ದರೂ ಹೆಚ್.ವಿ ರಾಜೀವ್ 848 ನಿವೇಶನಗಳನ್ನ ಒಂದೇ ದಿನದಲ್ಲಿ‌ ಮುಡಾದಿಂದ ಬಿಡುಗಡೆಗೊಳಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಆಯುಕ್ತರ ಅನುಮೊದನೆ ಇಲ್ಲದಿದ್ದರೂ ತಾಂತ್ರಿಕ ಶಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನಗಳನ್ನ ಬಿಡುಗಡೆಗೊಳಿಸಿಕೊಂಡಿದ್ದಾರೆಂಬ ಆರೋಪಗಳು ಕೇಳಿ ಬಂದಿದೆ.

    ಮುಡಾ ಆಯುಕ್ತರ ಅನುಮೋದನೆ ಇಲ್ಲದೆ ಖಾತೆ ಮಾಡಿಸಿಕೊಳ್ಳಲಾಗಿದೆ ಎಂದು ದಾಖಲೆಗಳು ಲಭ್ಯವಾಗಿವೆ. ಆಯುಕ್ತರ ಅನುಮೋದನೆ ಇಲ್ಲದಿದ್ದರೂ ತಾಂತ್ರಿಕ ಶಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಿವೇಶನ ಬಿಡುಗಡೆಗೊಳಿಸಿಕೊಂಡಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗೆ ಹಿಂದಿನ ಮುಡಾ ಆಯುಕ್ತ ನಟೇಶ್ ಪತ್ರ ಬರೆದಿರುವುದು ಬಹಿರಂಗಗೊಂಡಿದೆ.

    ಜ್ಞಾನಗಂಗ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ರಾಜೀವ್ ಅವರೇ ಅಧ್ಯಕ್ಷರಾಗಿದ್ದಾರೆ. ಹಾಗಾಗಿ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಈ ಮಧ್ಯೆ, ಬಿಜೆಪಿ ಶಾಸಕ ಶ್ರೀವಾಸ್ತ ಅವರು ಹಗರಣ ಕುರಿತು ಮಾತನಾಡಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಷ್ಟೆಲ್ಲಾ ಹಗರಣಗಳನ್ನು ಮಾಡಿ ರಕ್ಷಣೆ ಮಾಡಿಕೊಳ್ಳಲೆಂದೇ ರಾಜೀವ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಈ ಎಲ್ಲಾ ಹಗರಣಗಳಿಂದ ನಾನು ರಕ್ಷಣೆ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದಲೇ ಕಾಂಗ್ರೆಸ್‌ಗೆ ಹಾರಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಪೂರ್ಣ ಆಗದೆಯೇ ನಿವೇಶನಗಳನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಆದರೂ ಸರ್ಕಾರ ಮಾತ್ರ ಯಾವುದೇ ಕ್ರಮ ವಹಿಸಿಲ್ಲ. ಈಗಲಾದರೂ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು. ಯಾರೇ ತಪ್ಪು ಮಾಡಿದ್ದರೂ ಅವರನ್ನು ರಕ್ಷಿಸದೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

Recent Articles

spot_img

Related Stories

Share via
Copy link
Powered by Social Snap