ಅಹಮದಾಬಾದ್:
ಹೀಟ್ ಸ್ಟ್ರೋಕ್‌ನಿಂದ ಬಳಲುತ್ತಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ಬುಧವಾರ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರನ್ನು ಮಲ್ಟಿ ಸ್ಪೆಷಾಲಿಟಿ ಕೆಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಮ್ಮ ಮಾಲಿಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯವನ್ನು ವೀಕ್ಷಿಸಲು ಖಾನ್ ಅವರು ಮಂಗಳವಾರ ಅಹಮದಾಬಾದ್‌ನಲ್ಲಿದ್ದರು.
‘ನಟ ಶಾರುಖ್ ಖಾನ್ ಅವರು ಹೀಟ್ ಸ್ಟ್ರೋಕ್‌ನಿಂದ ಬಳಲುತ್ತಿರುವುದರಿಂದ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ’ ಎಂದು ಅಹಮದಾಬಾದ್ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ಓಂ ಪ್ರಕಾಶ್ ಜಾಟ್ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 45.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬುಧವಾರ 45.9 ಡಿಗ್ರಿಗೆ ಏರಿಕೆಯಾಗಿದೆ.
ಮಂಗಳವಾರ ಇಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಎಂಟು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದು, ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದೆ.
ಕೆಕೆಆರ್‌ನ ಅಧಿಕೃತ X ಖಾತೆಯಿಂದ ಹಂಚಿಕೊಂಡ ವಿಡಿಯೋಗಳು ಖಾನ್ ಅವರು ತಮ್ಮ ತಂಡದೊಂದಿಗೆ ವಿಜಯೋತ್ಸವವನ್ನು ಆಚರಿಸುತ್ತಿರುವುದನ್ನು ತೋರಿಸಿದೆ. ಅವರ ಮಕ್ಕಳಾದ ಸುಹಾನಾ ಖಾನ್ ಮತ್ತು ಅಬ್‌ರಾಮ್ ಖಾನ್ ಅವರ ಜೊತೆಯಲ್ಲಿದ್ದಾರೆ. ಖಾನ್ ಅವರು ಕ್ರೀಡಾಂಗಣದಲ್ಲಿ ಅಭಿಮಾನಿಗಳು ಮತ್ತು ಆಟಗಾರರನ್ನು ಸ್ವಾಗತಿಸಿದರು.ಭಾನುವಾರ ಚೆನ್ನೈನಲ್ಲಿ ಕೆಕೆಆರ್ ಫೈನಲ್ ಆಡಲಿದೆ.