ದಾವಣಗೆರೆ:
ಮಹಾನಗರ ಪಾಲಿಕೆಯಲ್ಲಿ ಪೌರ ಕಾರ್ಮಿಕರಾಗಿ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ 270 ಪೌರ ಕಾರ್ಮಿಕರನ್ನು ತಕ್ಷಣವೇ ಖಾಯಂ ಗೊಳಿಸಬೇಕೆಂದು ರಾಜ್ಯ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕ ಮಹಾಸಂಘದ ರಾಜ್ಯ ಉಪಾಧ್ಯಕ್ಷ ಎಲ್.ಎಂ.ಹನುಮಂತಪ್ಪ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 270 ಪೌರ ಕಾರ್ಮಿಕರ ಪೈಕಿ ಕೇವಲ 34 ಪೌರಕಾರ್ಮಿಕರನ್ನು ಖಾಯಂ ಮಾಡಿರುವುದಕ್ಕೆ ತಮ್ಮ ವಿರೋಧವಿದೆ ಎಂದು ಆರೋಪಿಸಿದರು.
ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹಾಗೂ ಪಿಎಫ್ ಹಾಗೂ ಇಎಸ್‍ಐ ಕಡಿತಗೊಳ್ಳುವ ಎಲ್ಲಾ ಕಾರ್ಮಿಕರಿಗೂ ಖಾಯಂ ಮಾಡುವುದಾಗಿ ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ನೇತೃತ್ವದ ಸರ್ಕಾರ ಭರವಸೆ ನೀಡಿತ್ತು. ಅಲ್ಲದೆ, ಈ ಕುರಿತು ಕ್ಯಾಬಿನೆಟ್‍ನಲ್ಲೂ ಸಹ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈಗ ಆ ನಿರ್ಣಯದಂತೆ ನಡೆದುಕೊಳ್ಳುತ್ತಿಲ್ಲ. ಸಮ್ಮಿಶ್ರ ಸರಕಾರದ ಭಾಗವಾಗಿರುವ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಳೆದ 10ರಿಂದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಾಲಿಕೆ 270 ಪೌರ ನೌಕರರ ಸೇವೆಯನ್ನು ಗಮನಿಸಿ, ಯಾವುದೇ ವಯಸ್ಸನ್ನು ನೋಡದೆ ಖಾಯಂ ಮಾಡಬೇಕು. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಆಗ್ರಹಿಸಿದರು.
ಪೌರ ಕಾರ್ಮಿಕರನ್ನು ಖಾಯಂ ಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ಪ್ರಯೋಜವಾಗಿಲ್ಲ. ಆದ್ದರಿಂದ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯನ್ನು ವಿರೋಧಿಸಿ, ಎಲ್ಲಾ ಗುತ್ತಿಗೆ ಪೌರ ಕಾರ್ಮಿಕರ ಖಾಯಂಗೆ ಒತ್ತಾಯಿಸಿ ಫೆ.2ರಂದು ಪಾಲಿಕೆಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೌರ ಹಾಗೂ ಕೊಳಚೆ ನಿರ್ಮೂಲನಾ ಗುತ್ತಿಗೆ ಸಫಾಯಿ ಕರ್ಮಚಾರಿಗಳ ಸಂಘದ ಅಧ್ಯಕ್ಷ ಎಲ್.ಡಿ.ಗೋಣೆಪ್ಪ, ಹೆಚ್.ಸಿ.ರಾಮಚಂದ್ರಪ್ಪ, ಎಸ್.ಸಂದೀಪ್, ರವಿವರ್ಧನ್, ಮೂರ್ತಿ ಆರ್, ಎಸ್.ರವಿಕುಮಾರ್, ಶಿವರಾಜ್ ಎನ್, ಓಮೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ