ಬೆಂಗಳೂರು:
ರಾಜ್ಯ ಸರ್ಕಾರ ಕೋವಿಡ್-19 ಮೂರನೇ ಅಲೆಯನ್ನ ತಡೆಯಲು ವೀಕೆಂಡ್ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಗೊಳಿಸಿದೆ. ಕರ್ನಾಟಕ ಸರ್ಕಾರವು ಈ ತಿಂಗಳ ಆರಂಭದಲ್ಲಿ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಅನ್ನು ಪುನಃ ಜಾರಿಗೊಳಿಸಿತು.
ಮಾರ್ಗಸೂಚಿಗಳ ಪ್ರಕಾರ, ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 10 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿಯಲ್ಲಿರುತ್ತದೆ. ಆದರೆ ಸರ್ಕಾರದ ಈ ನಿರ್ಧಾರದ ವಿರುದ್ಧ ಬಿಜೆಪಿ ಶಾಸಕರು ಹಾಗೂ ಸಂಸದರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿಯಲ್ಲಿಯೇ ಅಸಮಾಧಾನದ ಬೆಂಕಿ ಹೊಗೆಯಾಡುತ್ತಿದೆ ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಹೋಟೆಲ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಸೇರಿದಂತೆ ಹಲವು ಉದ್ಯಮಿಗಳು ನಿರಂತರವಾಗಿ ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರಿಗೆ ಸಂಪರ್ಕದಲ್ಲಿರುವ ಶಾಸಕರು ಹಾಗೂ ಸಂಸದರಿಗೆ, ವಾರಾಂತ್ಯ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಜಾರಿಯಿಂದಾಗಿ ಆರ್ಥಿಕ ಹೊಡೆತ ಉಂಟಾಗಿದೆ. ಸರ್ಕಾರ ಇವೆರಡು ನಿರ್ಬಂಧನೆಗಳನ್ನ ಕೂಡಲೇ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ.
ಕರೋನಾ ಮೂರನೇ ಅಲೆ ಹಾಗೂ ಒಮಿಕ್ರಾನ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯದಲ್ಲಿ ಪ್ರತಿನಿತ್ಯ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಆದರೆ ಇದರಿಂದ ತಮ್ಮ ವ್ಯಾಪಾರ- ವ್ಯವಹಾರಗಳಿಗೆ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿರುವ ಹೋಟೆಲ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳು ರಾತ್ರಿ ಕರ್ಫ್ಯೂ ರಾತ್ರಿ 10 ರಿಂದ ಆರಂಭವಾಗುವ ಬದಲು ರಾತ್ರಿ 11ಕ್ಕೆ ಪ್ರಾರಂಭವಾಗಲಿ. ಇದಲ್ಲದೆ, ವಾರಾಂತ್ಯ ಲಾಕ್ ಡೌನ್ ರದ್ದು ಪಡೆಸಿ, ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಸಿ, ಇತರೆ ದಿನದಂತೆ ವಹಿವಾಟು ನಡೆಸಲು ಅವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.
ಕೋವಿಡ್ ಮೊದಲ ಹಾಗೂ ಎರಡನೆಯ ಅಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಗಳು, ಚೇತರಿಕೆ ಕಾಣದಂತೆ ಒದ್ದಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಜನರಿಗೆ ಯಾವುದೇ ತೊಂದರೆ ಆಗದ ಹಾಗೆ ಕೋವಿಡ್ ಮಾರ್ಗಸೂಚಿಗಳನ್ನ ಜಾರಿಗೊಳಿಸಿ ಎಂದು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಜನ ಜೀವ ಉಳಿಸಿಕೊಂಡಿದ್ದಾರೆ. ಜೀವನ ದುಸ್ಥರವಾಗಿದೆ-ಸಂಸದ ಪ್ರತಾಪ್ ಸಿಂಹ:
ಜನ ಜೀವ ಉಳಿಸಿಕೊಂಡಿದ್ದಾರೆ. ಜೀವನ ದುಸ್ಥರವಾಗಿದೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಕಠಿಣ ನಿಯಮ ಬೇಡ. ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸಿ ಸೋಂಕು ಹರಡದಂತೆ ಎಚ್ಚರ ವಹಿಸಿ. 1 ಮತ್ತು 2ನೇ ಅಲೆಯಲ್ಲಿ ಆಸ್ಪತ್ರೆ, ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇತ್ತು. ಈಗ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
ಅದಾಗ್ಯೂ, ಕರೋನಾ ತಡೆಯುವ ನಿಟ್ಟಿನಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ರೀತಿಯ ಕಠಿಣ ನಿಯಮಗಳನ್ನು ಜಾರಿಗೆ ತರುವ ಮೂಲಕ ಕೆಳ ಮತ್ತು ಮಧ್ಯಮವರ್ಗದ ಜನರನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ. ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚಿಂತಿಸಿ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗೋ ರೀತಿಯಲ್ಲಿ ಸೂಕ್ತ ಕ್ರಮಕೈಗೊಳ್ಳಿ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಪಕ್ಷದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
2023 ರ ವಿಧಾನಸಭಾ ಚುನಾವಣೆ ಮೇಲೆ ಎಫೆಕ್ಟ್ಟ್?
ಇದಲ್ಲದೆ, 2023ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ, ಲಾಕ್ ಡೌನ್ ಹೇರಿದರೆ ಮಧ್ಯಮ ವರ್ಗದ ಜನರ ಮತ ಕಳೆದುಕೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ರಾಜ್ಯ ಬಿಜೆಪಿ ವಿರುದ್ದ ನೆಗೆಟಿವ್ ಮಾತುಗಳು ಕೇಳಿಬರುತ್ತಿವೆ,
ಇದರ ಮೇಲೆ ಲಾಕ್ ಡೌನ್ ನಂತಹ ನಿಯಮ ಜಾರಿಗೊಳಿಸುವುದರಿಂದ ಮುಂದಿನ ವಿಧಾನ ಸಭೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂಬ ಮಾತನ್ನ ಆಂತರಿಕವಾಗಿ ಪಕ್ಷದ ವರಿಷ್ಠರಿಗೆ ಶಾಸಕರು ಹಾಗೂ ಸಂಸದರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ, ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಲಾಕ್‌ಡೌನ್ ಹೇರಲು ಮುಂದಾಗುತ್ತಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ. ಮಂಗಳವಾರ ಕೋವಿಡ್ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಜ್ಞರನ್ನು ಉಲ್ಲೇಖಿಸಿ,
ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಪ್ರಕರಣಗಳು ಕಡಿಮೆಯಾಗಬಹುದು ಎಂದು ಪ್ರತಿಪಾದಿಸಿದರು. ಇದಲ್ಲದೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮತ್ತೊಂದು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಈ ಸಭೆಯಲ್ಲಿ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ