ನವದೆಹಲಿ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ ಗಾಹ್ ಎಂಬ ಹಳ್ಳಿಯಲ್ಲಿ 26 ಸೆಪ್ಟೆಂಬರ್ 1932 ರಂದು ಜನಿಸಿದರು. ಬಡತನದ ಹಿನ್ನೆಲೆಯ ಕುಟುಂಬದಲ್ಲಿ ಜನಿಸಿದ ಡಾ. ಸಿಂಗ್ ಶಿಕ್ಷಣ, ಅರ್ಥಶಾಸ್ತ್ರ ಮತ್ತು ರಾಜಕೀಯದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡಿದ್ದಾರೆ. 1991 ರಲ್ಲಿ ಆರ್ಥಿಕ ಸುಧಾರಣೆಗಳನ್ನು ಪರಿಚಯಿಸುವ ಮೂಲಕ ಭಾರತದ ಆರ್ಥಿಕತೆ ಹೊಸ ಮಗ್ಗುಲಿಗೆ ಹೊರಳುವಂತೆ ಮಾಡಿದರು.
ಬಡತನದ ಹಿನ್ನೆಲೆಯಿಂದ ಬಂದು ದೇಶದ ಅರ್ಥ ವ್ಯವಸ್ಥೆ ಸುಧಾರಣೆಯಲ್ಲಿ ಮಹತ್ವದ ಕೊಡುಗೆ ನೀಡಿದ, 10 ವರ್ಷ ಕಾಲ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ನಾಯಕನ ಕುರಿತಾದ ಕೆಲವು ಅಚ್ಚರಿಯ ಸಂಗತಿಗಳು ಇಲ್ಲಿವೆ. ಮನಮೋಹನ್ ಸಿಂಗ್ ಬಾಲ್ಯದಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಗಾಹ್ ಗ್ರಾಮದಲ್ಲಿ ವಾಸಿಸಿದ್ದರು. ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇರಲಿಲ್ಲ. ಗ್ರಾಮದಲ್ಲಿ ಶಾಲೆಯೂ ಇರಲಿಲ್ಲ. ದೂರದ ಶಾಲೆಗೆ ಹೋಗಲು ಮನಮೋಹನ್ ಸಿಂಗ್ ಬರಿಗಾಲಲ್ಲಿ ಮೈಲುಗಟ್ಟಲೆ ನಡೆದುಕೊಂಡು ಹೋಗುತ್ತಿದ್ದರು. ಅವರ ಮನೆಗೆ ವಿದ್ಯುತ್ ಸಂಪರ್ಕ ಸಹ ಇರಲಿಲ್ಲ. ಹೀಗಾಗಿ ಬೀದಿ ದೀಪದ ಕೆಳಗೆ ಕೂತು ಸಿಂಗ್ ಓದುತ್ತಿದ್ದರು.
ಮನಮೋಹನ್ ಸಿಂಗ್ ತಂದೆ-ತಾಯಿ ಗುರುಮುಖ್ ಸಿಂಗ್ ಮತ್ತು ಅಮೃತ್ ಕೌರ್. ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಮನಮೋಹನ್ ಸಿಂಗ್, ಅಜ್ಜಿ ಮಡಿಲಲ್ಲೇ ಬಾಲ್ಯ ಕಳೆದರು. ಮನಮೋಹನ್ ಸಿಂಗ್ಗೆ 13 ವರ್ಷ ತುಂಬುತ್ತಿದ್ದಂತೆಯೇ, ಕುಟುಂಬ ಭಾರತಕ್ಕೆ ವಲಸೆ ಬಂದಿತು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ, ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದ, ಅಂದರೆ ಪಾಕ್‌ನ ಗಾಹ್‌ನಿಂದ, ಅಮೃತಸರಕ್ಕೆ ವಲಸೆ ಬಂತು.
ಮನಮೋಹನ್ ಸಿಂಗ್ ವಿದ್ಯಾರ್ಥಿಯಾಗಿದ್ದಾಗ ಹೆಚ್ಚು ನಾಚಿಕೆಪಡುತ್ತಿದ್ದರಂತೆ! ಪ್ರತಿಷ್ಠಿತ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಸಮಯದಲ್ಲೂ ಮನಮೋಹನ್ ಶಾಂತ ಮತ್ತು ಸಂಯಮದ ವ್ಯಕ್ತಿಯಾಗಿದ್ದರು. ಕೇಂಬ್ರಿಡ್ಜ್ ಅಲುಮ್ನಿ ಮ್ಯಾಗಜೀನ್‌ಗಾಗಿ ಬಿಬಿಸಿಯ ಮಾರ್ಕ್ ಟುಲ್ಲಿಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳನ್ನು ಅವರೇ ಬಹಿರಂಗಪಡಿಸಿದ್ದರು. ಮನಮೋಹನ್ ಸಿಂಗ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿದ್ದಾಗ, ಅವರು ತಮ್ಮ ಉದ್ದನೆಯ ಕೂದಲನ್ನು ತೊಳೆಯಲು ನಾಚಿಕೆಪಡುತ್ತಿದ್ದರಂತೆ. ಅದಕ್ಕಾಗಿಯೇ, ಗೌಪ್ಯತೆ ಕಾಪಾಡಲು ಬೆಳಿಗ್ಗೆ 4 ಗಂಟೆಗೆ ತಣ್ಣೀರಿನಿಂದ ಸ್ನಾನ ಮಾಡುತ್ತಿದ್ದರಂತೆ.
ಮನಮೋಹನ್ ಸಿಂಗ್ ಹಿಂದಿ ಮಾತನಾಡಬಲ್ಲರು. ಆದರೆ, ಹಿಂದಿ ಭಾಷೆಯ ಲಿಪಿಯನ್ನು ಓದಲು ಅವರಿಂದ ಆಗುತ್ತಿರಲಿಲ್ಲ. ಅದಕ್ಕಾಗಿಯೇ ಪ್ರಧಾನಿಯಾಗಿದ್ದಾಗ ಅವರ ಭಾಷಣಗಳನ್ನು ಉರ್ದುವಿನಲ್ಲಿ ಬರೆಯಲಾಗುತ್ತಿತ್ತು. ಏಕೆಂದರೆ ಉರ್ದುವಿನಲ್ಲಿ ಅವರು ಪ್ರವೀಣರಾಗಿದ್ದರು.